ಸಿಇಟಿ : ಮೇ 21ರ ವರೆಗೆ ಸರಕಾರಿ ಪಿಯು ಕಾಲೇಜಿನಲ್ಲಿ ದಾಖಲೆ ಪರಿಶೀಲನೆ
ಬೆಂಗಳೂರು : ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ, ಇನ್ನೂ ದಾಖಲೆ ಪರಿಶೀಲನೆ ಮಾಡಿಕೊಳ್ಳದ ಅಭ್ಯರ್ಥಿಗಳು ಅಗತ್ಯ ಮೂಲ ದಾಖಲೆಗಳೊಂದಿಗೆ ಹತ್ತಿರದ ಸರಕಾರಿ ಪಿಯು ಕಾಲೇಜುಗಳಿಗೆ ಮೇ 21ರೊಳಗೆ ಹೋಗಿ ಪರಿಶೀಲನೆ ಮಾಡಿಸಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿದೆ.
ಅಭ್ಯರ್ಥಿಗಳ ಕ್ಲೇಮ್ಸ್ ಸರ್ಟಿಫಿಕೇಟ್‍ನಲ್ಲಿ ‘ಕ್ಲೇಮ್ಸ್ ನಾಟ್ ವೆರಿಫೈಯ್ಡ್’ ಎಂದು ಮುದ್ರಿತವಾಗಿದ್ದಲ್ಲಿ, ಅಂತಹವರು ಮಾತ್ರ ಸರಕಾರಿ ಪಿಯು ಕಾಲೇಜಿಗೆ ಹೋಗಬೇಕು. ಈ ಹಿಂದೆ ಅವಕಾಶ ನೀಡಿದ್ದಾಗಲೂ ಕೆಲವು ಅಭ್ಯರ್ಥಿಗಳು ತಮ್ಮ ಕಾಲೇಜುಗಳಲ್ಲಿ ದಾಖಲೆ ಪರಿಶೀಲನೆ ಮಾಡಿಕೊಂಡಿರುವುದಿಲ್ಲ. ಹೀಗಾಗಿ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಕ್ಲೇಮ್ಡ್ ಮತ್ತು ವೆರಿಫೈಯ್ಡ್ ಎಂದು ಅರ್ಜಿಯಲ್ಲಿ ಮುದ್ರಿತವಾಗಿರುವವರು ದಾಖಲೆ ಪರಿಶೀಲನೆಗೆ ಹೋಗುವ ಅಗತ್ಯ ಇರುವುದಿಲ್ಲ.
ಕನ್ನಡ ಮಾಧ್ಯಮ ವ್ಯಾಸಂಗ, ಗ್ರಾಮೀಣ ವ್ಯಾಸಂಗ, ಭಾಷಾ ಅಲ್ಪಸಂಖ್ಯಾತ, ಧಾರ್ಮಿಕ ಅಲ್ಪಸಂಖ್ಯಾತ ಮೀಸಲಾತಿ ಕ್ಲೇಮ್ ಮಾಡಿ, ಕ್ಲೇಮ್ಸ್ ಸರ್ಟಿಫಿಕೇಟ್ ನಲ್ಲಿ ನಾಟ್ ವೆರಿಫೈಯ್ಡ್ ಎಂದು ಮುದ್ರಿತವಾಗಿರುವವರು ಮಾತ್ರ ಕಾಲೇಜುಗಳಿಗೆ ಹೋಗಿ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.