ಬೆಂಗಳೂರು : ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಸಂಚಾರ ದಟ್ಟಣೆಗೆ ದೀರ್ಘಕಾಲೀನ ಪರಿಹಾರ ನೀಡುವ ಉದ್ದೇಶದ ಸುಮಾರು 436 ಕೋಟಿ ರೂ. ವೆಚ್ಚದ ಸಮಗ್ರ ಸಂಚಾರ ಮೂಲಸೌಕರ್ಯ ಯೋಜನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬುಧವಾರ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಐಒಸಿ ಜಂಕ್ಷನ್‍ನ ಸಂಚಾರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸ್ಥಳೀಯ ಶಾಸಕರು ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಸುಮಾರು 20 ಬಾರಿ ನನ್ನ ಗಮನ ಸೆಳೆದು, ದೊಡ್ಡ ಮಟ್ಟದ ಯೋಜನೆ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿದ್ದರು ಎಂದು ಹೇಳಿದರು.

ಇಂದು ಅದರ ಶಿಲಾನ್ಯಾಸ ನೆರವೇರಿಸಿದ್ದೇವೆ. ಪ್ರತಿಯೊಬ್ಬ ನಾಗರಿಕನ ಸಮಯಕ್ಕೂ ಮೌಲ್ಯವಿದೆ. ಜನರಿಗೆ ಉತ್ತಮ ಮೂಲಸೌಕರ್ಯ ಒದಗಿಸುವ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಐಒಸಿ ಜಂಕ್ಷನ್‍ನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಮುಂದಿನ 25 ವರ್ಷಗಳ ಸಂಚಾರ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ನಾಲ್ಕು ಪಥದ ಎಲಿವೇಟೆಡ್ ರೋಟರಿ ಫ್ಲೈಓವರ್ ಅನ್ನು ಆಧುನಿಕ ಸ್ಟೀಲ್ ಬಾಕ್ಸ್ ಗರ್ಡರ್ ತಂತ್ರಜ್ಞಾನದಲ್ಲಿ ನಿರ್ಮಿಸಲಾಗುತ್ತಿದ್ದು, ಗಂಟೆಗೆ ಸುಮಾರು 4,100 ಪ್ರಯಾಣಿಕರ ಕಾರುಗಳ ಸಂಚಾರ ನಿರ್ವಹಿಸುವ ಸಾಮಥ್ರ್ಯ ಹೊಂದಿರಲಿದೆ. ಬಾಣಸವಾಡಿ ರಸ್ತೆ, ಕಮ್ಮನಹಳ್ಳಿ ರಸ್ತೆ, ಮಾರುತಿ ಸೇವಾನಗರ ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆ-ಇಂದಿರಾನಗರ-ಬೈಯಪ್ಪನಹಳ್ಳಿ ಟರ್ಮಿನಲ್ ದಿಕ್ಕುಗಳಿಗೆ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ರ್ಯಾಂಪ್‍ಗಳನ್ನು ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ವ್ಯವಸ್ಥೆಯಿಂದ ನಾಲ್ಕೂ ದಿಕ್ಕುಗಳಿಂದ ಬರುವ ವಾಹನಗಳು ಜಂಕ್ಷನ್‍ನಲ್ಲಿ ಅನಗತ್ಯವಾಗಿ ಕಾಯದೆ ಸುಗಮವಾಗಿ ಸಂಚರಿಸಲು ಸಾಧ್ಯವಾಗಲಿದೆ. ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 136ಎ ಬಳಿ ರೈಲು ಸಂಚಾರದ ವೇಳೆ ವಾಹನಗಳು ದೀರ್ಘಕಾಲ ಕಾಯುವುದನ್ನು ತಪ್ಪಿಸಲು, ಈಗಿರುವ ಎರಡು ಪಥದ ರೈಲ್ವೆ ಮೇಲ್ಸೇತುವೆಗೆ ಹೆಚ್ಚುವರಿಯಾಗಿ ನಾಲ್ಕು ಪಥದ ಹೊಸ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಪಾದಚಾರಿಗಳ ಸುರಕ್ಷತೆ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‍ಗೆ ಸುಲಭ ಸಂಪರ್ಕಕ್ಕಾಗಿ ರೈಲ್ವೆ ಹಳಿಗಳ ಕೆಳಗೆ ಪಾದಚಾರಿ ಅಂಡರ್‍ಪಾಸ್ ನಿರ್ಮಾಣವನ್ನೂ ಯೋಜಿಸಲಾಗಿದೆ. ಈ ಸಮಗ್ರ ಯೋಜನೆಯನ್ನು ಬೆಂಗಳೂರು ಸ್ಮಾರ್ಟ್ ಮೂಲಸೌಕರ್ಯ ನಿಯಮಿತ(ಬಿ-ಸ್ಮೈಲ್) ಮೂಲಕ ‘ಇಪಿಸಿ ಮಾದರಿ(ವಿನ್ಯಾಸ, ಖರೀದಿ ಮತ್ತು ನಿರ್ಮಾಣ)ಯಲ್ಲಿ ಅನುಷ್ಠಾ ನಗೊಳಿಸಲಾಗುತ್ತಿದ್ದು, 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಇಂಧನ ಸಚಿವ ಕೆ.ಜೆ.ಜಾರ್ಜ್, ಶಾಸಕ ಎ.ಸಿ.ಶ್ರೀನಿವಾಸ್, ಯುವ ಮುಖಂಡ ರಾಣಾ ಜಾರ್ಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

ಲಕ್ಷಾಂತರ ವಾಹನ ಸವಾರರಿಗೆ ನೇರ ಅನುಕೂಲ: ಕೆ.ಜೆ.ಜಾರ್ಜ್

ಮಾರುತಿ ಸೇವಾನಗರ ಮುಖ್ಯರಸ್ತೆಯ ಐಒಸಿ ಜಂಕ್ಷನ್‍ನಲ್ಲಿ ಬೆಂಗಳೂರಿನ ಮೊದಲ ಎಲಿವೇಟೆಡ್ ವೃತ್ತಾಕಾರದ ರೋಟರಿ ಫ್ಲೈಓವರ್ ಹಾಗೂ ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಹೆಚ್ಚುವರಿ ನಾಲ್ಕು ಪಥದ ರೈಲ್ವೆ ಮೇಲ್ಸೇತುವೆ ಸೇರಿದಂತೆ ಹಲವು ಕಾಮಗಾರಿಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತಿದೆ. ಸರ್ವಜ್ಞನಗರ ಮಾತ್ರವಲ್ಲದೆ ವಿಮಾನ ನಿಲ್ದಾಣ, ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್ ಹಾಗೂ ಪ್ರಮುಖ ಸಂಪರ್ಕ ರಸ್ತೆಗಳನ್ನು ಬಳಸುವ ಲಕ್ಷಾಂತರ ಜನರಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ.

ಕೆ.ಜೆ.ಜಾರ್ಜ್, ಇಂಧನ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor