ಯಾವುದೇ ಧಾರ್ಮಿಕ ವಸ್ತ್ರಕ್ಕೆ ನಿರ್ಬಂಧ ವಿಧಿಸಿಲ್ಲ, ಆದರೆ ಹಿಜಾಬ್ ಗೆ ಅವಕಾಶವಿಲ್ಲ: ಪ್ರಿಯಾಂಕ್ ಖರ್ಗೆ

ನಾಳೆ(ಆ.2) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಲಿಖಿತ ಪರೀಕ್ಷೆ

Update: 2026-08-01 20:09 IST

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆ.2ರಂದು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ನಡೆಸುತ್ತಿದ್ದು, ಅಭ್ಯರ್ಥಿಗಳ ಯಾವುದೇ ಧಾರ್ಮಿಕ ವಸ್ತ್ರಕ್ಕೆ ನಿರ್ಬಂಧ ವಿಧಿಸಿಲ್ಲ. ಆದರೆ ಹಿಜಾಬ್ ಗೆ ಅವಕಾಶವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಶನಿವಾರ ವಿಧಾನಸೌಧದ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳು ಜನಿವಾರ, ಶಿವದಾರ/ಲಿಂಗ, ಉಡದಾರ, ತಾಯತ, ಕೈಗೆ ಕಟ್ಟುವ ಧಾರ್ಮಿಕ ದಾರಗಳು, ತಾಳಿ, ರುದ್ರಾಕ್ಷಿ, ಮಂಗಳಸೂತ್ರ, ಬಳೆಗಳು, ಉಂಗುರ, ಕುಂಕುಮ/ಹಣೆಬಟ್ಟು ಸೇರಿದಂತೆ ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಆಭರಣಗಳು ಮತ್ತು ಧಾರ್ಮಿಕ ಚಿಹ್ನೆಗಳನ್ನು ಧರಿಸಲು ಯಾವುದೇ ನಿರ್ಬಂಧವಿಲ್ಲ. ಆದರೆ ಹಿಜಾಬ್ ಧರಿಸಿ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡುವುದಿಲ್ಲ ಎಂದರು.

ಕೆಲವು ಸಮುದಾಯದ ವಿದ್ಯಾರ್ಥಿಗಳು ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು ಪರೀಕ್ಷೆ ಬರೆಯಲು ಇಚ್ಚಿಸಿದಲ್ಲಿ ಪರೀಕ್ಷೆ ಆರಂಭಕ್ಕೆ 2:30 ಗಂಟೆ ಮೊದಲು ಪರೀಕ್ಷಾ ಕೇಂದ್ರದ ವಸ್ತ್ರ ಸಂಹಿತೆ ಅಧಿಕಾರಿ ಮುಂದೆ ಹಾಜರಾಗಬೇಕು. ವಸ್ತ್ರಸಂಹಿತೆ ಅಧಿಕಾರಿ ಪ್ರತ್ಯೇಕ ಕೊಠಡಿಯಲ್ಲಿ ನಿಯಮಾನುಸಾರ ತಪಾಸಣೆಗೆ ಒಳಪಡಿಸಿ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡುತ್ತಾರೆ ಎಂದು ಅವರು ತಿಳಿಸಿದರು.

ಅಭ್ಯರ್ಥಿಗಳು ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಸಾಧನಗಳು, ಕ್ಯಾಲ್ಕುಲೇಟರ್, ಪೆನ್ ಡ್ರೈವ್, ಪುಸ್ತಕಗಳು, ಬ್ಯಾಗ್ ಸೇರಿದಂತೆ ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಬಾರದು. ಪರೀಕ್ಷೆಯ ಪಾವಿತ್ರ‍್ಯ ಹಾಗೂ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಅಭ್ಯರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕ, ನ್ಯಾಯಸಮ್ಮತ ಹಾಗೂ ಸುಗಮವಾಗಿ ನಡೆಸಲು ಸರಕಾರ ಬದ್ಧವಾಗಿದೆ. ಯಾವುದೇ ಅಕ್ರಮ ಅಥವಾ ಲೋಪಗಳಿಗೆ ಆಸ್ಪದ ನೀಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಪರೀಕ್ಷಾ ಕೇಂದ್ರಗಳಲ್ಲಿ ಅನುಸರಿಸಬೇಕಾದ ವಸ್ತ್ರಸಂಹಿತೆ ಹಾಗೂ ತರಬಹುದಾದ ಮತ್ತು ನಿಷೇಧಿತ ವಸ್ತುಗಳ ಕುರಿತು ಈಗಾಗಲೇ ಅಭ್ಯರ್ಥಿಗಳ ಹಾಲ್ ಟಿಕೆಟ್‌ನಲ್ಲಿ ಸ್ಪಷ್ಟ ಮಾಹಿತಿಯನ್ನು ನೀಡಲಾಗಿದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಈ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಪರೀಕ್ಷಾ ಪ್ರಕ್ರಿಯೆಗೆ ಸಹಕರಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.

ಸಾಮಾಜಿಕ ಜಾಲತಾಣಗಳು ಅಥವಾ ಇತರೆ ಮೂಲಗಳಲ್ಲಿ ಹರಿದಾಡುವ ಸುಳ್ಳು ಸುದ್ದಿ ಹಾಗೂ ವದಂತಿಗಳಿಗೆ ಅಭ್ಯರ್ಥಿಗಳು ಕಿವಿಗೊಡಬಾರದು. ಸರಕಾರ ಮತ್ತು ನೇಮಕಾತಿ ಪ್ರಾಧಿಕಾರ ಹೊರಡಿಸಿರುವ ಅಧಿಕೃತ ಮಾಹಿತಿಯನ್ನಷ್ಟೇ ನಂಬುಬೇಕು. ಎಲ್ಲ ಉದ್ಯೋಗಾಕಾಂಕ್ಷಿಗಳು ಯಾವುದೇ ಗೊಂದಲಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಅವರು ತಿಳಿಸಿದರು.

ನಿರ್ಲಕ್ಷ್ಯ ಕಂಡುಬಂದರೆ ಕ್ರಮ: ಐವರು ಪರೀಕ್ಷಾರ್ಥಿಗಳ ಮುಂದೆ ಪ್ರಶ್ನೆ ಪತ್ರಿಕೆಯ ಮುದ್ರೆಯನ್ನು ತೆರವು ಮಾಡಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಹಾಕಲಾಗುವುದು. ಅಧಿಕಾರಿಗಳ ಮೊಬೈಲ್‌ಗೂ ನಿಷೇಧ ಹೇರಲಾಗಿದೆ. ಸಾಮಾಜಿಕ ಜಾಲತಾಣಗಳ ಮಾನಿಟರ್ ಮಾಡಲಾಗುವುದು. ಹಿಂದಿನ ಆರೋಪಿಗಳು, ಅನುಮಾನಾಸ್ಪದ ವ್ಯಕ್ತಿಗಳು, ಕೋಚಿಂಗ್ ಸೆಂಟರ್ ಮೇಲೆ ನಿಗಾ ವಹಿಸಲಾಗಿದ್ದು, ನಿರ್ಲಕ್ಷ್ಯ ಕಂಡುಬಂದರೆ ಕ್ರಮ ಖಚಿತ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹಾಗೂ ಪೊಲೀಸ್ ಇಲಾಖೆಯ ಎಡಿಜಿಪಿ (ನೇಮಕಾತಿ) ಉಮೇಶ್ ಕುಮಾರ್ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News