ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ: ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಭದ್ರತೆ
Update: 2026-08-01 23:02 IST
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ರಾಜ್ಯದ ಒಟ್ಟು 884 ಪರೀಕ್ಷಾ ಕೇಂದ್ರಗಳಲ್ಲಿ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗೆ ನಾಳೆ(ಆ.2)ಲಿಖಿತ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಉಳಿಕ ಮೂಲ ವೃಂದದ 3,395 ಹುದ್ದೆ ಹಾಗೂ ಕಲ್ಯಾಣ ಕರ್ನಾಟಕ ವೃಂದದ 596 ಹುದ್ದೆ ಸೇರಿ ಒಟ್ಟು 3,991 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಉಳಿಕ ಮೂಲ ವೃಂದದ 3,77,861 ಹಾಗೂ ಕಲ್ಯಾಣ ಕರ್ನಾಟಕ ವೃಂದದ 76,684 ಮಂದಿ ಸೇರಿ ರಾಜ್ಯಾದ್ಯಂತ ಒಟ್ಟು 4,54,532 ಮಂದಿ ಪರೀಕ್ಷೆ ಬರೆಯುತ್ತಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.