ಕೊಡಗು ಜಿಲ್ಲೆಯಲ್ಲಿ ಅಬ್ಬರದ ಮಳೆ; ಕೃಷಿಕರಲ್ಲಿ ಸಂತಸ
ಹಾರಂಗಿ ಜಲಾಶಯ
ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಆರಂಭವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿಕರಲ್ಲಿ ಹಾಗೂ ಜನರಲ್ಲಿ ಸಂತಸ ತಂದಿದೆ.
ಈ ಬಾರಿ ಎಲ್ -ನಿನೋ ಪರಿಣಾಮದಿಂದ ವಾಡಿಕೆಗಿಂದ ಕಡಿಮೆ ಮಳೆ ಆಗಲಿದೆ ಎಂದು ಹೇಳಲಾಗಿತ್ತು. ಅದರಂತೆ ಜೂನ್ ಮತ್ತು ಜುಲೈ ಮೂರನೇ ವಾರದವರೆಗೂ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಸದ್ಯ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಎಲ್ಲರಲ್ಲಿ ಆಶಾಭಾವನೆ ಮೂಡಿಸಿದೆ.
ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಭರ್ತಿಯಾಗಿ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಕಳೆದ 2019 ರಿಂದ 2026 ರವರೆಗೆ ತಿಂಗಳವಾರು ಸರಾಸರಿ ವಾಡಿಕೆ ಮಳೆ ಪ್ರಮಾಣವನ್ನು ಗಮನಿಸಿದಾಗ ಈ ಬಾರಿ ಕಡಿಮೆ ಮಳೆಯಾಗಿರುವುದು ಕಂಡು ಬರುತ್ತದೆ.
ಜನವರಿಯಿಂದ ಜುಲೈ ಅಂತ್ಯದವರೆಗೆ ತಿಂಗಳುವಾರು ವಾಡಿಕೆ ಮಳೆ ಪ್ರಮಾಣ ಗಮನಿಸಿದಾಗ ಜುಲೈ ತಿಂಗಳಲ್ಲಿ ವಾಡಿಕೆ ಮಳೆ 859 ಮಿ.ಮೀ.ಗಳಾಗಿದ್ದು, ಈ ಬಾರಿ ಜುಲೈ ತಿಂಗಳಲ್ಲಿ 599.4 ಮಿ.ಮೀ. ಮಳೆಯಾಗಿದೆ.
ಒಟ್ಟಾರೆ ಕಳೆದ 2018 ರಿಂದ 2025 ರವರೆಗೂ ಮಳೆಯ ಪ್ರಮಾಣವನ್ನು ಗಮನಿಸಿದಾಗ ಜುಲೈ ತಿಂಗಳಲ್ಲಿ ಸಾಮಾನ್ಯ ಮಳೆಯಾಗಿ, ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿರುವುದು ತಿಳಿದುಬರುತ್ತದೆ.
ಜಿಲ್ಲೆಯ ಭಾಗಮಂಡಲ, ಶಾಂತಳ್ಳಿ, ಸೋಮವಾರಪೇಟೆ, ಸಂಪಾಜೆ, ಮಡಿಕೇರಿ, ಶ್ರೀಮಂಗಲ, ನಾಪೋಕ್ಲು, ಸುಂಟಿಕೊಪ್ಪ, ಕೊಡ್ಲಿಪೇಟೆ, ವಿರಾಜಪೇಟೆ, ಅಮ್ಮತ್ತಿ, ಮತ್ತಿತರ ಕಡೆಗಳಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಹೆಚ್ಚಿನ ಮಳೆಯಾಗಿರುವುದು ಕಂಡು ಬಂದಿದೆ.
ಕೃಷಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಭತ್ತ ನಾಟಿ ಮಾಡುವ ಗುರಿ ಹೊಂದಲಾಗಿದ್ದು, ಇದುವರೆಗೆ 400 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಆಗಿದ್ದು, ಆಗಸ್ಟ್ ಅಂತ್ಯದವರೆಗೂ ಭತ್ತ ನಾಟಿ ಕಾರ್ಯ ನಡೆಯಲಿದೆ. ಹಾಗೆಯೇ ಮುಸುಕಿನ ಜೋಳ ಭಿತ್ತನೆ ಕಾರ್ಯವು 1500 ಹೆಕ್ಟೇರ್ ಪ್ರದೇಶದಲ್ಲಿ ಭಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ಮಾಹಿತಿ ನೀಡಿದ್ದಾರೆ.