ಎಸ್‍ಐಆರ್ ಪ್ರಕ್ರಿಯೆ: ಮನೆ-ಮನೆಗೆ ಖುದ್ದು ಬಿಎಲ್‍ಒಗಳೇ ಹೋಗಬೇಕು : ಸಿಎಂ ಡಿ.ಕೆ.ಶಿವಕುಮಾರ್
"ಎಸ್‍ಐಆರ್ ಪ್ರಕ್ರಿಯೆ ಮುಗಿದ ಬಳಿಕ ಮುಂಗಾರು ಅಧಿವೇಶನ"
ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆ ಸಂಬಂಧ ಖುದ್ದು ಬಿಎಲ್‍ಒಗಳೇ ಮನೆ ಮನೆಗೆ ಹೋಗಿ ಗಣತಿ ನಮೂನೆ ವಿತರಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜು.29ರವರೆಗೆ ಎಸ್‍ಐಆರ್ ಪ್ರಕ್ರಿಯೆಗೆ ಕಾಲಾವಕಾಶವಿದೆ. ಹೀಗಾಗಿ, ಖುದ್ದು ಬಿಎಲ್‍ಒಗಳೇ ಮನೆಗೇ ಹೋಗಿ ಅರ್ಜಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸುತ್ತಿದ್ದೇನೆ ಎಂದರು.
ಕಲ್ಯಾಣ ಮಂಟಪಗಳಲ್ಲಿ ಗಣತಿ ನಮೂನೆ ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರ ನನ್ನ ಗಮನಕ್ಕೂ ಬಂದಿದೆ. ಇದು ಕಾನೂನು ಬಾಹಿರ. ಇದನ್ನು ಯಾರೇ ಮಾಡಿದರೂ ಅದಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಶಾಸಕರು ಮಾಡಿದರೂ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಆದರೆ, ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಬೇಕಾದರೆ ಬಿಎಎಲ್‍ಗಳು ಜನರಿಂದ ಸಂಗ್ರಹಿಸಿ ಬಿಎಲ್‍ಒಗಳಿಗೆ ನೀಡಲು ಅವಕಾಶವಿದೆ ಎಂದು ಅವರು ಹೇಳಿದರು.
ಎಸ್‍ಐಆರ್ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ನಾಗರಿಕರ ಮತದಾನದ ಹಕ್ಕನ್ನು ಕಾಪಾಡುವುದು ನಮ್ಮ ಸರಕಾರದ ಜವಾಬ್ದಾರಿ. ಹೀಗಾಗಿ ಪ್ರತಿ ವಾರ್ಡ್ ಹಾಗೂ ಬೂತ್ ನಲ್ಲಿ ಸಹಾಯ ಕೇಂದ್ರ ಸ್ಥಾಪಿಸಲು ಮುಂದಾಗಿದ್ದೇವೆ ಎಂದರು.
ಎಸ್‍ಐಆರ್ ಪ್ರಕ್ರಿಯೆ ಮುಗಿದ ಬಳಿಕ ಮುಂಗಾರು ಅಧಿವೇಶನ: ಈ ವರ್ಷ ಮುಂಗಾರು ಅಧಿವೇಶನ ಕರೆಯಬೇಕಾಗಿತ್ತು. ಆದರೆ, ಸದ್ಯ ರಾಜ್ಯದಲ್ಲಿ ಎಸ್‍ಐಆರ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಮುಗಿಯುವವರೆಗೂ ಕಾಯಲು ತೀರ್ಮಾನಿಸಲಾಗಿದೆ. ಎಲ್ಲ ಶಾಸಕರು ತಮ್ಮ ಕ್ಷೇತ್ರದ ಮತದಾರರ ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಅವರಿಗೆ ತೊಂದರೆ ಆಗುವುದು ಬೇಡ ಎಂದು ತೀರ್ಮಾನಿಸಿದ್ದು, ಆ.5ರಂದು ಕರಡು ಮತದಾರರಪಟ್ಟಿ ಬಿಡುಗಡೆ ಮಾಡಲಿದ್ದು, ಅದಾದ ನಂತರ ಮೊದಲ ಅಥವಾ ಎರಡನೆ ವಾರದಲ್ಲಿ ಅಧಿವೇಶನದ ದಿನಾಂಕ ನಿಗದಿ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.