×
Ad

ವಿಬಿ ಜಿ ರಾಮ್ ಜಿ ಜಾರಿಯಿಂದ ರಾಜ್ಯದ ಮೇಲೆ ಹೆಚ್ಚಿನ ಹೊರೆ : ಈಶ್ವರ್ ಖಂಡ್ರೆ

Update: 2026-07-02 19:19 IST

ಬೆಂಗಳೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(ಮನರೇಗಾ) ಬದಲಾಗಿ ‘ವಿಬಿ ಜಿ ರಾಮ್ ಜಿ’ ಜಾರಿಯಿಂದಾಗಿ ರಾಜ್ಯ ಸರಕಾರದ ಮೇಲೆ ಆರು ಪಟ್ಟು ಹೆಚ್ಚಿನ ಹೊರೆ ಬೀಳುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಗುರುವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಬಿ ಜಿ ರಾಮ್ ಜಿಗೆ ರಾಜ್ಯದ ಪಾಲು ಭರಿಸುವ ಬಗ್ಗೆ ಚರ್ಚಿಸಿದ್ದೇವೆ. ಆರ್ಥಿಕ ಹೊರೆಯಾದರೂ ಬಡವರ, ದಲಿತರ, ವಂಚಿತರ, ರೈತರ, ಮಹಿಳೆಯರ ಹಿತ ಕಾಯಲು ಯೋಜನೆ ಜಾರಿಗೆ ನಿರ್ಧರಿಸಿದ್ದು, ಬಹುತೇಕ ಇಂದೆ ಅಧಿಸೂಚನೆ ಹೊರಬೀಳಲಿದೆ ಎಂದರು.

ಈ ಹಿಂದೆ ಮನರೇಗಾ 20 ವರ್ಷಗಳಲ್ಲಿ ಕೇಂದ್ರ ಸರಕಾರ ಶೇ.90 ಹಾಗೂ ರಾಜ್ಯ ಸರಕಾರ ಶೇ.10ರ ಅನುಪಾತದಲ್ಲಿ ಯೋಜನೆ ಜಾರಿಯಲ್ಲಿತ್ತು. ಈ ಅವಧಿಯಲ್ಲಿ 61 ಸಾವಿರ ಕೋಟಿ ರೂ.ಗಳ ಪೈಕಿ ಕೇಂದ್ರ ಸರಕಾರ 56 ಸಾವಿರ ಕೋಟಿ ರೂ.ಭರಿಸಿದ್ದರೆ, ರಾಜ್ಯ ಸರಕಾರ 4800 ಕೋಟಿ ರೂ.ಮಾತ್ರ ವೆಚ್ಚ ಮಾಡಿತ್ತು ಎಂದು ಅವರು ಮಾಹಿತಿ ನೀಡಿದರು.

ಕೇಂದ್ರ ಸರಕಾರ ಈ ವರ್ಷ ರಾಜ್ಯಕ್ಕೆ ವಿಬಿ ಜಿ ರಾಮ್ ಜಿ ಅಡಿ 5,709 ಕೋಟಿ ರೂ. ಹಂಚಿಕೆ ಮಾಡಿದೆ. ರಾಜ್ಯ ಸರಕಾರ ಒಂದೇ ವರ್ಷದಲ್ಲಿ 3806 ಕೋಟಿ ವೆಚ್ಚ ಮಾಡಬೇಕಾಗಿ ಬಂದಿದೆ. ಇದು ರಾಜ್ಯದ ಪಾಲಿಗೆ ದೊಡ್ಡ ಹೊರೆಯಾಗಿದೆ. ಹೀಗಾಗಿ ಈ ಹಿಂದೆ ಇದ್ದಂತೆ ಶೇ.90:10 ಅನುಪಾತವನ್ನೆ ಮುಂದುವರಿಸಲು ಕೇಂದ್ರಕ್ಕೆ ಒತ್ತಾಯಿಸಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು. ಸುಗ್ಗಿಯ ಕಾಲದಲ್ಲಿ ಕೇಂದ್ರ ಸರಕಾರ ವಿಬಿಜಿ ರಾಮ್ ಜಿ ಅಡಿ 60 ದಿನಗಳ ಬಿಡುವು ನೀಡಿದೆ. ಜು.1ರಿಂದ ಯೋಜನೆ ಜಾರಿಯಾಗಿದೆ. ಈ 2 ತಿಂಗಳ ಬಿಡುವಿನ ಅವಧಿ ತೆಗೆದರೆ, ಈಗ ಒಟ್ಟು ಉಳಿಯುವುದು ಕೇವಲ 9 ತಿಂಗಳು. ಈ ಅವಧಿಯಲ್ಲಿ ಯಾವುದೆ ರಾಜ್ಯ ತನ್ನ ಪಾಲಿನ ಶೇ.40ರಷ್ಟು ಹಣ ಭರಿಸಲು ಸಾಧ್ಯವಾಗದಿದ್ದರೆ, ಕೇಂದ್ರದ ಪಾಲು ಬರುವುದೆ ಇಲ್ಲ. ಇದು ಯೋಜನೆಯ ಮೂಲ ಉದ್ದೇಶವನ್ನೆ ನಾಶ ಮಾಡುತ್ತದೆ ಎಂದು ಅವರು ನುಡಿದರು.

ಈ ಬಗ್ಗೆ ಜೂ.29ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಎಲ್ಲ ವಿಚಾರಗಳನ್ನೂ ಪ್ರಸ್ತಾಪಿಸಿದ್ದೇನೆ. ಜೊತೆಗೆ ಎಲ್ಲ ರಾಜ್ಯಗಳಿಗೆ ತಮ್ಮ ಆಯ್ಕೆಯಂತೆ ಕಾಮಗಾರಿಗಳನ್ನು ನಡೆಸಲು ಅವಕಾಶ ನೀಡಬೇಕು ಎಂಬುದು ರಾಜ್ಯದ ನಿಲುವಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಜು.3ರಂದು ಪಂಚಾಯತ್ ರಾಜ್ ಸಚಿವರ ಸಭೆ: ದಿಲ್ಲಿಯಲ್ಲಿ ಜು.3ರಂದು ನಡೆಯಲಿರುವ ಎಲ್ಲ ರಾಜ್ಯಗಳ ಪಂಚಾಯತ್ ರಾಜ್ ಸಚಿವರ ಸಭೆಯಲ್ಲಿ ತಾನು ಭಾಗವಹಿಸುತ್ತಿದ್ದು, ಇದರಲ್ಲಿ 16ನೆ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನ, ಮಾರ್ಗಸೂಚಿಗಳ ಬಗ್ಗೆ ಚರ್ಚೆ ಆಗಲಿದೆ ಎಂದು ಅವರು ತಿಳಿಸಿದರು.

ಕರ್ನಾಟಕಕ್ಕೆ 15ನೆ ಹಣಕಾಸು ಆಯೋಗದಲ್ಲಿ ಭಾರಿ ಅನ್ಯಾಯವಾಗಿದೆ. 2025-26ನೆ ಸಾಲಿಗೆ 15ನೆ ಹಣಕಾಸು ಆಯೋಗದ ಅನುದಾನ 2,186 ಕೋಟಿ ರೂ. ಬಾಕಿ ಬರಬೇಕಾಗಿದೆ. ಇದನ್ನು ವಿನಾಕಾರಣ ಕೇಂದ್ರ ತಡೆ ಹಿಡಿದಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News