ಕಾನೂನು ಹೇಳಿದಂತೆ ನಡೆಯುತ್ತೇವೆ : ಸಿಎಂ ಡಿ.ಕೆ.ಶಿವಕುಮಾರ್
ಎಚ್.ಡಿ.ಕುಮಾರಸ್ವಾಮಿ ಅವರ ʼನೈಸ್ ಯೋಜನೆʼ ಕುರಿತ ಪತ್ರಕ್ಕೆ ಪ್ರತಿಕ್ರಿಯೆ
ಬೆಂಗಳೂರು: 'ನೈಸ್ ಯೋಜನೆಗೆ ಸಂಬಂಧಿಸಿದಂತೆ ಕಾನೂನು ಏನು ಹೇಳುತ್ತದೆಯೋ ಹಾಗೆ ನಾವು ನಡೆದುಕೊಳ್ಳುತ್ತೇವೆ' ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ರವಿವಾರ ಪ್ರತಿಕ್ರಿಯೆ ನೀಡಿದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ನೈಸ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದ ಬಗ್ಗೆ ಕೇಳಿದಾಗ, 'ಮಾಜಿ ಸಿಎಂ ಕುಮಾರಸ್ವಾಮಿ ಅವರು ಪತ್ರ ಬರೆದಿರುವುದು ನಿಜ. ಪತ್ರ ಇನ್ನು ಓದಿಲ್ಲ. ಓದಿ, ವಿಚಾರ ತಿಳಿದು ಕಾನೂನಿನ ಚೌಕಟ್ಟಿನಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸುತ್ತೇನೆ' ಎಂದರು.
ತಕ್ಷಣವೇ ನೈಸ್ ರಸ್ತೆ ಟೋಲ್ ಸಂಗ್ರಹಕ್ಕೆ ತಡೆ ಹಾಕಬೇಕು ಎಂದು ಕೇಂದ್ರ ಸಚಿವರ ಅಗ್ರಹ
ಕಳೆದ ತಿಂಗಳ ಅಂತ್ಯದಲ್ಲಿ ಬೆಂಗಳೂರು– ಮೈಸೂರು ಇನ್‌ಪ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (BMICP) ಅಕ್ರಮಗಳ ಬಗ್ಗೆ ರಾಜ್ಯ ಹೈಕೋರ್ಟ್ ಕಟುವಾದ ಅಭಿಪ್ರಾಯ ದಾಖಲು ಮಾಡಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಇಡೀ ಯೋಜನೆಯನ್ನು ರಾಜ್ಯ ಸರಕಾರ ಸ್ವಾಧೀನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗೆ ಏಳು ಪುಟಗಳ ಸುದೀರ್ಘ ಪತ್ರ ಬರೆದಿರುವ ಕೇಂದ್ರ ಸಚಿವರು; ಪ್ರಮುಖವಾಗಿ ಎರಡು ಒತ್ತಾಯಗಳನ್ನು ಮಾಡಿದ್ದಾರೆ.
ರಾಜ್ಯ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ನೀಡಿರುವ ನಿರ್ದೇಶನಗಳಂತೆ ಹಾಗೂ ವಿಧಾನಸಭೆ ಸದನ ಸಮಿತಿ ಮತ್ತು ಸಚಿವ ಸಂಪುಟದ ಉಪ ಸಮಿತಿಗಳ ಶಿಫಾರಸುಗಳಲ್ಲಿ ದಾಖಲಿಸಿರುವಂತೆ ನೈಸ್ ಸಂಸ್ಥೆ ರಸ್ತೆ ಯೋಜನೆ ಅನುಷ್ಠಾನದಲ್ಲಿ ಚೌಕಟ್ಟು ಒಪ್ಪಂದ (Frame Work Agreement-FWA) ಮತ್ತು ಯೋಜನಾ ತಾಂತ್ರಿಕ ಒಪ್ಪಂದ (Project Technical Agreement-PTA) ಗಳಲ್ಲಿರುವ ನಿಬಂಧನೆ ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೂಡಲೇ ಕಠಿಣ ಕ್ರಮ ವಹಿಸಬೇಕು ಎಂದು ಕೇಂದ್ರ ಸಚಿವರು ಆಗ್ರಹಿದ್ದಾರೆ.
ನೈಸ್ ಸಂಸ್ಥೆ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್ ಅನ್ನು ತತ್‌ಕ್ಷಣ ಜಾರಿಗೆ ಬರುವಂತೆ ನಿಷೇಧಿಸಬೇಕು ಹಾಗೂ ಒಂದು ಶಾಸನವನ್ನು ರಚಿಸುವ ಮೂಲಕ ನೈಸ್ ರಸ್ತೆ ಯೋಜನೆಯನ್ನು ರಾಜ್ಯ ಸರಕಾರ ಸ್ವಾಧೀನ ಮಾಡಿಕೊಳ್ಳಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.