ಒಂದು ತಿಂಗಳಲ್ಲಿ ಅಲೆಮಾರಿ, ಆದಿವಾಸಿ ಆಯೋಗ ರಚನೆ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ
Photo credit: X/@DKShivakumar
ಬೆಂಗಳೂರು: ಒಂದು ತಿಂಗಳಲ್ಲಿ ಅಲೆಮಾರಿ ಮತ್ತು ಆದಿವಾಸಿ ಆಯೋಗ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಮತ್ತು ರಾಜ್ಯ ಪಂಚ ಬುಡಕಟ್ಟು ಸಂರಕ್ಷಣಾ ಸಮಿತಿ ವತಿಯಿಂದ ನಡೆದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಲೆಮಾರಿ, ಬುಡಕಟ್ಟು ಮತ್ತು ಆದಿವಾಸಿಗಳಿಗೆ ನೀಡಬೇಕಾದದ್ದನ್ನು ಸರಕಾರ ನೀಡಲಿದೆ. ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಬೆಳೆಸಿ. ನಿಮ್ಮ ಪರವಾಗಿ ಡಾ.ಸಿ.ಎಸ್.ದ್ವಾರಕನಾಥ್ ಅವರು ಮನವಿ ಮಾಡಿದ್ದಾರೆ. ನಾವು ಕಂದಾಯ ಗ್ರಾಮ ಘೋಷಿಸಿ ಹಕ್ಕುಪತ್ರ, ಮನೆ ನೀಡಿದ್ದೇವೆ. ಅಲೆಮಾರಿ ಮತ್ತು ಆದಿವಾಸಿ ಆಯೋಗ ರಚನೆಗೆ ಮನವಿ ಮಾಡಿದ್ದು, ಒಂದು ತಿಂಗಳಲ್ಲಿ ಅದಕ್ಕೆ ತೀರ್ಮಾನ ಮಾಡಲಾಗುವುದು. ಇದು ನಮ್ಮ ಸರಕಾರದ ಪ್ರಣಾಳಿಕೆ ಭಾಗವಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ನಾವು ಮೂಲ ಆದಿವಾಸಿಗಳೇ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾಗರಿಕತೆ ಬಂದು ಸೂಟು ಬೂಟು ಹಾಕಿದ್ದೇವೆ. ಹುಟ್ಟಿದಾಗ ಬಟ್ಟೆ, ಹೆಸರು, ಕುರ್ಚಿ, ಅಧಿಕಾರ ಏನೂ ಇರಲಿಲ್ಲ. ನಂತರ ಹೆಸರು ಹಾಗೂ ಎಲ್ಲವೂ ಬಂದಿದೆ. ನೀವು ಪ್ರಕೃತಿ ಜೊತೆಗೆ ಬದುಕುತ್ತಿದ್ದೀರಿ. ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಕೊನೆಗೆ ನಾವು ಬದುಕಲು ಬಯಸುವುದು ಪ್ರಕೃತಿ ಜೊತೆಗೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನೀವು ಪ್ರಕೃತಿ ಮಕ್ಕಳು, ಭಾಗ್ಯವಂತರು. ನೀವು ಸಾಕಷ್ಟು ಸಮಸ್ಯೆಯಲ್ಲಿ ಬದುಕುತ್ತಿದ್ದೀರಿ. ಸರಕಾರ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಶಿಕ್ಷಣ ಸೇರಿ ಅನೇಕ ಕಾರ್ಯಕ್ರಮ ನೀಡಿದೆ. ಯುಪಿಎ ಸರಕಾರದಲ್ಲಿ ಅರಣ್ಯ ಹಕ್ಕು ಕಾಯ್ದೆ ನೀಡಿದೆವು. ನನ್ನ ಕ್ಷೇತ್ರದಲ್ಲಿ ನಿಮ್ಮ ಸಮುದಾಯದ ಜನರ ಭಾವನೆ, ಬದುಕು ಶ್ರಮ ಏನು ಎಂದು ಅರಿತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರು ಜಿಲ್ಲೆಯಲ್ಲೂ ಅಲೆಮಾರಿ, ಬುಡಕಟ್ಟು ಜನಾಂಗ ಪರಿಶ್ರಮದಲ್ಲಿ ಬದುಕುತ್ತಿದ್ದಾರೆ. ನೀವು ಶಿಕ್ಷಣಕ್ಕೆ ಆದ್ಯತೆ ನೀಡಿ, ವಿದ್ಯಾವಂತರು, ಪ್ರಜ್ಞಾವಂತರಾಗಿ. ಆದರೆ, ನಿಮ್ಮ ಮೂಲ ಕಸುಬು ಬಿಡಬೇಡಿ. ಬೇರು ಗಟ್ಟಿಯಾಗಿದ್ದಾರೆ ಮಾತ್ರ ಹಣ್ಣು ಪಡೆಯಲು ಸಾಧ್ಯ. ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಿಮ್ಮ ಮೂಲ ತತ್ವ, ಬದುಕಿನ ಆದರ್ಶ ಮರೆಯಬೇಡಿ. ಸೂರ್ಯ ಚಂದ್ರರೆ ನಿಮಗೆ ಗಡಿಯಾರ ಎಂದು ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.
ನೊಂದು ಬೆಂದಿರುವ ಸಮಾಜಕ್ಕೆ ಶಕ್ತಿ ತುಂಬುವುದು ನಮ್ಮ ಕರ್ತವ್ಯ. ನಗರದ ವಿದ್ಯಾರ್ಥಿಗಳಿಗೆ ಮೂರು ದಿನಗಳ ಕಾಲ ಹಳ್ಳಿಗಳಲ್ಲಿ ವಾಸ ಇದ್ದು, ಅಲ್ಲಿನ ಜನರ ಬದುಕಿನ ಬಗ್ಗೆ ಪರಿಚಯಿಸಲು ತೀರ್ಮಾನಿಸಿದ್ದೇವೆ. ನೀವು ನಿಮ್ಮ ಮೂಲ ಹಾಗೂ ಆಸ್ತಿಯನ್ನು ಬಿಟ್ಟುಕೊಡಬೇಡಿ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಈ ಹಿಂದೆ ನೆಹರೂ ಅವರು ಆದಿವಾಸಿಗಳಿಂದ ಅಣೆಕಟ್ಟು ಉದ್ಘಾಟನೆ ಮಾಡಿಸಿದ್ದರು. ನಿಮ್ಮ ನಮ್ಮ ಸಂಬಂಧ ಭಕ್ತ ಹಾಗೂ ಭಗವಂತನ ಸಂಬಂಧ. ನಿಮಗೆ ಶಿಕ್ಷಣ, ವಸತಿ, ಭೂಮಿ, ಆಹಾರ, ಉದ್ಯೋಗ, ಗ್ಯಾರಂಟಿ ನೀಡಲು ಬದ್ಧ. ನಾವು ನಿಮಗಾಗಿ ಐದು ಗ್ಯಾರಂಟಿ ಯೋಜನೆ ನೀಡಿದ್ದೇವೆ. ಇಂತಹ ಒಂದು ಯೋಜನೆ ಬೇರೆ ಯಾವುದಾದರೂ ಸರಕಾರ ನೀಡಿತ್ತಾ? ನಿಮಗೆ ನಾವು, ನಮಗೆ ನೀವು ಆಸರೆಯಾಗಿ ಇರಬೇಕು ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ನಿಮ್ಮ ಶ್ರಮಕ್ಕೆ ಗೌರವ ನೀಡಲು ನಾವು ಬದ್ಧ. ನಿಮ್ಮಲ್ಲಿ ಕೀಳರಿಮೆ ಬೇಡ, ನಿಮ್ಮ ಮೂಲ ಬದುಕನ್ನು ಹೆಮ್ಮೆಯಿಂದ ಬದುಕಿ. ಎಸ್‍ಐಆರ್ ಪ್ರಕ್ರಿಯೆಯಲ್ಲಿ ನಿಮ್ಮ ಮತದಾನ ಹಕ್ಕು ಕಾಪಾಡಿಕೊಳ್ಳಿ. ನಿಮಗೆ ಜಾತಿ ಹಾಗೂ ವಾಸ ದೃಢೀಕರಣ ಪತ್ರ ನೀಡಲು ಮುಂದಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಬಹುಭಾಷಾ ನಟ ಪ್ರಕಾಶ್ ರಾಜ್ ಮಾತನಾಡಿ, ನಾವುಗಳು ಆದಿವಾಸಿಗಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ನಾವು ಹೊರಗೆ ನಿಂತುಕೊಂಡು ಆದಿವಾಸಿಗಳು ಕಾಡು ಮನುಷ್ಯರು, ಅವರಿಗೆ ಸಂಸ್ಕೃತಿ ಇಲ್ಲವೆಂದು ಹೇಳುತ್ತಿದ್ದೇವೆ. ಆದರೆ, ನಮಗೆ ನಮಗೆ ಅರ್ಥವಾಗಬೇಕಿರುವುದು ಈ ಭೂಮಿಯ ಮೂಲ ನಿವಾಸಿಗಳೇ ಆದಿವಾಸಿಗಳು. ಭಾರತ ಅಂದರೆ ಆದಿವಾಸಿಗಳ ನಿರ್ಮಾಣ ಅನ್ನುವುದು ಸತ್ಯ. ಭಾರತದ ಕಾಡುಗಳು, ಮೃಗಪಕ್ಷಿಗಳು, ನದಿಗಳು, ಜರಿಗಳನ್ನು ಆದಿವಾಸಿಗಳು ಕಾಯುತ್ತಿದ್ದಾರೆ ಎಂದರು.
ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಗೌರವಾಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ಆದಿವಾಸಿಗಳಿಗೆ ಇರುವಂತಹ ನೋವುಗಳನ್ನು ಹೇಳಿಕೊಳ್ಳಲು ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ರಾಜ್ಯ ಎಲ್ಲ ಭಾಗಗಳಿಂದ ಹತ್ತಾರು ಆದಿವಾಸಿ, ಬುಡಕಟ್ಟು ಸಮುದಾಯಗಳ ಜನರು ಇಲ್ಲಿ ಬಂದಿದ್ದಾರೆ. ಅವರಿಗೆ ನ್ಯಾಯಯುತ ಬದುಕನ್ನು ಕಟ್ಟುಕೊಡಲು ಸರಕಾರ ನೆರವಾಗಬೇಕು ಎಂದರು.
ಅರಣ್ಯ ಇಲಾಖೆಯವರಿಂದ ಸುಮಾರು 20 ಆದಿವಾದಿಗಳು ಸಾವನ್ನಪ್ಪಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಆದಿವಾಸಿ ಸಮುದಾಯಗಳ ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕೆಂಬುದು ನಾವು ಬಹಳ ಹಿಂದಿನಿಂದಲೂ ಅನೇಕ ಸರಕಾರಗಳಲ್ಲಿ ಮನವಿ ಮಾಡಿಕೊಂಡು ಬಂದಿದ್ದೇವೆ ಆದರೆ, ಇದುವರೆಗೂ ಯಾರೂ ಮಾಡಿಲ್ಲ. ಆದಿವಾಸಿ- ಅಲೆಮಾರಿಗಳಿಗಾಗಿ ಆಯೋಗವನ್ನೂ ಮಾಡಿಲ್ಲ. ಡಿ.ಕೆ.ಶಿವಕುಮಾರ್ ಅವರ ಸರಕಾರ ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿ ಆದಿವಾದಿಗಳ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸಿ.ಎಸ್.ದ್ವಾರಕಾನಾಥ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಚಿವ ಡಾ.ಅಜಯ ಧರ್ಮಸಿಂಗ್, ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯಾಧ್ಯಕ್ಷ ಬಿ.ಎಲ್ ಹನುಮಂತಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.
‘ಕಪ್ಪು-ಬಿಳಿ’ ಬಣ್ಣಗಳಿಂದ ಆದಿವಾಸಿಗಳ ಅಳೆಯಬೇಡಿ..!
ಆದಿವಾಸಿಗಳನ್ನು ಕಪ್ಪು-ಬಿಳಿ ಎಂಬ ಬಣ್ಣಗಳಿಂದ ಅಳೆಯಬೇಡಿ. ಅವರಲ್ಲಿ ಇರುವಷ್ಟು ಬಣ್ಣಗಳು ಯಾರಲ್ಲೂ ಇಲ್ಲ. ಅವರ ದೇವರು ಪ್ರಕೃತಿ. ಪ್ರಕೃತಿ ಜೊತೆ ಮಾತನಾಡುತ್ತಾ ಬಂದಂತವರು. ಈ ಮೂಲ ನಿವಾಸಿಗಳಿಗೆ ಅನ್ಯಾಯ ಮಾಡುವುದರಿಂದ ನಮ್ಮ ಭವಿಷ್ಯಕ್ಕೂ ಅನ್ಯಾಯವಾಗಲಿದೆ. ಸರಕಾರ ಇದನ್ನು ಅರ್ಥ ಮಾಡಿಕೊಂಡು ಅಂತಃಕರಣದಿಂದ ಅವರಿಗೆ ಸೇರಬೇಕಾದ ಹಕ್ಕುಗಳನ್ನು ನೀಡಿ, ಸುಂದರ ಬದುಕು ಕಟ್ಟಿಕೊಳ್ಳಲು ಅನುವು ಮಾಡಲಿ ಎಂದು ಪ್ರಕಾಶ್ ರಾಜ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.