ಅಧಿಕಾರ ವ್ಯಾಪ್ತಿ ಮೀರಿ ಸೇವಾ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದೇಕೆ?: ಎಸ್ಸಿ, ಎಸ್ಟಿ ಆಯೋಗದಿಂದ ವಿವರಣೆ ಕೇಳಿದ ಹೈಕೋರ್ಟ್

Update: 2026-08-11 23:01 IST

Photo credit: PTI

ಬೆಂಗಳೂರು: ಆಯೋಗದ ಕಾಯ್ದೆಯಲ್ಲಿ ಅವಕಾಶ ಮತ್ತು ಅಧಿಕಾರ ವ್ಯಾಪ್ತಿ ಇಲ್ಲದಿದ್ದರೂ ಸೇವಾ ವಿಷಯದಲ್ಲಿ (ಸರ್ವಿಸ್ ಮ್ಯಾಟರ್) ಮಧ್ಯಪ್ರವೇಶ ಮಾಡಿದ್ದೇಕೆ ಎಂಬ ಬಗ್ಗೆ ವಿವರಣೆ ನೀಡುವಂತೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಧಾರವಾಡ-ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ದಮುಲ್) ಮಾರುಕಟ್ಟೆ ಅಧಿಕಾರಿ ಸುರೇಶ್ ಡಿ. ಕೆಂಗಾರ್ ಅವರನ್ನು ಪೂರ್ವಾನ್ವಯ ಬಡ್ತಿ ನೀಡುವಂತೆ ಆಯೋಗ ಮಾಡಿದ ಆದೇಶದ ಪ್ರಕರಣದಲ್ಲಿ ಹೈಕೋರ್ಟ್ ಈ ನಿರ್ದೇಶನ ನೀಡಿದೆ.

ಆಯೋಗದ ಆದೇಶ ಪ್ರಶ್ನಿಸಿ ದಮುಲ್ ಪರವಾಗಿ ಅದರ ವ್ಯವಸ್ಥಾಪಕ ನಿರ್ದೇಶಕ ದೇವಪ್ಪ ಕಳಸದ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ದಮುಲ್ ಮಾರುಕಟ್ಟೆ ಅಧಿಕಾರಿ ಸುರೇಶ್ ಡಿ. ಕೆಂಗಾರ್ ಅವರಿಗೆ ಪೂನಾರ್ವನ್ವಯ ಬಡ್ತಿ ನೀಡುವಂತೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ 2026ರ ಜುಲೈ 3ರಂದು ಹೊರಡಿಸಿದ ಆದೇಶಕ್ಕೆ ಮಧ್ಯಂತರ ತಡೆ ನೀಡಿತು.

ಜತೆಗೆ, ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಕಾಯ್ದೆಯಲ್ಲಿ ಅವಕಾಶ ಇಲ್ಲದಿರುವಾಗ ಸೇವಾ ವಿಷಯಗಳಲ್ಲಿ ಮಧ್ಯಪ್ರವೇಶಿಸಿದ್ದು ಯಾವ ಅಧಿಕಾರದಡಿ ಎಂಬ ಬಗ್ಗೆ ವಿವರಣೆ ನೀಡಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವಂತೆ ಆಯೋಗದ ಕಾರ್ಯದರ್ಶಿಗೆ ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ಮುಂದೂಡಿತು.

ಮನವಿ ಏನು?

ಸಹಕಾರ ಸಂಘಗಳ ಕಾಯ್ದೆ-1959ರಡಿ ನೋಂದಣಿಯಾಗಿರುವ ಸಹಕಾರ ಸಂಘಗಳ ನೌಕರರ ಬಡ್ತಿ, ಸೇವಾ ಹಿರಿತನ, ಪೂರ್ವಾನ್ವಯ ಬಡ್ತಿ, ವೇತನ ನಿಗದಿ ಅಥವಾ ಸೇವಾ ಷರತ್ತುಗಳ ವಿಷಯದಲ್ಲಿ ಮಧ್ಯಪ್ರವೇಶಿಸುವ ಅಧಿಕಾರ ವ್ಯಾಪ್ತಿ ಎಸ್ಸಿ-ಎಸ್ಟಿ ಆಯೋಗಕ್ಕೆ ಇಲ್ಲ ಎಂದು ಘೋಷಿಸಬೇಕು. ಆಯೋಗದ ಆದೇಶವನ್ನು ರದ್ದುಪಡಿಸಬೇಕು. ಅರ್ಜಿ ಇತ್ಯರ್ಥ ಆಗುವ ತನಕ ಆಯೋಗದ ಆದೇಶಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News