Mysuru | ಸಚಿವ ಸ್ಥಾನ‌ ಕೈ ತಪ್ಪಿದ ಹಿನ್ನಲೆ: ಮೈಸೂರಿನಲ್ಲಿ ಸಭೆ ನಡೆಸಿದ ಶಾಸಕರಾದ ಎಚ್.ಸಿ. ಮಹದೇವಪ್ಪ, ತನ್ವೀರ್ ಸೇಠ್, ವೆಂಕಟೇಶ್

►ನಮಗೆ ಯಾಕೆ ಅನ್ಯಾಯ ಆಗಿದೆ, ಎಲ್ಲಿ ಅನ್ಯಾಯ ಆಗಿದೆ ಎಂಬ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದ ಶಾಸಕ ತನ್ವೀರ್ ಸೇಠ್ ►ಅತೃಪ್ತ ಶಾಸಕರನ್ನು ಭೇಟಿಯಾದ ಸಚಿವ ಯತೀಂದ್ರ ಸಿದ್ದರಾಮಯ್ಯ

Update: 2026-08-11 20:21 IST

ಮೈಸೂರು: ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಅತೃಪ್ತ ಕಾಂಗ್ರೆಸ್ ಶಾಸಕರು ಮೈಸೂರಿನಲ್ಲಿ ಸಭೆ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ನಗರದ ಸರ್ಕಾರಿ ಅತಿಥಿಗೃಹದಲ್ಲಿ ಮಂಗಳವಾರ ಶಾಸಕರುಗಳಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್ ಮತ್ತು ತನ್ವೀರ್ ಸೇಠ್ ಸಭೆ ನಡೆಸಿ ಸಚಿವ ಸ್ಥಾನ ಕೈ ತಪ್ಪಲು ಏನು ಕಾರಣ ಮತ್ತು ಇದರ ಸಂಚು ಏನು ಎಂಬುದರ ಬಗ್ಗೆ ಚರ್ಚೆ ನಡಸಿದ್ದಾರೆ ಎನ್ನಲಾಗಿದೆ.

ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಜನ್ಮದಿನ ಆಚರಣೆಯನ್ನು ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್, ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಭಾಗಿಯಾಗಿದ್ದರೆ. ಇತ್ತ ಅತೃಪ್ತ ಶಾಸಕರುಗಳು ಗೌಪ್ಯ ಸಭೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಪಕ್ಷದಲ್ಲಿ ಎಲ್ಲವೂ ಸರಿಯಿದೆ ಅಂತಾನೂ ಹೇಳಲ್ಲ ಸರಿ ಇಲ್ಲ ಅಂತಾನೂ ಹೇಳಲ್ಲ, ಅನ್ಯಾಯ ಆಗಿರೋದು ನಿಜ ಎಂದು ಹೇಳಿದರು.

ನಾವು ಮೂವರು ಒಂದಾಗಿದ್ದೇವೆ. ನಮಗೆ ಯಾಕೆ ಅನ್ಯಾಯ ಆಗಿದೆ, ಎಲ್ಲಿ ಅನ್ಯಾಯ ಆಗಿದೆ ಎಂಬ ಬಗ್ಗೆ ಮಾತುಕತೆ ಮಾಡಿದ್ದೇವೆ. ಮುಂದಿನ ನಡೆ ಬಗ್ಗೆ ಈಗಲೇ ಏನು ಹೇಳಲ್ಲ, ನಾವು ಮೂವರು ಒಟ್ಟಿಗೆ ಸೇರಿದ್ದು ಒಂದು ಮುನ್ನಡಿಯಾಗಲಿದೆ. ಈ ಬಗ್ಗೆ ಮೂವರು ಸಭೆ ಮಾಡಿದ್ದೇವೆ. ನಾವು ಸಚಿವರಾಗಿ ನಮ್ಮ ಶಕ್ತಿ ತೋರಿಸಬೇಕಿಲ್ಲ. ಮೂವರಿಗೆ ಪ್ರತ್ಯೇಕವಾಗಿ ಸಮುದಾಯದ ಬೆಂಬಲವಿದೆ. ನಮ್ಮ ಶಕ್ತಿ ಬಗ್ಗೆ ನಾವು ಮುಂದೆ ಮಾತನಾಡುತ್ತೇವೆ ಎಂದು ಹೇಳಿದರು.

ಸಚಿವ ಸ್ಥಾನ ತಪ್ಪಿದ ತಕ್ಷಣ ಮುಂದೆ ಸಿಎಂ ಆಗಲ್ಲ ಅಂತಲ್ಲ: ಶಾಸಕ ಡಾ.ಎಚ್.ಸಿ.ಮಹದೇವಪ್ಪ

ನಾವು ಮೂವರು ಸಭೆ ಮಾಡಿದ್ದೇವೆ. ಸದ್ಯಕ್ಕೆ ನಾನು ರಾಜಕೀಯದ ಬಗ್ಗೆ ಮಾತನಾಡಲ್ಲ. ಎಲ್ಲಿ ತಪ್ಪಾಗಿದೆ ಎನ್ನುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಅದನ್ನು ಬಿಟ್ಟು ಬೇರೇನೂ ಸದ್ಯಕ್ಕೆ ನಾನು ಮಾತನಾಡಲ್ಲ ಎಂದು ಶಾಸಕ ಡಾ‌ಎಚ್.ಸಿ.ಮಹದೇವಪ್ಪ ಹೇಳಿದರು.

ಮಹದೇವಪ್ಪ ದಲಿತ ಸಿಎಂ ಆಗುತ್ತಾರೆ ಎಂದು ಹೇಳಲಾಗುತ್ತಿತ್ತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನ ತಪ್ಪಿದ ತಕ್ಷಣ ಮುಂದೆ ಸಿಎಂ ಆಗಲ್ಲ ಅಂತ ಇಲ್ಲ, ಸಾಮರ್ಥ್ಯವಿದೆ ಅಲ್ವಾ, ಮುಂದೆ ನೋಡಣ ಎಂದು ಹೇಳಿದರು.


ನಾವು ಯಾರ ಬಗ್ಗೆಯೂ ದೂರಲ್ಲ, ಪಿತೂರಿ ಅಂತಾನೂ ಹೇಳಲ್ಲ: ಶಾಸಕ ಕೆ.ವೆಂಕಟೇಶ್

ನಾವು ಯಾರ ಬಗ್ಗೆಯೂ ದೂರಲ್ಲ. ಪಿತೂರಿ ಅಂತಾನೂ ಹೇಳಲ್ಲ, ಯಾಕೆ ನಮಗೆ ಸಚಿವ ಸ್ಥಾನ ಕೈತಪ್ಪಿದೆ ಅಂತ ಸಭೆ ಮಾಡಿದ್ದೇವೆ ಎಂದು ಶಾಸಕ ಕೆ.ವೆಂಕಟೇಶ್ ಹೇಳಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮುಖ್ಯಮಂತ್ರಿ ಇದ್ದರೂ ಜಿಲ್ಲೆಗೆ ಇಬ್ಬರು ಸಚಿವರನ್ನು ಮಾಡಿದ್ದರು. ಈಗ ಯಾಕೆ ಅನ್ಯಾಯ ಆಗಿದೆ, ಯಾರಿಂದ ಆಗಿದೆ ಗೊತ್ತಿಲ್ಲ, ಯತೀಂದ್ರಗೆ ಸಚಿವ ಸ್ಥಾನ ಕೊಟ್ಟಿರೋದಕ್ಕೆ ನಮಗೆ ಯಾರಿಗೂ ತಕರಾರು ಇಲ್ಲ, ಆದರೆ ಇನ್ನೂ ಯಾರಿಗಾದರೂ ಸಚಿವ ಸ್ಥಾನ ಕೊಡಬಹುದಿತ್ತು. ಈ ಬಗ್ಗೆ ಮಾತನಾಡಿದ್ದೇವೆ ಎಂದು ಹೇಳಿದರು.


ಅತೃಪ್ತ ಶಾಸಕರನ್ನು ಭೇಟಿ ಮಾಡಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ

ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಅತೃಪತ್ತ ಶಾಸಕರುಗಳು ಸಭೆ ನಡೆಸುತ್ತಿರುವ ವಿಚಾರ ತಿಳಿದು ತಕ್ಷಣ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿ ಶಾಸಕರುಗಳನ್ನು ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದರು.

ನಗರದ ಸರ್ಕಾರಿ ಅತಿಥಿಗೃಹಕ್ಕೆ ಮಂಗಳವಾರ ಆಗಮಿಸಿದ ಅವರು, ಶಾಸಕರುಗಳಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಮತ್ತು ತನ್ವೀರ್ ಸೇಠ್ ಅವರೊಂದಿಗೆ ಮಾತನಾಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಔಪಚಾರಿಕ ಭೇಟಿ ಅಷ್ಟೇ, ನಾನು ಜಿಲ್ಲಾ ಉಸ್ತುವಾರಿ ಸಚಿವ ಆದ ಮೇಲೆ ಹಿರಿಯ ಶಾಸಕರನ್ನು ಭೇಟಿ ಮಾಡಿದ್ದೇನೆ. ಅವರು ಸಭೆ ಮಾಡುತ್ತಿರುವುದು ನನಗೆ ಗೊತ್ತಿಲ್ಲ. ಅವರ ಮನೆಗೆ ಭೇಟಿ ಮಾಡಲು ಹೋಗಬೇಕಿತ್ತು. ಇಲ್ಲೆ ಇದೀವಿ ಬನ್ನಿ ಅಂದ್ರು ಅದಕ್ಕಾಗಿ ಇಲ್ಲಿಗೆ ಬಂದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಹಿರಿಯ ನಾಯಕರಿಗೆ ಸಚಿವ ಸ್ಥಾನ ಸಿಗಬೇಕಿತ್ತು ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಅವರು, ಮೂವರ ಜೊತೆ ಮಾತನಾಡಿದ್ದೇನೆ. ಅವರ ಮಾರ್ಗದರ್ಶನ ಕೇಳಿದ್ದೇನೆ. ಜಿಲ್ಲೆಯ ಅಭಿವೃದಿಗೆ ಸಹಕಾರ ಕೇಳಿದ್ದೇನೆ. ನೀವು ಮಂತ್ರಿ ಆಗಿರೋದು ಖುಷಿ ಆಗಿದೆ. ನಮ್ಮ ಸಹಕಾರ ಇರುತ್ತೆ ಅಂತ ಹೇಳಿದ್ದಾರೆ ಎಂದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News