ಆಹಾರ ಸುರಕ್ಷತೆಗೆ ಬಿಗಿ ಕ್ರಮ | ಹೋಟೆಲ್‌, ಧಾಬಾ, ಆಹಾರ ಸೇವಾ ಸಂಸ್ಥೆಗಳು ಕಡ್ಡಾಯ ಸುರಕ್ಷತ ನೈರ್ಮಲ್ಯ ನಿಯಮಗಳ ಪಾಲಿಸಲು ರಾಜ್ಯ ಸರಕಾರ ಸೂಚನೆ

►ನಿಯಮ ಮೀರಿದರೆ ಕಠಿಣ ಕಾನೂನು ಕ್ರಮ

Update: 2026-08-11 21:16 IST

ಸಾಂದರ್ಭಿಕ ಚಿತ್ರ (X/@KeypadGuerilla)

ಹೊಟೇಲ್, ಧಾಬಾ, ಆಹಾರ ಸೇವಾ ಸಂಸ್ಥೆಗಳು ಕಡ್ಡಾಯ ಸುರಕ್ಷತ ನೈರ್ಮಲ್ಯ ನಿಯಮಗಳ ಪಾಲಿಸಲು ಸರಕಾರ ಸೂಚನೆ

ಬೆಂಗಳೂರು, ಆ.11: ಇತ್ತೀಚೆಗೆ ರಾಜ್ಯಮಟ್ಟದಲ್ಲಿ ತೀವ್ರ ಜಾರಿ ಮತ್ತು ತಪಾಸಣಾ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಸಂಗ್ರಹಣೆ, ಕಳಪೆ ನೈರ್ಮಲ್ಯ ಇರುವುದು ಕಂಡುಬಂದಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ 2011ರ ನಿಯಾಮಗಳನ್ವಯ ಸಣ್ಣ ಹೊಟೇಲ್‍ಗಳು, ಧಾಬಾಗಳು, ರೆಸ್ಟೋರೆಂಟ್‍ಗಳು ಹಾಗೂ ಇತರೆ ಆಹಾರ ಸೇವಾ ಕೇಂದ್ರಗಳು ಕಟ್ಟುನಿಟ್ಟಾಗಿ ಸುರಕ್ಷತ ನೈರ್ಮಲ್ಯ ನಿಯಮಗಳನ್ನು ಅನುಸರಿಸುವಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತ ಕೆ.ಶ್ರೀನಿವಾಸ್ ಸೂಚಿಸಿದ್ದಾರೆ.

ಮಂಗಳವಾರ ಈ ಸಂಬಂಧ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿರುವ, ಆಹಾರ ಸುರಕ್ಷತೆ, ನೈರ್ಮಲ್ಯ, ಸಂಗ್ರಹಣೆ, ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ, ಕೀಟ ನಿಯಂತ್ರಣ ಹಾಗೂ ತಾಪಮಾನ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ಕ್ರಮಗಳನ್ನು ಹೊಟೇಲ್‍ಗಳು, ಧಾಬಾಗಳು ಮತ್ತು ಇತರೆ ಆಹಾರ ಸೇವಾ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು. ಅವಧಿ ಮುಗಿದ ಆಹಾರ ಉತ್ಪನ್ನಗಳ ಬಳಕೆ ಅಥವಾ ಸಂಗ್ರಹಣೆ, ಕಳಪೆ ನೈರ್ಮಲ್ಯ, ಆಹಾರ ಕಲುಷಿತಗೊಳ್ಳುವಿಕೆ, ಅಸುರಕ್ಷಿತ ನೀರಿನ ಬಳಕೆ ಅಥವಾ ಆಹಾರ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕಂಡುಬಂದಲ್ಲಿ, ನಿಯಮಗಳ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಆಹಾರ ವ್ಯವಹಾರ ನಿರ್ವಾಹಕರು, ಆಹಾರ ವ್ಯವಹಾರದ ಪರವಾನಗಿಯನ್ನು ಸಂಸ್ಥೆಯ ಆವರಣದಲ್ಲಿ ಎಲ್ಲರಿಗೂ ಗೋಚರಿಸುವ ಪ್ರಮುಖ ಸ್ಥಳದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಆಹಾರ ವ್ಯವಹಾರದ ಪ್ರಕ್ರಿಯೆಗಳು, ಚಟುವಟಿಕೆಗಳು ಅಥವಾ ಇತರೆ ವಿವರಗಳಲ್ಲಿ ಯಾವುದೇ ಬದಲಾವಣೆ/ಮಾರ್ಪಾಡು ಮಾಡಿದಲ್ಲಿ ಸಂಬಂಧಿತ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಆದೇಶದಲ್ಲಿ ಏನಿದೆ?:

1. ಆಹಾರ ತಯಾರಿಕಾ ಪ್ರದೇಶ

• ಅಡುಗೆ ಪ್ರದೇಶವನ್ನು ಸದಾ ಸ್ವಚ್ಛವಾಗಿ, ವ್ಯವಸ್ಥಿತವಾಗಿ ಹಾಗೂ ಸಮರ್ಪಕ ಗಾಳಿಯಾಡುವಂತೆ ನಿರ್ವಹಿಸಬೇಕು.

• ಪಾತ್ರೆ ತೊಳೆಯುವುದು, ಉಪಕರಣಗಳನ್ನು ಸ್ವಚ್ಛಗೊಳಿಸುವುದು ಹಾಗೂ ಕಚ್ಚಾ ಆಹಾರ ಪದಾರ್ಥಗಳನ್ನು ತೊಳೆಯುವುದಕ್ಕಾಗಿ ಪ್ರತ್ಯೇಕ ಸಿಂಕ್‍ಗಳನ್ನು ವ್ಯವಸ್ಥೆ ಮಾಡಬೇಕು.

• ಅಡುಗೆ ಮತ್ತು ಆಹಾರ ವಿತರಣೆಗೆ ಬಳಸುವ ಉಪಕರಣಗಳು, ಪಾತ್ರೆಗಳು, ಕ್ರಾಕರಿ ಹಾಗೂ ಕಟ್ಲರಿಗಳನ್ನು ಡಿಟರ್ಜೆಂಟ್ ಮತ್ತು ಬಿಸಿ ನೀರನ್ನು ಬಳಸಿ ಸಮರ್ಪಕವಾಗಿ ತೊಳೆಯಬೇಕು ಹಾಗೂ ಸ್ವಚ್ಛಗೊಳಿಸಬೇಕು.


2. ಕಚ್ಚಾ ಆಹಾರ ಪದಾರ್ಥಗಳು

• ಬಳಸುವ ಕಚ್ಚಾ ಆಹಾರ ಪದಾರ್ಥಗಳು ಉತ್ತಮ ಗುಣಮಟ್ಟದ್ದಾಗಿದ್ದು, ವಿಶ್ವಾಸಾರ್ಹ ಮೂಲದಿಂದ ಖರೀದಿಸಬೇಕು.

• ಕಚ್ಚಾ ಪದಾರ್ಥಗಳನ್ನು ಸ್ವಚ್ಛ ಮತ್ತು ನೈರ್ಮಲ್ಯಯುತ ಪರಿಸ್ಥಿತಿಯಲ್ಲಿ, ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಬೇಕು.

• ಹಣ್ಣು ಮತ್ತು ತರಕಾರಿಗಳನ್ನು ಬಳಸುವ ಮೊದಲು ಚೆನ್ನಾಗಿ ತೊಳೆಯಬೇಕು.

• ಆಹಾರ ಪದಾರ್ಥಗಳ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ ಅವು ಹಾಳಾಗದಂತೆ ಕ್ರಮ ಕೈಗೊಳ್ಳಬೇಕು.

• ಆಹಾರ ಪದಾರ್ಥಗಳನ್ನು ಸೂಕ್ತವಾಗಿ ಮುಚ್ಚಿ ಸಂಗ್ರಹಿಸಬೇಕು.

• ಅಗತ್ಯವಿರುವಲ್ಲಿ ಆಹಾರ ಉತ್ಪನ್ನಗಳಲ್ಲಿ ರಾಸಾಯನಿಕ ಹಾಗೂ ಸೂಕ್ಷ್ಮಜೀವಿ ಮಾಲಿನ್ಯಗಳ ಪರೀಕ್ಷೆಯನ್ನು ಖಚಿತಪಡಿಸಬೇಕು.


3. ಅಡುಗೆ ಮತ್ತು ಆಹಾರ ಸಂಗ್ರಹಣೆ

• ಆಹಾರವನ್ನು ಸಮರ್ಪಕವಾಗಿ ತಯಾರಿಸಿ, ಸಂಸ್ಕರಿಸಿ ಮತ್ತು ಸಂಪೂರ್ಣವಾಗಿ ಬೇಯಿಸಬೇಕು.

• ಆಹಾರ ತಯಾರಿಕೆಗೆ ಬಳಸುವ ಎಲ್ಲಾ ಪದಾರ್ಥಗಳು ತಾಜಾವಾಗಿದ್ದು, ಸಂಪೂರ್ಣವಾಗಿ ಬೇಯಿಸಿರುವುದನ್ನು ಖಚಿತಪಡಿಸಬೇಕು.

• ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ತಯಾರಿಕೆಯನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು.

• ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದನ್ನು ತಪ್ಪಿಸಬೇಕು.

• ಆಹಾರವನ್ನು ಸಂಪೂರ್ಣವಾಗಿ ಬೇಯಿಸಬೇಕು.

• ತಣ್ಣನೆಯ ಆಹಾರವನ್ನು 5°Cಕ್ಕಿಂತ ಕಡಿಮೆ ತಾಪಮಾನದಲ್ಲಿ ಹಾಗೂ ಬಿಸಿ ಆಹಾರವನ್ನು 60°C ಅಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ಇಡಬೇಕು.

• ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಕ್ಕಾಗಿ ಪ್ರತ್ಯೇಕ ಕತ್ತರಿಸುವ ಫಲಕಗಳು, ಚಾಕುಗಳು ಹಾಗೂ ಪಾತ್ರೆಗಳನ್ನು ಬಳಸಬೇಕು.

• ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಪ್ರತ್ಯೇಕ ಪಾತ್ರೆಗಳಲ್ಲಿ ಸಂಗ್ರಹಿಸಬೇಕು.

• ತಣ್ಣನೆಯ ಆಹಾರವನ್ನು 5°Cಕ್ಕಿಂತ ಕಡಿಮೆ ತಾಪಮಾನದಲ್ಲಿ ಮತ್ತು ಫ್ರೋಜನ್ ಆಹಾರ ಪದಾರ್ಥಗಳನ್ನು –18°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು.


4. ಸಿಬ್ಬಂದಿಯ ವೈಯಕ್ತಿಕ ನೈರ್ಮಲ್ಯ

• ಎಫ್‍ಎಸ್‍ಎಸ್‍ಎಐ ನಿಯಮಗಳನ್ವಯ ಆಹಾರ ನಿರ್ವಹಿಸುವ ಸಿಬ್ಬಂದಿಯ ಉನ್ನತ ಮಟ್ಟದ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಬೇಕು.

• ಸಿಬ್ಬಂದಿಯು ಸ್ವಚ್ಛ ಸಮವಸ್ತ್ರ, ಹೇರ್‍ನೆಟ್/ತಲೆಕವಚ ಹಾಗೂ ಅಗತ್ಯವಿರುವಲ್ಲಿ ಮಾಸ್ಕ್ ಮತ್ತು ಏಪ್ರನ್ ಧರಿಸಬೇಕು.

• ಸಿಬ್ಬಂದಿಯ ಉಗುರುಗಳನ್ನು ಚಿಕ್ಕದಾಗಿ ಹಾಗೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

• ಅಡುಗೆಮನೆ ಮತ್ತು ಆಹಾರ ಸೇವಾ ಸಿಬ್ಬಂದಿಯ ವಾರ್ಷಿಕ ವೈದ್ಯಕೀಯ ಆರೋಗ್ಯ/ಫಿಟ್ನೆಸ್ ದಾಖಲೆಗಳನ್ನು ನವೀಕರಿಸಿ ನಿರ್ವಹಿಸಬೇಕು.

• ದಿನನಿತ್ಯದ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ತರಬೇತಿ ಪಡೆದ ಫೊಸ್ಟ್ಯಾಕ್ ಫುಡ್ ಸೇಫ್ಟಿ ಸೂಪರ್‍ವೈಸರ್ ಅನ್ನು ನಿಯೋಜಿಸಬೇಕು.


5. ಆಹಾರದ ಸಾಗಣೆ ಮತ್ತು ನಿರ್ವಹಣೆ

• ಆಹಾರ ಸಾಗಿಸಲು ಬಳಸುವ ವಾಹನ ಅಥವಾ ಸಾರಿಗೆ ವ್ಯವಸ್ಥೆಯು ಸ್ವಚ್ಛ ಮತ್ತು ನೈರ್ಮಲ್ಯಯುತವಾಗಿರಬೇಕು.

• ಆಹಾರ ಉತ್ಪನ್ನಗಳ ಸಾಗಣೆಗೆ ಬಳಸುವ ವಾಹನಗಳನ್ನು ಸಾಧ್ಯವಾದಷ್ಟು ಆಹಾರ ಸಾಗಣೆಯ ಉದ್ದೇಶಕ್ಕಾಗಿಯೇ ಬಳಸಬೇಕು.

• ಆಹಾರ ಸಾಗಣೆಯ ಅವಧಿಯನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಬೇಕು.

• ಸಾಗಣೆ ಸಂದರ್ಭದಲ್ಲಿ ಆಹಾರಕ್ಕೆ ಅಗತ್ಯವಿರುವ ಸೂಕ್ತ ತಾಪಮಾನವನ್ನು ಕಾಪಾಡಬೇಕು.

• ಶೀತಲೀಕರಣ ಅಗತ್ಯವಿರುವ ಆಹಾರವನ್ನು ಸೂಕ್ತ ಪ್ರಮಾಣಗಳಲ್ಲಿ ಸಣ್ಣ ಘಟಕಗಳಾಗಿ ವಿತರಿಸಬೇಕು.

• ಬಾಟಲಿ ಪಾನೀಯಗಳು, ಸ್ಟೆರಿಲೈಸ್ ಮಾಡಿದ ಹಾಲು, ಕ್ಯಾನ್ ಆಹಾರ ಮುಂತಾದ ಪ್ಯಾಕೇಜ್ ಮಾಡಿದ ಆಹಾರಗಳ ಪ್ಯಾಕಿಂಗ್/ಸೀಲ್‍ಗಳು ಹಾನಿಯಾಗದಂತೆ ಸಾಗಣೆ ಸಂದರ್ಭದಲ್ಲಿ ಸರಿಯಾಗಿ ಸಂಗ್ರಹಿಸಬೇಕು.

• ಆಹಾರವು ಅಂತಿಮ ಗ್ರಾಹಕರಿಗೆ ತಲುಪುವವರೆಗೂ ಅಗತ್ಯವಿರುವ ತಾಪಮಾನವನ್ನು ಕಾಪಾಡಬೇಕು.


6. ಸುರಕ್ಷಿತ ನೀರು

• ಅಡುಗೆ, ಆಹಾರ ತಯಾರಿಕೆ, ಪಾತ್ರೆ ತೊಳೆಯುವುದು ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಸುರಕ್ಷಿತ ಮತ್ತು ಕುಡಿಯಲು ಯೋಗ್ಯವಾದ ನೀರನ್ನು ಮಾತ್ರ ಬಳಸಬೇಕು.

• ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಬೇಕು ಮತ್ತು ಪರೀಕ್ಷಾ ದಾಖಲೆಗಳನ್ನು ನಿರ್ವಹಿಸಬೇಕು.

• ಹೊಟೇಲ್‍ಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಉಚಿತವಾಗಿ ಒದಗಿಸಬೇಕು.

• ಸಾರ್ವಜನಿಕರ ಕಡ್ಡಾಯವಾಗಿ ಬಿಸಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು.


7. ಶೌಚಾಲಯ

• ಹೊಟೇಲ್‍ಗೆ ಭೇಟಿ ನೀಡುವ ಸಾರ್ವಜನಿಕರಿಗೆ ಶೌಚಾಲಯದ ಉಚಿತ ಬಳಕೆಗೆ ಅವಕಾಶ ಕಲ್ಪಿಸಬೇಕು.

• ಹೊಟೇಲ್ ಕಾರ್ಯನಿರ್ವಹಿಸುವ ಅವಧಿಯಲ್ಲಿ ಶೌಚಾಲಯವನ್ನು ಸದಾ ಸ್ವಚ್ಛವಾಗಿ, ಶುಚಿಯಾಗಿ ಹಾಗೂ ನೈರ್ಮಲ್ಯಯುತವಾಗಿ ನಿರ್ವಹಿಸಬೇಕು.

• ಶೌಚಾಲಯದಲ್ಲಿ ಸಮರ್ಪಕ ನೀರು, ಸಾಬೂನು ಹಾಗೂ ಕೈತೊಳೆಯುವ ವ್ಯವಸ್ಥೆ ಇರಬೇಕು.


8. ಕೀಟ ನಿಯಂತ್ರಣ

• ಆಹಾರ ಸಂಗ್ರಹಣಾ ಪ್ರದೇಶ ಮತ್ತು ಅಡುಗೆ ಪ್ರದೇಶವನ್ನು ಸದಾ ಸ್ವಚ್ಛವಾಗಿ ಇಡಬೇಕು.

• ಕೀಟಗಳು, ನೊಣಗಳು, ಜಿರಳೆಗಳು, ಇಲಿಗಳು ಹಾಗೂ ಇತರೆ ದಂಶಕಗಳು ಪ್ರವೇಶಿಸದಂತೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.

• ನಿಯಮಿತವಾಗಿ ಕೀಟ ನಿಯಂತ್ರಣ ಕಾರ್ಯವನ್ನು ಕೈಗೊಳ್ಳಬೇಕು ಮತ್ತು ಸಂಬಂಧಿತ ದಾಖಲೆಗಳನ್ನು ನಿರ್ವಹಿಸಬೇಕು.


9. ಅಡುಗೆಮನೆ ಮತ್ತು ಆವರಣದ ಸ್ವಚ್ಛತೆ

• ಗೋಡೆಗಳು, ನೆಲ ಮತ್ತು ಮೇಲ್ಛಾವಣಿಯನ್ನು ಸ್ವಚ್ಛವಾಗಿ, ಸಮತಟ್ಟಾಗಿ ಮತ್ತು ಉತ್ತಮ ಸ್ಥಿತಿಯಲ್ಲಿ ನಿರ್ವಹಿಸಬೇಕು.

• ಉದುರುವ ಬಣ್ಣ, ಬಿರುಕುಗಳು, ತೆರೆದ/ನೇತಾಡುವ ವಿದ್ಯುತ್ ತಂತಿಗಳು ಮುಂತಾದ ಅಪಾಯಕಾರಿ ಪರಿಸ್ಥಿತಿಗಳು ಇರದಂತೆ ನೋಡಿಕೊಳ್ಳಬೇಕು.

• ಧೂಳು ಮತ್ತು ನೊಣಗಳ ಪ್ರವೇಶವನ್ನು ತಡೆಯಲು ಕಿಟಕಿ ಮತ್ತು ಬಾಗಿಲುಗಳಿಗೆ ಜಾಲರಿ ಅಥವಾ ಅಗತ್ಯವಿರುವಲ್ಲಿ ಏರ್ ಕರ್ಟನ್ ಅಳವಡಿಸಬೇಕು.

• ಸಾಬೂನು ಮತ್ತು ಶುದ್ಧ ಹರಿಯುವ ನೀರಿನೊಂದಿಗೆ ಪ್ರತ್ಯೇಕ ಕೈತೊಳೆಯುವ ಸಿಂಕ್‍ಗಳನ್ನು ಒದಗಿಸಬೇಕು.

• ಕಚ್ಚಾ ಆಹಾರ ತೊಳೆಯಲು ಮತ್ತು ಪಾತ್ರೆ/ಉಪಕರಣಗಳನ್ನು ತೊಳೆಯಲು ಪ್ರತ್ಯೇಕವಾಗಿ ಗುರುತಿಸಲಾದ ಸಿಂಕ್‍ಗಳನ್ನು ಬಳಸಬೇಕು.

• ಕಸದ ಬುಟ್ಟಿಗಳನ್ನು ನಿಯಮಿತವಾಗಿ ಖಾಲಿ ಮಾಡಿ, ಮುಚ್ಚಳದೊಂದಿಗೆ ಇಡಬೇಕು. ಇದರಿಂದ ಕೀಟಗಳು ಮತ್ತು ಸೂಕ್ಷ್ಮಜೀವಿಗಳ ಹರಡುವಿಕೆಯನ್ನು ತಡೆಯಬಹುದು.


10. ಆಹಾರ ಸಂಗ್ರಹಣೆ ಮತ್ತು ನಿರ್ವಹಣೆ

• ಕಚ್ಚಾ ಮಾಂಸ, ಮೀನು/ಸೀಫುಡ್ ಮತ್ತು ತರಕಾರಿಗಳನ್ನು ಪರಸ್ಪರ ಪ್ರತ್ಯೇಕವಾಗಿ ಸಂಗ್ರಹಿಸಿ ಅಡ್ಡ ಮಾಲಿನ್ಯ ಉಂಟಾಗದಂತೆ ನೋಡಿಕೊಳ್ಳಬೇಕು.

• ಶೀತಲೀಕರಿಸಿದ ಆಹಾರವನ್ನು 4ಡಿಗ್ರಿ ಸೆಲ್ಸಿಯಸ್ ಕ್ಕಿಂತ ಕಡಿಮೆ ತಾಪಮಾನದಲ್ಲಿ ಮತ್ತು ಫ್ರೋಜನ್ ಆಹಾರ ಪದಾರ್ಥಗಳನ್ನು–18 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಬೇಕು.

• ಅವಧಿ ಮೀರಿದ ಆಹಾರ ಪದಾರ್ಥಗಳು, ಹಾಳಾದ ತರಕಾರಿ/ಹಣ್ಣುಗಳು ಅಥವಾ ಶಿಲೀಂಧ್ರ ಕಾಣಿಸಿಕೊಂಡಿರುವ ಆಹಾರವನ್ನು ತಕ್ಷಣವೇ ವಿಲೇವಾರಿ ಮಾಡಬೇಕು.

• ಅಸುರಕ್ಷಿತ ಕೃತಕ ಬಣ್ಣಗಳು ಅಥವಾ ಅನುಮತಿಯಿಲ್ಲದ ಆಹಾರ ಸೇರ್ಪಡೆಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಬಾರದು.


11. ಸಿಬ್ಬಂದಿಯ ಆರೋಗ್ಯ ಮತ್ತು ನಿರ್ವಹಣೆ

• ಎಲ್ಲಾ ಆಹಾರ ನಿರ್ವಹಿಸುವ ಸಿಬ್ಬಂದಿಯು ಸ್ವಚ್ಛವಾದ ಸಮವಸ್ತ್ರ ಧರಿಸಿ, ಹೇರ್‍ನೆಟ್/ತಲೆಕವಚ ಹಾಗೂ ಅಗತ್ಯವಿರುವ ರಕ್ಷಣಾತ್ಮಕ ಉಡುಪುಗಳನ್ನು ಬಳಸಬೇಕು.

• ಸಿಬ್ಬಂದಿಯ ಕೈಗಳು ಮತ್ತು ಉಗುರುಗಳನ್ನು ಸದಾ ಸ್ವಚ್ಛವಾಗಿಡಬೇಕು.

• ಎಲ್ಲಾ ಅಡುಗೆ ಮತ್ತು ಆಹಾರ ಸೇವಾ ಸಿಬ್ಬಂದಿಯ ಮಾನ್ಯ ವೈದ್ಯಕೀಯ ಫಿಟ್ನೆಸ್ ದಾಖಲೆಗಳನ್ನು ನಿರ್ವಹಿಸಬೇಕು.

• ಆಹಾರ ಸುರಕ್ಷತಾ ನಿಯಮಗಳು ಮತ್ತು ವೈಯಕ್ತಿಕ ನೈರ್ಮಲ್ಯದ ಕುರಿತು ಸಿಬ್ಬಂದಿಗೆ ನಿಯಮಿತ ತರಬೇತಿ ನೀಡಬೇಕು.


12. ತ್ಯಾಜ್ಯ ಮತ್ತು ಬಳಸಿದ ಅಡುಗೆ ಎಣ್ಣೆಯ ವಿಲೇವಾರಿ

• ಅಡುಗೆಮನೆಯ ಆಹಾರ ತ್ಯಾಜ್ಯವನ್ನು ಸಮರ್ಪಕವಾಗಿ ಸಂಗ್ರಹಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು.

• ಬಳಸಿದ ಅಡುಗೆ ಎಣ್ಣೆಯನ್ನು ಅನಧಿಕೃತವಾಗಿ ಮರುಬಳಕೆ ಮಾಡಬಾರದು.

• ಬಳಸಿದ ಅಡುಗೆ ಎಣ್ಣೆಯನ್ನು ಅಧಿಕೃತ/ಅನುಮೋದಿತ ಮಾರ್ಗಗಳ ಮೂಲಕ ಮಾತ್ರ ವಿಲೇವಾರಿ ಮಾಡಬೇಕು.

• ಆಹಾರ ತ್ಯಾಜ್ಯ ಮತ್ತು ಇತರೆ ತ್ಯಾಜ್ಯಗಳನ್ನು ಅಡುಗೆ ಪ್ರದೇಶದಲ್ಲಿ ದೀರ್ಘಕಾಲ ಸಂಗ್ರಹಿಸಿಡಬಾರದು.


‘ರಾಜ್ಯದ ವಿವಿಧ ಹೊಟೇಲ್‍ಗಳು, ರೆಸ್ಟೋರೆಂಟ್‍ಗಳು, ಧಾಬಾಗಳು ಹಾಗೂ ಇತರೆ ಆಹಾರ ಸೇವಾ ಸಂಸ್ಥೆಗಳಲ್ಲಿ ಇತ್ತೀಚೆಗೆ ನಡೆದ ತಪಾಸಣೆಗಳ ಸಂದರ್ಭದಲ್ಲಿ ಕಂಡುಬಂದ ಲೋಪದೋಷಗಳಿಗೆ ಮಾರ್ಗಸೂಚಿಗಳನ್ನು ರಚಿಸಲಾಗಿದ್ದು, ಅವುಗಳ ಕಟ್ಟುನಿಟ್ಟಿನ ಅನುಷ್ಠಾನವನ್ನು ಮಾಡಬೇಕು. ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’.

- ಯು.ಟಿ. ಖಾದರ್, ಆರೋಗ್ಯ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News