×
Ad

ಕೆಂಪೇಗೌಡ ಭವನವನ್ನು ನಮ್ಮ ಸರಕಾರದ ಅವಧಿಯಲ್ಲಿಯೇ ಉದ್ಘಾಟನೆ : ಸಿಎಂ ಸಿದ್ದರಾಮಯ್ಯ ಭರವಸೆ

Update: 2025-06-27 17:58 IST

ಬೆಂಗಳೂರು : ನಗರದಲ್ಲಿರುವ ಸುಮನಹಳ್ಳಿ ವೃತ್ತದಲ್ಲಿ ಕೆಂಪೇಗೌಡ ಭವನವನ್ನು ನಿರ್ಮಾಣ ಮಾಡಿ, ನಮ್ಮ ಸರಕಾರದ ಅವಧಿಯಲ್ಲಿಯೇ ಉದ್ಘಾಟನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಬಾಬು ಜಗಜೀವನ ರಾಮ್ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಸಚಿವ ಸಂಪುಟದಲ್ಲಿ ಕೆಂಪೇಗೌಡ ಭವನವನ್ನು ನಿರ್ಮಿಸಲು ತೀರ್ಮಾನಿಸಿ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.

ಕೆಂಪೇಗೌಡರು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣದ ದೂರದೃಷ್ಟಿಯ ಮುತ್ಸದ್ದಿ ನಾಯಕರಾಗಿದ್ದು, 2017ರಲ್ಲಿ ನಮ್ಮ ಸರಕಾರ ಪ್ರತಿ ವರ್ಷ ಜೂ.27ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವ ಬಗ್ಗೆ ತೀರ್ಮಾನವನ್ನು ಕೈಗೊಂಡಿತು. ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಕಾಂಗ್ರೆಸ್ ಸರಕಾರವೇ ಪ್ರಾರಂಭಿಸಿದೆ. ಈಗ ಮಾಗಡಿಯ ಕೆಂಪಾಪುರದಲ್ಲಿ ಕೆಂಪೇಗೌಡರ ಸಮಾಧಿಯ ಅಭಿವೃದ್ಧಿ ಕಾರ್ಯವನ್ನು ಸರಕಾರ ಕೈಗೆತ್ತಿಗೊಂಡಿದೆ ಎಂದು ಅವರು ತಿಳಿಸಿದರು.

ಹಂಪಿ ಬಹಳ ಪ್ರವರ್ಧಮಾನಕ್ಕೆ ಬಂದಿದ್ದ ಕಾಲದಲ್ಲಿ ಪ್ರೇರಣೆ ಪಡೆದು ಬೆಂಗಳೂರನ್ನು ಅಭಿವೃದ್ಧಿಪಡಿಸುವ ಉದ್ದೇಶ ಕೆಂಪೇಗೌಡರಿಗೆ ಇತ್ತು. ಹೀಗಾಗಿ ಬೆಂಗಳೂರು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ, ಸ್ಟಾರ್ಟ್ ಅಪ್ ರಾಜಧಾನಿ, ಶೈಕ್ಷಣಿಕ ಹಾಗೂ ಆರೋಗ್ಯ ಕೇಂದ್ರವಾಗಿದ್ದರೆ, ಅದಕ್ಕೆ ಈ ನಗರದ ಅಡಿಪಾಯ ಹಾಕಿದ ಕೆಂಪೇಗೌಡರು ಕಾರಣ ಎಂದು ಅವರು ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಬೆಂಗಳೂರು ನಗರದ ಅಭಿವೃದ್ಧಿ ಸರಳವಾದ ಕೆಲಸವಲ್ಲ. ಇಲ್ಲಿನ ಜನಸಂಖ್ಯೆ, ವಾಹನಗಳ ಸಂಖ್ಯೆ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಹೊಸ ರೂಪ ನೀಡಬೇಕು. ಸುಮಾರು 40 ಕಿ.ಮೀ.ನಷ್ಟು ಟನಲ್ ರಸ್ತೆ, 118 ಕಿ.ಮೀ ಮೇಲ್ಸೇತುವೆ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದೇವೆ ಎಂದರು.

ನಗರದಲ್ಲಿ 60 ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವಂತಹ ನೂತನ ಸ್ಟೇಡಿಯಂ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ 50 ಎಕರೆ ಜಾಗ ಗುರುತಿಸಲಾಗಿದೆ. 6ನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸುಮಾರು 1 ಲಕ್ಷ ಕೋಟಿ ರೂ. ವೆಚ್ಚದ ಯೋಜನೆಗಳ ಅನುಷ್ಟಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನೀಡುವ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಕೌಶಾಲ್ ವರ್ಮಾ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್, ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಪಿ.ಕೆ.ಎಂ ಅವರಿಗೆ ಪ್ರದಾನ ಮಾಡಲಾಯಿತು.

ಇದೇವೇಳೆ ನೂತನ ‘ಕೆಂಪೇಗೌಡ ಭವನ’ಕ್ಕೆ ಭೂಮಿ ಪೂಜೆ ನೆರೆವೇರಿಸಲಾಯಿತು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿ ಚುಂಚನಗಿರಿ ಮಠದ ಡಾ.ನಿರ್ಮಲಾನಂದ ಸ್ವಾಮೀಜಿ, ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಸಚಿವರಾದ ಕೃಷ್ಣಬೈರೇಗೌಡ, ಡಾ.ಎಚ್.ಸಿ.ಮಹದೇವಪ್ಪ, ಶಿವರಾಜ್ ತಂಗಡಗಿ, ಕೆ.ಜೆ. ಜಾರ್ಜ್, ಶಾಸಕರಾದ ಬಾಲಕೃಷ್ಣ, ಎಸ್.ಟಿ.ಸೋಮಶೇಖರ್, ಬಮೂಲ್‍ನ ಅಧ್ಯಕ್ಷ ಡಿ.ಕೆ.ಸುರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಹುತೇಕ ಜಯಂತಿಗಳನ್ನು ಆಚರಣೆಗೆ ತಂದಿರುವುದು ಕಾಂಗ್ರೆಸ್: ‘ಸರಕಾರದ ವತಿಯಿಂದ 33 ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಜಯಂತಿಗಳನ್ನು ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಬಗ್ಗೆ ಅಭಿಮಾನ, ಗೌರವವಿದೆ. ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಕೃಷ್ಣ ಜಯಂತಿ, ಮಹಾವೀರ ಜಯಂತಿ, ವಾಮನ ಜಯಂತಿ ಸೇರಿದಂತೆ ಮುಖ್ಯವಾದ ಜಯಂತಿಗಳ ಆಚರಣೆಯನ್ನು ಜಾರಿಗೆ ತಂದಿದ್ದು ನಮ್ಮ ಸರಕಾರ’

-ಸಿದ್ದರಾಮಯ್ಯ, ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News