‘ಅಪಮಾನ ಮಾಡುವ ಉದ್ದೇಶವಿರಲಿಲ್ಲ’ | ಸಿಎಂ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ಎಎಸ್‍ಪಿ ಭರಮನಿ
ಧಾರವಾಡ : ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ವಿ.ಭರಮನಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಧಾನಪಡಿಸಿದ ಬಳಿಕ ಗುರುವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ನಾರಾಯಣ ವಿ.ಭರಮನಿ ಅವರಿಗೆ ದೂರವಾಣಿ ಕರೆ ಮೂಲಕ ಸಮಾಧಾನಪಡಿಸಿದ ಸಿಎಂ ಸಿದ್ದರಾಮಯ್ಯ, ‘ಸ್ವಯಂ ನಿವೃತ್ತಿ ನಿರ್ಧಾರ ಬೇಡ. ಅದನ್ನು ವಾಪಸ್ ಪಡೆಯಿರಿ. ನಾನು ಅಂದು ಉದ್ದೇಶಪೂರ್ವಕವಾಗಿ ಆ ರೀತಿ ಮಾಡಿಲ್ಲ. ನಿಮಗೆ ಅಗೌರವ ತೋರಬೇಕು ಎಂದು ಮಾಡಿದ್ದಲ್ಲ. ಅಪಮಾನ ಮಾಡುವ ಉದ್ದೇಶ ನನಗಿರಲಿಲ್ಲ’ ಎಂದು ಮನವರಿಕೆ ಮಾಡಿದ್ದಾರೆ.
‘ಅಂದು ನಮ್ಮ ಪಕ್ಷದ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಹೀಗಾಗಿ ಕೋಪ ಬಂದು ಮಾತನಾಡಿದ್ದೇನೆ. ಯಾವುದೇ ಬೇಸರ ಮಾಡಿಕೊಳ್ಳಬೇಡಿ. ತಮ್ಮ ರಾಜೀನಾಮೆ ವಾಪಸ್ ಪಡೆದುಕೊಳ್ಳಿ. ನೋವಾಗಿದ್ದರೆ ಕ್ಷಮಿಸಿ’ ಎಂದು ಸಿದ್ದರಾಮಯ್ಯನವರು, ಅವರನ್ನು ಸಮಾಧಾನಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ದೂರವಾಣಿ ಕರೆ ನಂತರ ಎಸ್ಪಿ ಡಾ.ಗೋಪಾಲ ಬ್ಯಾಕೋಡ ಅವರೊಂದಿಗೆ ಚರ್ಚಿಸಿದ ಬಳಿಕ ಕಚೇರಿಗೆ ಆಗಮಿಸಿದ ನಾರಾಯಣ ವಿ.ಭರಮನಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ‘ಹಿರಿಯ ಅಧಿಕಾರಿಗಳು ನನ್ನೊಂದಿಗೆ ಮಾತನಾಡಿದ್ದಾರೆ. ನಾನು ಶಿಸ್ತಿನ ಇಲಾಖೆಯಲ್ಲಿದ್ದೇನೆ. ಸಿಎಂ ಹಾಗೂ ಗೃಹಸಚಿವರು ಮಾತನಾಡಿದ್ದಾರೆ. ಮುಂದಿನ ನಿರ್ಧಾರ ಸರಕಾರ ಕೈಗೊಳ್ಳುತ್ತದೆ. ಈಗ ಕರ್ತವ್ಯಕ್ಕೆ ಹಾಜರಾಗಿದ್ದೇನೆ’ ಎಂದರು.
‘ಎ.28ರಂದು ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅಸಮಾಧಾನಗೊಂಡು, ವೇದಿಕೆಯಲ್ಲೇ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ವಿ.ಭರಮನಿ ಅವರಿಗೆ ಕೈ ಎತ್ತಿ ಅಸಮಾಧಾನ ವ್ಯಕ್ತಪಡಿಸಿದ್ದರು.