ಅಧಿಕಾರಿಗಳೊಂದಿಗೆ ಸರಣಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿದ ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಆಡಳಿತ ಪಕ್ಷದ ಶಾಸಕರಲ್ಲಿನ ಅಸಮಾಧಾನ ಶಮನಗೊಳಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಶಾಸಕರೊಂದಿಗೆ ಸಭೆ ನಡೆಸುತ್ತಿದ್ದರೆ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಇಡೀ ದಿನ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ, ಆರ್ಥಿಕ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಸೇರಿದಂತೆ ಆಯಾ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಸರಣಿ ಸಭೆಗಳನ್ನು ನಡೆಸಿದರು.
ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಘೋಷಿಸಿರುವ ಯೋಜನೆಗಳು ಮತ್ತು ಭರವಸೆಗಳ ಅನುಷ್ಠಾನಕ್ಕಾಗಿ, ಇಲಾಖಾವಾರು ಬಿಡುಗಡೆ ಮಾಡಲಾಗಿರುವ ಅನುದಾನದ ಪ್ರಮಾಣ, ಎಷ್ಟು ಖರ್ಚು ಮಾಡಲಾಗಿದೆ, ಎಷ್ಟು ಬಿಡುಗಡೆಗೆ ಬಾಕಿಯಿದೆ. ಇನ್ನು ಅಧಿಸೂಚನೆ ಹೊರಡಿಸದ ಯೋಜನೆಗಳು ಯಾವುವು, ಅವುಗಳಿಗೆ ಇರುವ ಅನುದಾನದ ಲಭ್ಯತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಚರ್ಚೆ ನಡೆಸಿದರು.
ತೆರಿಗೆ ಸಂಪನ್ಮೂಲ ಸಂಗ್ರಹ ಮತ್ತು ಕೇಂದ್ರ ಸರಕಾರದಿಂದ ವಿವಿಧ ಯೋಜನೆಗಳಿಗೆ ಬರಬೇಕಿರುವ ಅನುದಾನದ ಬಗ್ಗೆಯೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಮುಖ್ಯಮಂತ್ರಿ ಮಾಹಿತಿ ಪಡೆದುಕೊಂಡರು. ಹಲವು ಇಲಾಖೆಗಳಲ್ಲಿ ಅನುದಾನದ ಕೊರತೆಯ ಕಾರಣಕ್ಕಾಗಿ ಬಜೆಟ್ ಘೋಷಣೆಗಳು ಅನುಷ್ಠಾನಗೊಂಡಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರತಿಯೊಂದು ಇಲಾಖೆಯ ಜೊತೆ ಮುಖ್ಯಮಂತ್ರಿ ಪ್ರತ್ಯೇಕವಾಗಿ ಸಭೆ ನಡೆಸಿ ಮಾಹಿತಿ ಕಲೆ ಹಾಕಿದರು.
ಅಲ್ಲದೇ, ಬಜೆಟ್ ಘೋಷಣೆಗಳ ಅನುಷ್ಠಾನದಲ್ಲಿ ವಿನಾಕಾರಣ ವಿಳಂಬ ಮಾಡುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ, ಬಜೆಟ್‍ನಲ್ಲಿರುವ ಎಲ್ಲ ಘೋಷಣೆಗಳು ಈ ಆರ್ಥಿಕ ಸಾಲಿನಲ್ಲೆ ಅನುಷ್ಠಾನಕ್ಕೆ ಬರಬೇಕು. ಯಾವುದಾದರೂ ಘೋಷಣೆ ಅನುಷ್ಠಾನಗೊಳ್ಳಲು ವಿಳಂಬವಾದಲ್ಲಿ ಅದಕ್ಕೆ ಸೂಕ್ತ ಕಾರಣ ಹಾಗೂ ವಿವರಣೆಗಳನ್ನು ಸಲ್ಲಿಸಬೇಕು ಎಂದು ತಾಕೀತು ಮಾಡಿದರು.
ಸಿಎಂ ಸಿದ್ದರಾಮಯ್ಯ ದಿಲ್ಲಿಗೆ: ಮೈಸೂರು ದಸರಾ ಉತ್ಸವದ ಸಂದರ್ಭದಲ್ಲಿ ವೈಮಾನಿಕ ಪ್ರದರ್ಶನ ಆಯೋಜಿಸಲಾಗುತ್ತಿದೆ. ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.9ರಂದು ಹೊಸದಿಲ್ಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಇದೇ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆ ನಡೆಸಲಿರುವ ಸಿದ್ದರಾಮಯ್ಯ, ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಶಿಫಾರಸ್ಸು ಮಾಡಿರುವ ಪಟ್ಟಿಗೆ ಒಪ್ಪಿಗೆ ನೀಡಲು ಮನವಿ ಮಾಡಲಿದ್ದಾರೆ ಎಂದು ಗೊತ್ತಾಗಿದೆ.