×
Ad

ಸಕ್ಕರೆ ಕಾರ್ಖಾನೆ ಮಾಲಕರ ಸಮ್ಮುಖದಲ್ಲಿಯೇ ಕಬ್ಬಿಗೆ ದರ ನಿಗದಿ : ಸಿಎಂ ಸಿದ್ದರಾಮಯ್ಯ

"ಪ್ರತಿ ಟನ್ ಕಬ್ಬಿಗೆ 3,300 ದರ ನಿಗದಿ; ಆದೇಶ ಹೊರಡಿಸಿದ ಸರಕಾರ"

Update: 2025-11-08 18:57 IST

ಬೆಂಗಳೂರು : ‘ಪ್ರತಿಟನ್ ಕಬ್ಬಿಗೆ 3,300ರೂ. ದರ ನಿಗದಿ ಸಂಬಂಧ ಸಕ್ಕರೆ ಕಾರ್ಖಾನೆಗಳ ಮಾಲಕರು ಹಾಗೂ ರೈತ ಮುಖಂಡರೊಂದಿಗೆ ಚರ್ಚಿಸಿಯೇ ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದೆ. ಇದೀಗ ರಾಜ್ಯ ಸರಕಾರ ಆದೇಶವನ್ನು ಹೊರಡಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಶಾಸಕರ ಭವನದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜೂನ್ ತಿಂಗಳಿನಲ್ಲಿ 3200 ರೂ.ಗಳಿಗೆ ಜಿಲ್ಲಾಧಿಕಾರಿಗಳು ಹೇಳಿದ್ದರೂ ರೈತರು ಒಪ್ಪಿಗೆ ನೀಡಿರಲಿಲ್ಲ, ಸಂಧಾನದ ಬಳಿಕ ಎಲ್ಲರೂ ಒಪ್ಪಿಕೊಂಡಿದ್ದಾರೆ. ಅಲ್ಲದೆ, 50 ರೂ.ಗಳನ್ನು ಸಕ್ಕರೆ ಕಾರ್ಖಾನೆ ಮಾಲಕರು ಹಾಗೂ 50ರೂ.ಗಳನ್ನು ಸರಕಾರ ಕೊಡಲಿದೆ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದರು.

ಶೇ.9.5ರಷ್ಟು ಇಳುವರಿ ಇದ್ದರೆ ಪ್ರತಿಟನ್‍ಗೆ 3,290.50 ರೂ.ದರವನ್ನು ಕೇಂದ್ರ ಸರಕಾರ ಎಫ್‍ಆರ್‍ಪಿ ನಿಗದಿಪಡಿಸಿದೆ. ಶೇ.10.25ರಷ್ಟು ಇಳುವಳಿ ಇದ್ದರೆ 3,100 ರೂ.ಜೊತೆಗೆ 100 ರೂ.ಗಳು ಸೇರಿದಂತೆ 3,200 ರೂ. ಹಾಗೂ ಶೇ.11.25ರಷ್ಟು ಇಳುವರಿ ಇದ್ದರೆ 3,200 ರೂ. ಜೊತೆಗೆ 100 ರೂ.ಸೇರಿದಂತೆ ಒಟ್ಟು 3,300 ರೂ. ಒದಗಿಸಲಾಗುವುದು ಎಂದು ಅವರು ವಿವರಿಸಿದರು.

ಸಕ್ಕರೆ ಇಲಾಖೆ ಆದೇಶ: ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ(ಸಕ್ಕರೆ) ಅಧೀನ ಕಾರ್ಯದರ್ಶಿ ಶಾಂತರಾಮ್ ಅಧಿಕೃತ ಆದೇಶವನ್ನು ಹೊರಡಿಸಿದ್ದು, ಕಾರ್ಖಾನೆಗಳು ಮೇಲ್ಕಂಡ ದರದ ಅನ್ವಯ ಕಬ್ಬಿನ ಇಳುವಳಿ ಆಧರಿಸಿ ದರವನ್ನು ನೀಡಬೇಕು. ಕಾರ್ಖಾನೆಗಳು ಪ್ರಥಮ ಕಂತಿನ ಮೊತ್ತವನ್ನು ಸಕ್ಕರೆ ನಿಯಂತ್ರಣ ಕಾಯ್ದೆಯಡಿಯಲ್ಲಿ ನಿಗದಿಪಡಿಸಿರುವಂತೆ 14ದಿನಗಳ ಒಳಗಾಗಿ ಹಣವನ್ನು ರೈತರಿಗೆ ಸಂದಾಯ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News