ಸಮೀಕ್ಷೆ ಅವಧಿ ವಿಸ್ತರಣೆಗೆ ಬಗ್ಗೆ ಸಿಎಂ ತೀರ್ಮಾನಿಸಲಿದ್ದಾರೆ: ಗೃಹ ಸಚಿವ ಡಾ.ಪರಮೇಶ್ವರ್
ಗೃಹ ಸಚಿವ ಡಾ.ಪರಮೇಶ್ವರ್ (PTI)
ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಅವಧಿ ವಿಸ್ತರಣೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಲಿದ್ದಾರೆ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಮೀಕ್ಷೆ ಸೆ.22ಕ್ಕೆ ಆರಂಭಗೊಂಡಿದ್ದು, ಅಕ್ಟೋಬರ್ 7ಕ್ಕೆ ಮುಕ್ತಾಯಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳಕ್ಕೆ ತೆರಳಿದ್ದು, ಅವರು ಅಲ್ಲಿಂದ ಹಿಂದಿರುಗಿದ ಬಳಿಕ ಅಧಿಕಾರಿಗಳಿಂದ ಸಮೀಕ್ಷೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದರು.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ವಿಭಿನ್ನ ಶೇಕಡಾವಾರು ಸಮೀಕ್ಷೆ ಪೂರ್ಣಗೊಂಡಿದ್ದು, ಕೆಲವು ಸ್ಥಳಗಳಲ್ಲಿ ಇದು ಶೇ.70, ಶೇ.50 ಮತ್ತು ಇತರ ಕೆಲವು ಸ್ಥಳಗಳಲ್ಲಿ ಬಹುತೇಕ ಶೇ.80 ಅಥವಾ ಪೂರ್ಣಗೊಳ್ಳುವ ಹಂತದಲ್ಲಿದೆ. ಇಡೀ ರಾಜ್ಯದಲ್ಲಿ ಸರಾಸರಿ ಶೇ.70ರಿಂದ 80ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ' ಎಂದು ಡಾ.ಪರಮೇಶ್ವರ ಹೇಳಿದರು.
400 ಕೋಟಿ ರೂ.ವೆಚ್ಚದಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ 60 ಪ್ರಶ್ನೆಗಳ ಪ್ರಶ್ನಾವಳಿಯನ್ನು ಬಳಸಲಾಗುತ್ತದೆ ಮತ್ತು ಅಧಿಕಾರಿಗಳ ಪ್ರಕಾರ ಇದನ್ನು ವೈಜ್ಞಾನಿಕವಾಗಿ ನಡೆಸಲಾಗುತ್ತಿದೆ. 2015ರಲ್ಲಿ ಸರಕಾರವು ಸಮೀಕ್ಷೆಗಾಗಿ 165.51 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು. ಆದರೆ, ನಂತರ ಅದನ್ನು ಕೈಬಿಡಲಾಯಿತು ಎಂದು ಅವರು ಹೇಳಿದರು.
ಸಮೀಕ್ಷೆಯ ಬಗ್ಗೆ ಸಚಿವ ವಿ.ಸೋಮಣ್ಣ ಆಕ್ಷೇಪಿಸಿದ್ದಾರೆ. ಲೋಪಗಳಿದ್ದರೆ ಸರಿಪಡಿಸಲು ಸಲಹೆ ನೀಡಬೇಕು. ಜೊತೆಗೆ ಸರಕಾರದೊಂದಿಗೆ ಎಲ್ಲರೂ ಸಹಕಾರ ನೀಡಬೇಕು. ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಒಳ್ಳೆಯ ಉದ್ದೇಶದಿಂದ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.