×
Ad

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ.ರಾಯ್ ಮೃತ್ಯು: ಆದಾಯ ತೆರಿಗೆ ಅಧಿಕಾರಿಗಳಿಂದ ಕಿರುಕುಳ ಎಂದು ಆರೋಪಿಸಿದ ಸೋದರ

Update: 2026-01-31 12:38 IST

ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ.ರಾಯ್ ಸಾವಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರ ಸಹೋದರ ಬಾಬು ಸಿ.ಜೆ., ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ನಿರಂತರ ಒತ್ತಡದಿಂದ ನನ್ನ ಸಹೋದರ ತೀವ್ರ ಮಾನಸಿಕ ಖಿನ್ನತೆಗೆ ಗುರಿಯಾಗಿದ್ದ ಎಂದು ದೂರಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬು, ಆದಾಯ ತೆರಿಗೆ ಇಲಾಖೆಯಿಂದ ಸಿ.ಜೆ.ರಾಯ್ ಮೇಲೆ ತೀವ್ರ ಒತ್ತಡವಿತ್ತು. ಶುಕ್ರವಾರ ಬೆಳಗ್ಗೆ 10.40 ರ ವೇಳೆಗೆ ನನಗೆ ಕರೆ ಮಾಡಿದ್ದ ರಾಯ್, ನನ್ನನ್ನು ಯಾವಾಗ ಭೇಟಿಯಾಗುತ್ತೀಯಾ ಎಂದು ಕೇಳಿದ. ನಾನು ಥಾಯ್ಲೆಂಡ್‌ನಲ್ಲಿದ್ದೇನೆ ಎಂದು ಆತನಿಗೆ ತಿಳಿಸಿದೆ ಹಾಗೂ ಶನಿವಾರ ಬೆಳಗ್ಗೆ 7 ಗಂಟೆಗೆ ನಾವಿಬ್ಬರೂ ಭೇಟಿಯಾಗಲು ಯೋಜನೆ ಹಾಕಿದ್ದೆವು" ಎಂದು ತಿಳಿಸಿದರು.

ರಾಯ್ ತನ್ನ ಜೀವವನ್ನೇ ಕಳೆದುಕೊಳ್ಳುವಂತೆ ಮಾಡುವ ಯಾವುದೇ ಹಣಕಾಸು ಹೊಣೆಗಾರಿಕೆಯಾಗಲಿ ಅಥವಾ ವೈಯಕ್ತಿಕ ವಿಷಯಗಳಾಗಲಿ ಇರಲಿಲ್ಲ. ಆದರೆ, ಕೊಚ್ಚಿಯ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರು ರಾಯ್ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದರು. ಆದಾಯ ತೆರಿಗೆ ಇಲಾಖೆ ಕಳೆದ ಮೂರು ದಿನಗಳಿಂದ ಆದಾಯ ತೆರಿಗೆ ದಾಳಿ ನಡೆಸುತ್ತಿದ್ದು, ಸುಮಾರು ಒಂದು ತಿಂಗಳಿನಿಂದ ರಾಯ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎಂದೂ ಅವರು ದೂರಿದರು.

ಸಿ.ಜೆ.ರಾಯ್ ಅವರ ಅಂತ್ಯಕ್ರಿಯೆ ರವಿವಾರ ಬೆಂಗಳೂರಿನಲ್ಲಿ ನಡೆಯಲಿದೆ. ಅವರ ಮೃತದೇಹವನ್ನು ಬೆಳಗ್ಗೆ ಅವರ ನಿವಾಸಕ್ಕೆ ತರಲಾಗುತ್ತದೆ ಹಾಗೂ ಮಧ್ಯಾಹ್ನದವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಇದಾದ ಬಳಿಕ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಈ ಘಟನೆಯ ಕುರಿತು ವಿಸ್ತೃತ ತನಿಖೆಗಾಗಿ ಕರ್ನಾಟಕ ಪೊಲೀಸ್ ಇಲಾಖೆ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News