Vijayanagara | ಮಗನಿಂದಲೇ ತಂದೆ-ತಾಯಿ, ಸಹೋದರಿಯ ಹತ್ಯೆ
ಹತ್ಯೆಗೈದ ಬಳಿಕ ಬೆಂಗಳೂರಿಗೆ ಪರಾರಿಯಾಗಿದ್ದ ಆರೋಪಿಯ ಬಂಧನ
ಆರೋಪಿ ಅಕ್ಷಯ್, ಮೃತ ಅಮೃತಾ, ಭೀಮರಾಜ್, ಜಯಲಕ್ಷ್ಮಿ
ವಿಜಯನಗರ : ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದಿದ್ದ ಒಂದೇ ಕುಟುಂಬದ ಮೂವರು ಸದಸ್ಯರ ಹತ್ಯೆ ಪ್ರಕರಣದ ಆರೋಪಿಯನ್ನು ಬೆಂಗಳೂರು ತಿಲಕ್ ನಗರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತರನ್ನು ತಂದೆ ಭೀಮರಾಜ್, ತಾಯಿ ಜಯಲಕ್ಷ್ಮಿ, ಸಹೋದರಿ ಅಮೃತಾ ಹಾಗೂ ಬಂಧಿತ ಆರೋಪಿಯನ್ನು ಅಕ್ಷಯ್ ಎಂದು ಗುರುತಿಸಲಾಗಿದೆ.
ಜ.26ರ ರಾತ್ರಿ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ತನ್ನ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಕ್ಷಯ್ ಹತ್ಯೆಗೈದು ಮನೆಯಲ್ಲಿಯೇ ಮೃತದೇಹಗಳನ್ನು ಹೂತುಹಾಕಿ ಬೆಂಗಳೂರಿಗೆ ಪರಾರಿಯಾಗಿದ್ದ ಎನ್ನಲಾಗಿದೆ.
ತಂದೆ, ತಾಯಿ ಹಾಗೂ ಸಹೋದರಿಯನ್ನು ಹತ್ಯೆಗೈದ ಬಳಿಕ ಬೆಂಗಳೂರಿಗೆ ಪರಾರಿಯಾಗಿದ್ದ ಅಕ್ಷಯ್, ಕುಟುಂಬದವರು ಕಾಣೆಯಾಗಿದ್ದಾರೆ ಎಂದು ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಲು ತೆರಳಿದ್ದಾನೆ. ಈ ವೇಳೆ ಆರೋಪಿಯ ವರ್ತನೆ ಅನುಮಾನಾಸ್ಪದವಾಗಿದ್ದರಿಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಕೊಲೆ ಮಾಡಿರುವುದಾಗಿ ಸ್ವಯಂ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ತಿಲಕ್ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಜಯನಗರ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು ವಿಜಯನಗರ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿದೆ. ಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಸುದ್ದಿ ತಿಳಿದ ಬಳಿಕ ವಿಜಯನಗರ ಜಿಲ್ಲಾ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.