ಆದಾಯ ತೆರಿಗೆ ಇಲಾಖೆ ದಾಳಿಯ ನಂತರ ಮೃತ ಸ್ಥಿತಿಯಲ್ಲಿ ಪತ್ತೆಯಾದ ಕಾನ್ಫಿಡೆಂಟ್ ಗ್ರೂಪ್ ಮಾಲಕ ಸಿ.ಜೆ. ರಾಯ್ ಯಾರು?
ಸಿ.ಜೆ. ರಾಯ್ | Photo Credit : Instagram
ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಳಿಯ ನಂತರ ಕಾನ್ಫಿಡೆಂಟ್ ಗ್ರೂಪ್ ಮಾಲಕ ಸಿ.ಜೆ. ರಾಯ್ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿಯಿರುವ ತಮ್ಮ ಕಚೇರಿಯಲ್ಲಿ ತಮಗೆ ತಾವೇ ಗುಂಡು ಹೊಡೆದುಕೊಂಡು ಅವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಗಳು ಶಂಕೆ ವ್ಯಕ್ತಪಡಿಸಿವೆ.
ಅವರಿಗೆ 57 ವರ್ಷ ವಯಸ್ಸಾಗಿತ್ತು.
ವರದಿಗಳ ಪ್ರಕಾರ, ತಮ್ಮ ಸಂಸ್ಥೆಗಳಿಗೆ ಸಂಬಂಧಿಸಿದ ಕಂಪೆನಿಗಳ ಮೇಲೆ ಇಂದು ಬೆಳಿಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.
ತಕ್ಷಣವೇ ಅವರನ್ನು HSR ಲೇಔಟ್‌ನಲ್ಲಿರುವ ನಾರಾಯಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯು ಉದ್ಯಮ ಹಾಗೂ ರಿಯಲ್ ಎಸ್ಟೇಟ್ ವಲಯದಲ್ಲಿ ಆಘಾತಕ್ಕೆ ಕಾರಣವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ತನಿಖೆ ಮುಂದುವರಿದಂತೆ ಇನ್ನಷ್ಟು ಮಾಹಿತಿಗಳು ಲಭ್ಯವಾಗುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯಿಂದ ಸಿ.ಜೆ. ರಾಯ್ ಖಿನ್ನತೆಗೊಳಗಾಗಿದ್ದರು ಎಂದು ಪಿಟಿಐ ಸುದ್ದಿ ಸಂಸ್ಥೆಯ ವರದಿಗಾರ್ತಿ ಎಲಿಝಬೆತ್ ಕುರಿಯನ್ ವರದಿ ಮಾಡಿದ್ದಾರೆ.
ಸಿ.ಜೆ. ರಾಯ್ ಯಾರು?
ಸಿ.ಜೆ. ರಾಯ್ ಅವರ ರಿಯಲ್ ಎಸ್ಟೇಟ್ ಸಮೂಹವು ಕೇರಳ ಹಾಗೂ ಕರ್ನಾಟಕದಲ್ಲಿ ಪ್ರಮುಖವಾಗಿ ಕಾರ್ಯಾಚರಿಸುತ್ತಿದ್ದು, ದುಬೈ ಸೇರಿದಂತೆ ಯುಎಇಯಲ್ಲಿಯೂ ಅವರ ಪ್ರಾಜೆಕ್ಟ್ ಗಳು ನಡೆಯುತ್ತಿವೆ. ಅವರು 2000ರ ಮಧ್ಯಭಾಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಪ್ರವೇಶಿಸುವುದಕ್ಕೂ ಮುನ್ನ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದು, ಕಾರ್ಪೊರೇಟ್ ವಲಯದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು.
ಅವರ ನಾಯಕತ್ವದಲ್ಲಿ ಕಾನ್ಫಿಡೆಂಟ್ ಗ್ರೂಪ್ ಕೇರಳದಲ್ಲಿನ ಒಂದು ಯೋಜನೆಯ ಮೂಲಕ ತನ್ನ ಉದ್ಯಮವನ್ನು ವಿಸ್ತರಿಸಿಕೊಂಡು, ಇಂದು ವಸತಿ ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್, ಆತಿಥ್ಯ ಹಾಗೂ ಸಂಬಂಧಿತ ವ್ಯವಹಾರಗಳಲ್ಲಿ 100–160ಕ್ಕೂ ಹೆಚ್ಚು ಯೋಜನೆಗಳನ್ನು ಹೊಂದಿರುವ ಬಹುವಲಯದ ಬೃಹತ್ ಡೆವಲಪರ್ ಆಗಿ ಬೆಳೆದಿದೆ. ಅವರ ನಿವ್ವಳ ಆಸ್ತಿಯ ಮೌಲ್ಯವು 300 ಕೋಟಿ ರೂ.ಗಳಿಂದ 500 ಕೋಟಿ ರೂ.ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
►ಕಾನ್ಫಿಡೆಂಟ್ ಗ್ರೂಪ್
ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಕಾನ್ಫಿಡೆಂಟ್ ಗ್ರೂಪ್ ಕೇರಳದಲ್ಲಿ ಬಲಿಷ್ಠ ನೆಲೆ ಹೊಂದಿದ್ದು, ನಂತರ ವಿದೇಶಗಳಲ್ಲಿಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಐಷಾರಾಮಿ ಅಪಾರ್ಟ್‌ಮೆಂಟ್‌ಗಳು, ನಿವೇಶನ ಅಭಿವೃದ್ಧಿ, ಟೌನ್‌ಶಿಪ್‌ಗಳು ಹಾಗೂ ಆತಿಥ್ಯ, ವೈಮಾನಿಕ ಸೇವೆ, ಮನರಂಜನೆ, ಶಿಕ್ಷಣ, ಗಾಲ್ಫ್ ಯೋಜನೆಗಳು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳ ವ್ಯವಹಾರ ಸೇರಿದಂತೆ ವಸತಿ ಹಾಗೂ ವಾಣಿಜ್ಯ ರಿಯಲ್ ಎಸ್ಟೇಟ್ ಮೇಲೆ ಕಂಪೆನಿ ತನ್ನ ಗಮನ ಕೇಂದ್ರೀಕರಿಸಿದೆ.
ಅತ್ಯಂತ ಕಡಿಮೆ ಸಾಲ ಅಥವಾ ಶೂನ್ಯ ಸಾಲದ ಡೆವಲಪರ್ ಎಂಬ ಹೆಗ್ಗಳಿಕೆಯನ್ನು ಈ ಸಂಸ್ಥೆ ಕಾಯ್ದುಕೊಂಡಿತ್ತು. ಆ ಮೂಲಕ ವ್ಯಾಜ್ಯರಹಿತ ಭೂ ಹಕ್ಕುಗಳು, ಕಾನೂನು ಪಾರದರ್ಶಕತೆ ಮತ್ತು ಖರೀದಿದಾರರ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿತ್ತು.
ತನ್ನ ಉದ್ಯಮದ ಉತ್ತುಂಗದ ಅವಧಿಯಲ್ಲಿ ಕಾನ್ಫಿಡೆಂಟ್ ಗ್ರೂಪ್ ಸುಮಾರು 140–165 ಯೋಜನೆಗಳನ್ನು ಪೂರ್ಣಗೊಳಿಸಿತ್ತು ಅಥವಾ ಆರಂಭಿಸಿತ್ತು. ಸುಮಾರು 4 ಕೋಟಿ ಚದರ ಅಡಿ ವಿಸ್ತೀರ್ಣದ ಭೂ ಅಭಿವೃದ್ಧಿ ಮೂಲಕ, ಭಾರತ ಮತ್ತು ಗಲ್ಫ್ ಪ್ರದೇಶದಾದ್ಯಂತ 15,000ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಿದೆ. ದಕ್ಷಿಣ ಭಾರತದಲ್ಲಿ ಮುಂಚೂಣಿ ರಿಯಲ್ ಎಸ್ಟೇಟ್ ಕಂಪೆನಿಯಾಗಿ ಗುರುತಿಸಿಕೊಂಡಿರುವ ಕಾನ್ಫಿಡೆಂಟ್ ಗ್ರೂಪ್, ವಿಶೇಷವಾಗಿ ಕೇರಳ ಮತ್ತು ಬೆಂಗಳೂರಿನಲ್ಲಿ ಉನ್ನತ CRISIL ಶ್ರೇಯಾಂಕ ಹಾಗೂ ಬಲಿಷ್ಠ ಬ್ರ್ಯಾಂಡ್ ಗುರುತನ್ನು ಹೊಂದಿದೆ.
ಸೌಜನ್ಯ: financialexpress.com