×
Ad

ವಿಪಕ್ಷದವರನ್ನು ಪರಿಗಣನೆಗೆ ತೆಗೆದುಕೊಳ್ಳದ ಕಾಂಗ್ರೆಸ್ ಸರಕಾರ: ಬಿ. ಶ್ರೀರಾಮುಲು ಟೀಕೆ

Update: 2025-07-18 19:25 IST

ಬಿ.ಶ್ರೀರಾಮುಲು

ಬೆಂಗಳೂರು: ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವಾಗ ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಪ್ರತಿಪಕ್ಷದ ಸದಸ್ಯರು ಎಂದರೆ ಲೆಕ್ಕವಿಲ್ಲದವರು ಎಂಬಂತಾಗಿದೆ. ವಿರೋಧ ಪಕ್ಷದವರನ್ನು ಪರಿಗಣನೆಗೆ ತೆಗೆದುಕೊಳ್ಳಬಾರದೆಂಬ ಅಲಿಖಿತ ನಿಯಮ ಕಾಂಗ್ರೆಸ್ ಪಕ್ಷದಲ್ಲಿ ಇದೆಯೇ? ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಪ್ರಶ್ನಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಎಕ್ಸ್‍ನಲ್ಲಿ ಪೋಸ್ಟ್ ಹಾಕಿರುವ ಅವರು, ಒಂದು ಶಾಸನ ಸಭೆ ಎಂದರೆ ರಾಜ್ಯವನ್ನು ಮುನ್ನಡೆಸುವವರಿಗೆ ಪಕ್ಷಪಾತ, ಬೇಧಭಾವ ಇರಬಾರದು. 40 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಎರಡು ಬಾರಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಹಲವಾರು ಹುದ್ದೆಗಳನ್ನು ನಿಭಾಯಿಸಿರುವ ನಿಮ್ಮಂತಹವರಿಗೆ ಪ್ರತಿಪಕ್ಷದವರನ್ನು ಪರಿಗಣಿಸಬೇಕೆಂಬ ಸಾಮಾನ್ಯಜ್ಞಾನ ಇಲ್ಲದಿದ್ದರೆ ಹೇಗೆ? ಎಂದು ಕೇಳಿದ್ದಾರೆ.

ಆಡಳಿತ ಪಕ್ಷದ ಸದಸ್ಯರ ಪ್ರತಿ ಕ್ಷೇತ್ರಗಳಿಗೆ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವ ನಿಮಗೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಕ್ಷೇತ್ರಗಳಿಗೂ ಅನುದಾನ ಕೊಟ್ಟಿದ್ದರೆ ಕರ್ನಾಟಕವೇನೂ ಮುಳುಗಡೆಯಾಗುತ್ತಿತ್ತೇ? ಕಳೆದ ಎರಡೂವರೆ ವರ್ಷಗಳಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡದ ಕಾರಣ ಕ್ಷೇತ್ರದಲ್ಲಿ ಹಲವಾರು ಮೂಲಭೂತ ಸಮಸ್ಯೆಗಳು ಎದುರಾಗಿವೆ. 50 ಕೋಟಿ ರೂ. ಅನುದಾನವನ್ನು ಅಷ್ಟಕ್ಕೂ ನೀವೇನು ಕಾಂಗ್ರೆಸ್ ಪಕ್ಷದ ದೇಣಿಗೆಯಿಂದ ಕೊಡುತ್ತಿದ್ದೀರಾ? ಎಂದು ಅವರು ಪ್ರಶ್ನಿಸಿದ್ದಾರೆ.

ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ಒಡೆದಾಳುವ ನೀತಿಯನ್ನು ನಿಲ್ಲಿಸಿ. ಕುಂತಿರುವ ಕುರ್ಚಿ ಅಲುಗಾಡುತ್ತಿದ್ದು, ಸಿಎಂ ಬದಲಾವಣೆಗೆ ಸ್ವಪಕ್ಷೀಯರೇ ಉಸ್ತುವಾರಿಗಳ ಮುಂದೆ ಬೇಡಿಕೆ ಇಟ್ಟಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ನಾಳೆ ಬಲಾಬಲ ಪ್ರದರ್ಶನ ನಡೆದರೆ ನನ್ನ ಪರವಾಗಿ ಶಾಸಕರು ಕೈ ಎತ್ತಲಿ ಎಂಬ ನಿಮ್ಮ ದುರಾಲೋಚನೆಯನ್ನು ಬಿಟ್ಟು ಪ್ರತಿಪಕ್ಷಗಳ ಸದಸ್ಯರ ಕ್ಷೇತ್ರಗಳಿಗೂ ಅಷ್ಟೇ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಶ್ರೀರಾಮುಲು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News