×
Ad

ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‍ಗೆ ಉಳಿದಿಲ್ಲ: ವಿಪಕ್ಷ ನಾಯಕ ಆರ್.ಅಶೋಕ್

Update: 2024-01-23 18:34 IST

Photo: (PTI)

ಬೆಂಗಳೂರು: ರಾಮನ ಅಸ್ತಿತ್ವವನ್ನೆ ಪ್ರಶ್ನಿಸಿ, ರಾಮ ಮಂದಿರದ ಆಹ್ವಾನ ತಿರಸ್ಕರಿಸಿದ ತಮ್ಮ ಪಕ್ಷಕ್ಕೆ ರಾಮನ ಬಗ್ಗೆ, ಕೊಟ್ಟ ಮಾತಿನಂತೆ ರಾಮನ ಮಂದಿರ ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಉಳಿದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ʼಎಕ್ಸ್ʼ ನಲ್ಲಿ ಪೋಸ್ಟ್ ಹಾಕಿರುವ ಅವರು, ಕನ್ನಡಿಗರ ರಾಮಭಕ್ತಿ, ಹಿಂದೂಗಳ ಒಗ್ಗಟ್ಟು ನೋಡಿ ತಮಗೆ ನಡುಕ ಉಂಟಾಗಿದೆ ಎಂದು ಗೊತ್ತು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲದಿದ್ದರೆ ಪಾಪ ತಮ್ಮ ಕುರ್ಚಿಗೆ ಕಂಟಕ. ಸಿದ್ದರಾಮಯ್ಯನವರೇ ತಮ್ಮ ಪರಿಸ್ಥಿತಿಯ ಬಗ್ಗೆ ನನಗೆ ಕನಿಕರವಿದೆ. ಇನ್ನಾದರೂ ರಾಮನಿಗೆ ಶರಣಾಗಿ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಅಂತೂ ಇಂತೂ ತಮ್ಮ ಬಾಯಲ್ಲೂ ರಾಮ ನಾಮ ಹೊರಡುತ್ತಿದೆ. ತೋರಿಕೆಗೊ, ಜನಮೆಚ್ಚುಗೆಗೊ ಅಥವಾ ಸಮಾಜದ ಅಂಜಿಕೆಗೋ, ಒಟ್ಟಿನಲ್ಲಿ ನಿನ್ನೆ ತಾವೂ ಒಂದು ದೇವಸ್ಥಾನಕ್ಕೆ ಹೋಗಿದ್ದೀರಿ. ಇದು ಸಂತೋಷದ ವಿಷಯ. ಆದರೆ ನಿಮ್ಮ ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯನ್ನು ರಾಮನ ವಿಷಯದಲ್ಲೂ ವಿಸ್ತರಿಸುವ ಪಾಪ ಕಟ್ಟಿಕೊಳ್ಳಬೇಡಿ ಎಂದು ಅಶೋಕ್ ಹೇಳಿದ್ದಾರೆ.

ನೀವು ಮಹಾತ್ಮ ಗಾಂಧಿಯವರು ಹೇಳಿದ ರಾಮನ ಭಕ್ತರು ಅಂತ ಹೇಳಿದ್ದೀರಿ. ಮಹಾತ್ಮ ಗಾಂಧಿ ಗೋಹತ್ಯೆ ನಿಷೇಧದ ಅತ್ಯಂತ ದೊಡ್ಡ ಪ್ರತಿಪಾದಕರಾಗಿದ್ದರು. ಆದರೆ ತಾವು ಗೋಹತ್ಯೆಯ ಪರ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಿ ಅಂತ ಗಾಂಧೀಜಿ ಹೇಳಿದ್ದರು. ಆದರೆ ತಾವುಗಳು ಕಾಂಗ್ರೆಸ್ ಪಕ್ಷವನ್ನ ಒಂದು ಕುಟುಂಬದ ಜಹಗೀರು ಮಾಡಿ ಕೊಟ್ಟುಬಿಟ್ಟಿದ್ದೀರಿ. ಇದೇನಾ ತಮ್ಮ ಗಾಂಧೀವಾದ? ಎಂದು ಅವರು ಪ್ರಶ್ನಿಸಿದ್ದಾರೆ.

ರಾಮ ಸತ್ಯವಂತ. ಕೊಟ್ಟ ಮಾತಿಗೆ ಎಂದೂ ತಪ್ಪದ ವ್ಯಕ್ತಿತ್ವ. ಆದರೆ ತಾವು ಮಾಡಿದ್ದೇನು? ಮಾಡುತ್ತಿರುವುದೇನು? ತಮ್ಮ ಮೊದಲ ಅವಧಿಯಲ್ಲಿ ಜನತೆಗೆ ಕೊಟ್ಟಿದ್ದ ಭರವಸೆಗಳಲ್ಲಿ ಅರ್ಧ ಭಾಗವೂ ಈಡೇರಿಸಲಿಲ್ಲ. ಅದರ ಮೇಲೆ ನುಡಿದಂತೆ ನಡೆದ ಸರಕಾರ ಎಂಬ ಮತ್ತೊಂದು ಸುಳ್ಳು ಎಂದು ಅಶೋಕ್ ಟೀಕಿಸಿದ್ದಾರೆ.

ಈಗ ಎರಡನೇ ಅವಧಿಯಲ್ಲಿ ತಾವು ಮಾಡುತ್ತಿರುವುದೇನು? ಎಲ್ಲರಿಗೂ 200 ಯೂನಿಟ್ ಕರೆಂಟ್ ಉಚಿತ ಅಂತ ಸುಳ್ಳು ಭರವಸೆ ನೀಡಿ ಕಡೆಗೆ ಸರಾಸರಿ ಎಂದು ವರಸೆ ಬದಲಿಸಿದ್ದೀರಿ. 10 ಕೆಜಿ ಅಕ್ಕಿ ನೀಡುತ್ತೇನೆ ಎಂದು ಹೇಳಿ ಈಗ ಮಾತು ತಪ್ಪಿದ್ದೀರಿ. ರಾಜ್ಯದ ಎಲ್ಲ ನಿರುದ್ಯೋಗಿ ಪದವೀಧರರು, ಡಿಪ್ಲೋಮಾ ಪದವೀಧರರಿಗೆ ಯುವನಿಧಿ ಗ್ಯಾರೆಂಟಿ ಅಂತ ಸುಳ್ಳು ಹೇಳಿ ಈಗ ಕಂಡೀಷನ್ ಮೇಲೆ ಕಂಡೀಷನ್ ಹಾಕಿ ಕಡೆಗೆ 3 ಸಾವಿರ ಯುವಕರು ಮಾತ್ರ ಅರ್ಹರು ಎಂದು ಯುವಕರಿಗೆ ಟೋಪಿ ಹಾಕಿದ್ದೀರಿ ಎಂದು ಅವರು ಆರೋಪಿಸಿದ್ದಾರೆ.

ತಾವು ರಾಮನ ಭಕ್ತರೂ ಅಲ್ಲ, ಗಾಂಧೀಜಿ ಅವರ ಅನುಯಾಯಿಗಳೂ ಅಲ್ಲ. ತಾವೇನಿದ್ದೇರೂ ಅಧಿಕಾರದ ಅನುಯಾಯಿಗಳು, ಅಧಿಕಾರ ಕೊಡುವ ಹೈಕಮಾಂಡ್ ಭಕ್ತರು ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News