×
Ad

‘ಬಿಜೆಪಿ ಸದಸ್ಯರ ಆಕ್ಷೇಪ’: ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಯಿಂದ ಹಿಂದೆ ಸರಿದ ಎಚ್.ಕೆ. ಪಾಟೀಲ್

Update: 2025-12-12 18:02 IST

ಸಚಿವ ಎಚ್.ಕೆ.ಪಾಟೀಲ್

ಬೆಳಗಾವಿ(ಸುವರ್ಣ ವಿಧಾನಸೌಧ): ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಯಿಂದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹಿಂದೆ ಸರಿದ ಘಟನೆ ವಿಧಾನಸಭೆಯಲ್ಲಿ ಜರುಗಿತು.

ಶುಕ್ರವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಮೇಲಿನ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಲು ಸ್ಪೀಕರ್ ಯು.ಟಿ.ಖಾದರ್, ಎಚ್.ಕೆ.ಪಾಟೀಲ್ ಅವರನ್ನು ಆಹ್ವಾನಿಸಿದರು. ಈ ಸಂದರ್ಭದಲ್ಲಿ ಎದ್ದು ನಿಂತ ವಿಪಕ್ಷ ನಾಯಕ ಆರ್.ಅಶೋಕ್, ಸದನದಲ್ಲಿ ಸಚಿವರು ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಬಹುದು, ಉತ್ತರ ನೀಡಬಹುದು. ಆದರೆ, ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಲು ನಿಯಮಾವಳಿಗಳಲ್ಲಿ ಅವಕಾಶ ನೀಡಿಲ್ಲ. ಸ್ಪೀಕರ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಇದಕ್ಕೆ ಸ್ಪಷ್ಟಣೆ ನೀಡಿದ ಸಚಿವ ಎಚ್.ಕೆ.ಪಾಟೀಲ್, ಮುಖ್ಯಮಂತ್ರಿ, ಸ್ಪೀಕರ್ ಅವರ ಅನುಮತಿ ಪಡೆದು ನಾನು ಮಾತನಾಡಲು ಮುಂದಾಗಿದ್ದೇನೆ. ಸದನದಲ್ಲಿ ನಡೆಯುವ ಚರ್ಚೆಯಲ್ಲಿ ಭಾಗವಹಿಸಲು ಯಾವುದೆ ಅಡ್ಡಿಯಿಲ್ಲ. ಈ ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪೀಕರ್ ಆಗಿದ್ದಾಗ ಸಂವಿಧಾನ, ಚುನಾವಣಾ ಸುಧಾರಣೆಯ ವಿಷಯಗಳಿಗೆ ಸಂಬಂಧಿಸಿದಂತೆ ನಡೆಸಿದ ಚರ್ಚೆಯಲ್ಲಿ ಸಚಿವರು ಮಾತನಾಡಿದ್ದಾರೆ. ಸ್ವತಃ ಸ್ಪೀಕರ್ ಅವರೆ ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಜನ ಹೇಗೆ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂಬುದರ ಕುರಿತು ಪ್ರಾರ್ಥನೆ ಮಾಡಲು ಅವಕಾಶವಿದೆ. ಅದನ್ನೆ ನಾನು ಮಾಡುತ್ತೇನೆ ಎಂದರು.

ನಂತರ ಮಾತನಾಡಿದ ಬಿಜೆಪಿ ಸದಸ್ಯ ವಿ.ಸುನಿಲ್ ಕುಮಾರ್, ಸಂಸದೀಯ ಸಚಿವರಾಗಿ ತಾವೆ ಸದನದಲ್ಲಿ ವಿಷಯವನ್ನು ಚರ್ಚೆಗೆ ಎತ್ತಿಕೊಂಡರೆ ಹೇಗೆ? ಇಲ್ಲಿ ನಡೆಯುವ ಚರ್ಚೆಗೆ ಉತ್ತರ ಕೊಡುವ ಜಾಗದಲ್ಲಿ ತಾವು ನಿಂತಿದ್ದೀರಾ. ಸಂವಿಧಾನ ಹಾಗೂ ಚುನಾವಣಾ ಸುಧಾರಣೆಯ ಚರ್ಚೆಗಳು ನಡೆದದ್ದು ಜನರಲ್ಲಿ ಜಾಗೃತಿ ಮೂಡಿಸಲು. ಆ ಚರ್ಚೆಗೆ ಉತ್ತರ ನೀಡುವವರು ಯಾರು ಇರಲಿಲ್ಲ. ಮಂಗಳೂರಿನಲ್ಲಿ ಗೋಲಿಬಾರ್ ಘಟನೆಯಾದಾಗ ಸದನದಲ್ಲಿ ಚರ್ಚೆ ನಡೆಯಿತು. ಆಗ ಸಚಿವರಾಗಿದ್ದ ಸಿ.ಟಿ.ರವಿ ತಾನು ಮಾತನಾಡುವುದಾಗಿ ಹೇಳಿದರು. ಆದರೆ, ಸ್ಪೀಕರ್ ಸ್ಥಾನದಲ್ಲಿದ್ದ ಕಾಗೇರಿ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಹೇಳಿದರು. ಬಿಜೆಪಿ ಹಿರಿಯ ಸದಸ್ಯ ಅರಗ ಜ್ಞಾನೇಂದ್ರ ಸಹ ಅಶೋಕ್ ಹಾಗೂ ಸುನಿಲ್ ಕುಮಾರ್ ಆಕ್ಷೇಪಕ್ಕೆ ಧ್ವನಿಗೂಡಿಸಿದರು.

ವಿಪಕ್ಷ ಸದಸ್ಯರ ಮಾತುಗಳನ್ನು ಆಲಿಸಿದ ಬಳಿಕ ಮಾತನಾಡಿದ ಎಚ್.ಕೆ.ಪಾಟೀಲ್, ವಿಪಕ್ಷ ನಾಯಕ ಅಶೋಕ್, ಸುನಿಲ್ ಕುಮಾರ್, ಅರಗ ಜ್ಞಾನೇಂದ್ರ ಅವರ ಮಾತುಗಳನ್ನು ಕೇಳಿದ್ದೇನೆ. ಮುಂದೆ ಸದನದಲ್ಲಿ ಈ ವಿಚಾರದ ಕುರಿತ ನಡೆದ ಚರ್ಚೆಗೆ ಉತ್ತರ ಕೊಡುವಾಗ ಹಾಗೂ ಬೇರೆ ಸಂದರ್ಭದಲ್ಲಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇನೆ. ಈಗ ಈ ಚರ್ಚೆಯಿಂದ ಹಿಂದಕ್ಕೆ ಸರಿಯುತ್ತೇನೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News