ಕಲಾಪಕ್ಕೆ ಅಡ್ಡಿಪಡಿಸುವ ಸದಸ್ಯರಿಗೆ ಮೊಗಸಾಲೆಯಲ್ಲೇ ಕೂರುವ ದಂಡನೆ: ಸ್ಪೀಕರ್ ಖಾದರ್ ಎಚ್ಚರಿಕೆ
ಬೆಳಗಾವಿ(ಸುವರ್ಣ ವಿಧಾನಸೌಧ): ವಿಧಾನಸಭೆ ಕಲಾಪದಲ್ಲಿ ಚರ್ಚೆಯ ನಡುವೆ ತಮಷ್ಟಕ್ಕೆ ತಾವು ಕುಳಿತ ಜಾಗದಲ್ಲಿಯೇ ಮಾತನಾಡಿ ಕಲಾಪಕ್ಕೆ ಅಡ್ಡಿಪಡಿಸುವ ಸದಸ್ಯರನ್ನು ಒಂದು ದಿನದ ಮಟ್ಟಿಗೆ ವಿಧಾನಸಭೆ ಮೊಗಸಾಲೆಯಲ್ಲಿ ಕೂರಿಸುವ ದಂಡನೆ ವಿಧಿಸಬೇಕಾಗುತ್ತದೆ ಎಂದು ಸ್ಪೀಕರ್ ಯು.ಟಿ.ಖಾದರ್ ಎಚ್ಚರಿಸಿದ ಪ್ರಸಂಗ ನಡೆಯಿತು.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರದ ಬಳಿಕ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಗೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರಿಗೆ ಸ್ಪೀಕರ್ ಖಾದರ್ ಅವಕಾಶ ನೀಡಿದರು. ಈ ವೇಳೆ ಬಿಜೆಪಿಯ ಉಚ್ಛಾಟಿತ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ‘ತಾನು ಮೂರು ದಿನಗಳಿಂದ ಚರ್ಚೆಗೆ ಅವಕಾಶ ಕೇಳುತ್ತಿದ್ದೇನೆ. ಈವರೆಗೂ ಅವಕಾಶ ಸಿಕ್ಕಿಲ್ಲʼ ಎಂದು ಆಕ್ಷೇಪಿಸಿದರು.
ಬಳಿಕ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ‘ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರಿಗೆ ಅನುಮತಿ ನೀಡಲಾಗಿದೆ. ಮುಂದಿನ ಸರದಿಯಲ್ಲಿ ನಿಮಗೆ ಅವಕಾಶ ನೀಡಲಾಗುವುದು ಎಂದು ಸಮಾಧಾನ ಪಡಿಸಿದರು. ಈ ಹಂತದಲ್ಲಿ ಗಂಭೀರ ಚರ್ಚೆ ನಡೆಯುವ ವೇಳೆ ಕೆಲವು ಶಾಸಕರು ತಮ ಸ್ಥಾನದಲ್ಲೇ ಕುಳಿತು ಮೈಕ್ ಆನ್ ಮಾಡಿಕೊಂಡು ಮಾತನಾಡಿ, ಚರ್ಚೆಗೆ ಅಡ್ಡಿಪಡಿಸುತ್ತಿದ್ದರು.
ಈ ವೇಳೆ ಸ್ಪೀಕರ್ ‘ಸದಸ್ಯರ ವರ್ತನೆ ಸರಿಯಲ್ಲ, ಚರ್ಚೆಯ ದಿಕ್ಕು ತಪ್ಪುತ್ತಿದೆ. ಫುಟ್ಬಾಲ್ ಆಟದಲ್ಲಿ ನಿಯಮ ಮೀರುವ ಆಟಗಾರರಿಗೆ ಕೆಂಪು, ಬಿಳಿ ಮತ್ತು ಹಳದಿ ಕಾರ್ಡ್‍ಗಳನ್ನು ತೋರಿಸುವ ಪದ್ಧತಿ ಇದೆ. ಅದೇ ರೀತಿ ಚರ್ಚೆಗೆ ಅಡ್ಡಿಪಡಿಸುವ ಸದಸ್ಯರಿಗೆ ಎಚ್ಚರಿಕೆಯ ಕಾರ್ಡ್‍ಗಳನ್ನು ತೋರಿಸಲಾಗುವುದು. ಅದರ ನಂತರವೂ ತಿದ್ದಿಕೊಳ್ಳದಿದ್ದರೆ ಒಂದು ದಿನದ ಮಟ್ಟಿಗೆ ವಿಧಾನಸಭೆಯ ಮೊಗಸಾಲೆಯಲ್ಲಿ ಕೂರಿಸುವ ದಂಡನೆ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.