10 ಸಾವಿರ ಕೋಟಿ ರೂ. ಅನುದಾನ ನೀಡದಿದ್ದರೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮುಂದುವರಿಸುವೆ: ಕಾಂಗ್ರೆಸ್ ಶಾಸಕ ರಾಜು ಕಾಗೆ
ಕಾಂಗ್ರೆಸ್ ಶಾಸಕ ರಾಜು (File Photo)
ಬೆಳಗಾವಿ (ಸುವರ್ಣ ವಿಧಾನಸೌಧ): ನಮಗೆ ತಲಾ 10 ಸಾವಿರ ಕೋಟಿ ರೂ. ಅನುದಾನ ಕೊಡಿ. ಇಲ್ಲವೇ, ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮುಂದುವರಿಸುವೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಪುನರುಚ್ಚರಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕಕ್ಕೆ ಮಾಡುತ್ತಿರುವ ತಾರತಮ್ಯದ ಬಗ್ಗೆ ಬೇಸರಗೊಂಡು ರಾಷ್ಟ್ರಪತಿ, ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ರಾಜ್ಯಕ್ಕಾಗಿ ಪತ್ರ ಬರೆದಿದ್ದೆ. ಅದೇ ರೀತಿ ಯಾರು ಏನೇ ಹೇಳಲಿ, ವಿರೋಧ ಮಾಡಲಿ ನನ್ನ ಹೋರಾಟ ಮುಂದುವರೆಯಲಿದೆ ಎಂದರು.
ಪ್ರತ್ಯೇಕ ರಾಜ್ಯಕ್ಕಾಗಿ ನನ್ನ ಅನಸಿಕೆಗೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು, ಕೆಲವು ಸಂಘಟನೆಗಳು ಬೆಂಬಲ ನೀಡಿವೆ. ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಕಡೂರಿಗೆ 10 ಕೋಟಿ ರೂ. ನೀಡಿದರೆ, ನಮ್ಮ ತಾಲೂಕಿಗೆ 8 ಕೋಟಿ ರೂ. ನೀಡುತ್ತಾರೆ. ಈ ತಾರತಮ್ಯ ಪ್ರಶ್ನಿಸಿದರೆ ಸ್ವಪಕ್ಷೀಯ ಶಾಸಕನಿಂದಲೇ ಸರಕಾರದ ವಿರೋಧಿ ಎನ್ನುತ್ತಾರೆ. ಹೀಗೆ ಆದರೆ ಯಾರಿಗೆ ನಮ್ಮ ಗೋಳು ಹೇಳಬೇಕು ಎಂದು ಪ್ರಶ್ನಿಸಿದರು.
ಪ್ರಜಾ ಸೌಧದ ಬಗ್ಗೆ ಮಾತನಾಡಲು ಹೋದರೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ನನ್ನನ್ನು ಗಮನಿಸಲೇ ಇಲ್ಲ. ಈ ಸಂಬಂಧಿಸಿದಂತೆ ಅದರ ಹಕ್ಕುಚ್ಯುತಿ ಮಂಡಿಸಿದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕರು, ಶಾಸಕರಿಗೆ ಮರ್ಯಾದೆ ಕೊಟ್ಟಿಲ್ಲ. ಇದು ಗಂಭೀರ ವಿಷಯವಾಗಿದೆ ಎಂದರು.
ನಮ್ಮ ಕ್ಷೇತ್ರ ಮತ್ತು ಸುತ್ತಲಿನ ತಾಲೂಕುಗಳಲ್ಲಿ ಕೃಷಿ ಭೂಮಿ ಹಾಳಾಗಿದ್ದು, ಉಪ್ಪಿನ ಅಂಶ ಹೆಚ್ಚಾಗಿದೆ. ಈ ಭೂಮಿಯನ್ನು ಸವಳು-ಜವಳು ಮಾಡಲು ಪ್ರತಿ ಕ್ಷೇತ್ರಕ್ಕೆ 1 ಕೋಟಿ ನೀಡಬೇಕು. ನಮ್ಮ ಭಾಗದಲ್ಲಿ ಎಲ್ಲಾ ಕಾಮಗಾರಿಗಳು ವಿಳಂಬವಾಗುತ್ತಿವೆ. ನಾವು ಭೀಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.