38 ಸಾವಿರ ಕೋಟಿ ರೂ.ಬಾಕಿ ಬಿಡುಗಡೆಗೆ ಗುತ್ತಿಗೆದಾರರ ಸಂಘ ಆಗ್ರಹ; ಮುಖ್ಯಮಂತ್ರಿಗೆ ಪತ್ರ ಬರೆದು ಅಸಮಾಧಾನ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಎದುರಾಗಿರುವ ನಡುವೆಯೇ, ಗುತ್ತಿಗೆದಾರರಿಗೆ ಬಾಕಿ ಇರುವ ಹಣವನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ರಾಜ್ಯ ಗುತ್ತಿಗೆದಾರರ ಸಂಘ, ಗುತ್ತಿಗೆದಾರರಿಗೆ ಈ ಹಿಂದೆ ನೀಡಿದ್ದ ಭರವಸೆಗಳು ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಬಾಕಿ ಹಣ ಬಿಡುಗಡೆ ಸೇರಿದಂತೆ ಗುತ್ತಿಗೆದಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಮನವಿ ಮಾಡಿದೆ.
ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ಸರಕಾರ ಸದಾ ಬೆಂಬಲವಾಗಿ ನಿಲ್ಲಲಿದೆ. ಒಂದೇ ಕಂತಿನಲ್ಲಿ ಬಾಕಿ ಹಣ ಬಿಡುಗಡೆ ಮಾಡಲಾಗುವುದು ಹಾಗೂ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು. ಆದರೆ ಸರಕಾರ ಅಸ್ತಿತ್ವಕ್ಕೆ ಬಂದು ಸುಮಾರು ಮೂರು ವರ್ಷ ಕಳೆದರೂ ಭರವಸೆ ಈಡೇರಿಲ್ಲ ಎಂದು ಸಂಘ ಪತ್ರದಲ್ಲಿ ತಿಳಿಸಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಹಲವು ಬಾರಿ ಪತ್ರ ವ್ಯವಹಾರ ನಡೆಸಿ, ಭೇಟಿಯಾಗಿ ಮನವಿ ಮಾಡಿದ್ದರೂ ಸಂಘಕ್ಕೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಗುತ್ತಿಗೆದಾರರ ಸಂಘ ಬೇಸರ ವ್ಯಕ್ತಪಡಿಸಿದೆ.
ಎರಡು ತಿಂಗಳಲ್ಲಿ ಹಣ ಬಿಡುಗಡೆ ಭರವಸೆ:
ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಜೂನ್ 30ರಂದು ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳನ್ನು ಕರೆದು ಚರ್ಚಿಸಿದ್ದ ಡಿ.ಕೆ.ಶಿವಕುಮಾರ್, ಗುತ್ತಿಗೆದಾರರಿಗೆ ಬಾಕಿ ಇರುವ ಹಣವನ್ನು ಎರಡು ತಿಂಗಳೊಳಗೆ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಇದಕ್ಕಾಗಿ ಅಗತ್ಯ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳುವಂತೆ ಆರ್ಥಿಕ ಇಲಾಖೆಗೆ ಸೂಚಿಸುವುದಾಗಿ ತಿಳಿಸಿದ್ದರು ಎಂದು ಸಂಘ ಹೇಳಿದೆ.
ಮುಖ್ಯಮಂತ್ರಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸ ಮಾಡಿ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ರಾಜ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಮುಖವಾಗಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆದಾರರ ಸಮಸ್ಯೆಗಳನ್ನು ಕಡೆಗಣಿಸಲಾಗಿದೆ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
38 ಸಾವಿರ ಕೋಟಿ ಬಾಕಿ:
ರಾಜ್ಯದ ವಿವಿಧ ಅಭಿವೃದ್ಧಿ ಇಲಾಖೆಗಳ ವ್ಯಾಪ್ತಿಯಲ್ಲಿ ಗುತ್ತಿಗೆದಾರರಿಗೆ ಸುಮಾರು 38 ಸಾವಿರ ಕೋಟಿ ರೂ. ಬಾಕಿ ಇದೆ ಎಂದು ಸಂಘ ಪತ್ರದಲ್ಲಿ ತಿಳಿಸಿದೆ. 2021-22ನೇ ಸಾಲಿನಿಂದ ಇಲ್ಲಿಯವರೆಗೆ ವಿವಿಧ ಇಲಾಖೆಗಳಲ್ಲಿನ ಗುತ್ತಿಗೆದಾರರ ಬಾಕಿ ಮೊತ್ತ ಸಮರ್ಪಕವಾಗಿ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದೆ.
ಲೋಕೋಪಯೋಗಿ ಇಲಾಖೆ ಹಾಗೂ ಜಿ.ಬಿ.ಎ (ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಹೊರತುಪಡಿಸಿ ಇತರ ಇಲಾಖೆಗಳ ಟೆಂಡರ್ ಹಾಗೂ ಹಣ ಬಿಡುಗಡೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಸಂಘ ದೂರಿದೆ.
ಮುಖ್ಯಮಂತ್ರಿ ನೀಡಿದ್ದ ಭರವಸೆಯಂತೆ ಬಾಕಿ ಇರುವ 38 ಸಾವಿರ ಕೋಟಿ ರೂ. ಮೊತ್ತವನ್ನು ತುರ್ತಾಗಿ ಬಿಡುಗಡೆ ಮಾಡಬೇಕು. ಅಭಿವೃದ್ಧಿ ಇಲಾಖೆಗಳಲ್ಲಿನ ಹಣ ಬಿಡುಗಡೆಗೆ ಜೇಷ್ಠತೆಯನ್ನು ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಅಲ್ಲದೆ, ವಿಶೇಷ ಎಲ್‍ಒಸಿ ನೀಡುವುದನ್ನು ತಡೆಹಿಡಿಯಬೇಕು ಎಂದು ಸಂಘ ಆಗ್ರಹಿಸಿದೆ.
ಜಿಎಸ್‍ಟಿ ವ್ಯತ್ಯಾಸದ ಮೊತ್ತ ಬಿಡುಗಡೆಗೆ ಮನವಿ:
2017-18 ಮತ್ತು 2018-19ನೆ ಸಾಲಿನ ವ್ಯಾಟ್‍ನಿಂದ ಜಿಎಸ್‍ಟಿಗೆ ಬದಲಾದ ಸಂದರ್ಭದಲ್ಲಿ ಉಂಟಾದ ಶೇ.8ರಷ್ಟು ವ್ಯತ್ಯಾಸದ ಮೊತ್ತವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಮುಖ್ಯಮಂತ್ರಿ ಶಿಫಾರಸು ಮಾಡಬೇಕು ಎಂದು ಸಂಘ ಮನವಿ ಮಾಡಿದೆ.
ಇ-ಸಂಗ್ರಹಣಾ ವೇದಿಕೆಯ ಕಾಂಟ್ರಾಕ್ಟ್ ಮ್ಯಾನೇಜ್‍ಮೆಂಟ್ ಮಾಡ್ಯೂಲ್ ನಲ್ಲಿ ಕಾಮಗಾರಿಗಳ ಮಾಹಿತಿಯನ್ನು ಅಪ್‍ಲೋಡ್ ಮಾಡಿದ ನಂತರವೇ ಖಜಾನೆಯಿಂದ ಹಣ ಬಿಡುಗಡೆ ಮಾಡುವಂತೆ ಸರಕಾರ ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ:
ರಾಜ್ಯದ ಯಾವುದೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಗುತ್ತಿಗೆ ನೀಡುವ ಸಂದರ್ಭದಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಗುತ್ತಿಗೆದಾರರಿಗೆ ಪ್ರೋತ್ಸಾಹ ನೀಡಬಾರದು ಎಂದು ಸಂಘ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದೆ.
ಕೋವಿಡ್-19 ಅವಧಿಯಿಂದ ಹಾಗೂ ಸರಕಾರದ ಮಟ್ಟದಲ್ಲಿನ ಅವ್ಯವಸ್ಥೆಯಿಂದಾಗಿ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಟೆಂಡರ್ ಕಾಮಗಾರಿಗಳು ದೊರೆಯುತ್ತಿಲ್ಲ. ಇದರಿಂದ ಅನೇಕ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿರುವ ಸಂಘ, ಲೈಸೆನ್ಸ್ ನವೀಕರಣ ಹಾಗೂ ಕಾಮಗಾರಿಗಳನ್ನು ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.
ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ, ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ಸೇರಿದಂತೆ ಸಂಘ ಮುಂದಿಟ್ಟಿರುವ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಗುತ್ತಿಗೆದಾರರ ಪತ್ರದ ವಿಚಾರದಲ್ಲಿ ಸರಕಾರ ಸ್ಪಷ್ಟನೆ ನೀಡಲಿ: ವಿಜಯೇಂದ್ರ
ರಾಜ್ಯ ಗುತ್ತಿಗೆದಾರರ ಸಂಘದವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ಗೆ ಬರೆದಿರುವ ಪತ್ರದ ವಿಚಾರದಲ್ಲಿ ರಾಜ್ಯ ಸರಕಾರ ಸ್ಪಷ್ಟಣೆ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಮಂಗಳವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಬಿಜೆಪಿ ಪಕ್ಷದ ಮೇಲೆ ಆರೋಪ ಮಾಡುವ ಬದಲು ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಮೇಲೆ ಎಷ್ಟು ಸಾಲದ ಹೊರೆ ಹೆಚ್ಚಾಗಿದೆ ಎಂಬುದನ್ನು ಜನರ ಮುಂದೆ ಇಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಾಜ್ಯದ ಸಾಲದ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಆರೋಪಿಸಿದ ಅವರು, ಸರಕಾರದ ಹಣಕಾಸು ನಿರ್ವಹಣೆ ಹಾಗೂ ವಿವಿಧ ಯೋಜನೆಗಳಿಗೆ ಹಣ ಹಂಚಿಕೆ ಕುರಿತು ಸಮಗ್ರ ಶ್ವೇತಪತ್ರ ಹೊರಡಿಸುವ ಅಗತ್ಯವಿದೆ ಎಂದರು.
ರಾಜ್ಯದ ಹಣಕಾಸು ಪರಿಸ್ಥಿತಿ, ಸಾಲದ ಪ್ರಮಾಣ, ಗ್ಯಾರಂಟಿಗಳಿಗೆ ಮಾಡಿರುವ ವೆಚ್ಚ ಹಾಗೂ ಇತರ ಕಾರ್ಯಕ್ರಮಗಳಿಗೆ ಮಾಡಿರುವ ವೆಚ್ಚದ ಸಂಪೂರ್ಣ ಲೆಕ್ಕವನ್ನು ಜನರ ಮುಂದಿಡಿ. ಜನರ ತೆರಿಗೆ ಹಣವನ್ನು ರಾಜಕೀಯ ಉದ್ದೇಶಗಳಿಗೆ ಬಳಸುವುದನ್ನು ನಿಲ್ಲಿಸಿ ಎಂದು ವಿಜಯೇಂದ್ರ ಆಗ್ರಹಿಸಿದರು.