ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆ: ಕೇಂದ್ರದ ಬಳಿ 3,705 ಕೋಟಿ ನೆರವು ಕೋರಿದ ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಬರ ಪರಿಸ್ಥಿತಿ ಮತ್ತು ಅಂದಾಜು 18,748.23 ಕೋಟಿ ಮೌಲ್ಯದ ಬೆಳೆ ನಷ್ಟವನ್ನು ಉಲ್ಲೇಖಿಸಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಕೇಂದ್ರದ ನೆರವು ಕೋರಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬರೆದ ಪತ್ರದಲ್ಲಿ, ಸೆಪ್ಟೆಂಬರ್ 9ರ ವೇಳೆಗೆ ಕರ್ನಾಟಕದಲ್ಲಿ ಶೇ.34 ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳು ಮತ್ತು 240 ತಾಲೂಕುಗಳ ಪೈಕಿ 182 ತಾಲೂಕುಗಳು ಮಳೆ ಕೊರತೆಯನ್ನು ಎದುರಿಸುತ್ತಿವೆ. ರಾಜ್ಯ ಸರಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಈ ಪೈಕಿ 89 ತಾಲೂಕುಗಳನ್ನು ತೀವ್ರವಾಗಿ ಬಾಧಿತವಾದವು ಎಂದು ವರ್ಗೀಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬರಗಾಲವು ಕೃಷಿ ವಲಯಕ್ಕೆ ಅಪಾರ ಹಾನಿಯನ್ನುಂಟು ಮಾಡಿದ್ದು, 19.52 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ. ಬೆಳೆ ನಷ್ಟದ ಅಂದಾಜು ಮೌಲ್ಯ 18,748.23 ಕೋಟಿ ಎಂದು ಅವರು ತಿಳಿಸಿದ್ದಾರೆ. ರಾಜ್ಯ ವಿಪತ್ತು ಪರಿಹಾರ ನಿಧಿ ಮತ್ತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ನಿಯಮಗಳ ಅಡಿಯಲ್ಲಿ ರಾಜ್ಯ ಸರಕಾರವು 3,705.30 ಕೋಟಿ ನೆರವನ್ನು ಕೋರಿದೆ ಎಂಬ ಅಂಶವನ್ನು ಸಚಿವರು ಉಲ್ಲೇಖಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆ ಮತ್ತು ಬಾಧಿತ ಪ್ರದೇಶಗಳ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು, ಅಂತರ ಸಚಿವಾಲಯದ ಕೇಂದ್ರ ತಂಡವೊಂದನ್ನು ಆದಷ್ಟು ಶೀಘ್ರವಾಗಿ ಕರ್ನಾಟಕಕ್ಕೆ ಕಳುಹಿಸುವಂತೆ ನಾನು ನಿಮ್ಮನ್ನು ಕೋರುತ್ತೇನೆ ಎಂದು ಕುಮಾರಸ್ವಾಮಿ ಪತ್ರದಲ್ಲಿ ಬರೆದಿದ್ದಾರೆ.