ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ವಿವಾದಾತ್ಮಕ ಹೇಳಿಕೆ ಪ್ರಕರಣ: ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ 2024ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ನೀಡಿದ್ದ ‘ಎಕ್ಸ್ಟ್ರಾ ಪೆಗ್’ ಹೇಳಿಕೆಗೆ ಸಂಬಂಧಿಸಿದಂತೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.
2024ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮಾತನಾಡಿದ್ದ ಸಂಜಯ್ ಪಾಟೀಲ್, ಬಿಜೆಪಿಗೆ ಮಹಿಳೆಯರ ಬೆಂಬಲ ಹೆಚ್ಚಾಗುತ್ತಿರುವುದು ಹಾಗೂ ರಮೇಶ್ ಜಾರಕಿಹೊಳಿ ಅವರ ಪ್ರಚಾರವನ್ನು ಕಂಡು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ರಾತ್ರಿ ನಿದ್ದೆ ಬರುತ್ತಿಲ್ಲ. ಅವರಿಗೆ ನಿದ್ದೆ ಬರಬೇಕಾದರೆ ನಿದ್ದೆ ಮಾತ್ರೆಯ ಜೊತೆಗೆ ‘ಎಕ್ಸ್ಟ್ರಾ ಪೆಗ್’ ತೆಗೆದುಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಂಜಯ್ ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಂಜಯ್ ಪಾಟೀಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ, ಸಚಿವರ ವಿರುದ್ಧದ ಹೇಳಿಕೆಯನ್ನು ಕೇಳಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು ಈ ಪ್ರಕರಣದಲ್ಲಿ ಸಂತ್ರಸ್ತರಾಗಲು ಸಾಧ್ಯವಿಲ್ಲ ಹಾಗೂ ಐಪಿಸಿ ಸೆಕ್ಷನ್ 509 ಅಪರಾಧದ ಅಡಿಯಲ್ಲಿ ಈ ಹೇಳಿಕೆ ಬರುವುದಿಲ್ಲ ಎಂದು ಪ್ರಕರಣವನ್ನ ರದ್ದುಗೊಳಿಸಿ ಅದೇಶ ಮಾಡಿತು.