Photo : PTI

 

ಬೆಂಗಳೂರು: ಎಸ್‌ಐಆರ್ (ವಿಶೇಷ ಪರಿಷ್ಕರಣೆ) ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಫಾರ್ಮ್-7 ನೀಡಿದವರ ಮೇಲೆ ದಾಖಲಾಗಿರುವ ಎಫ್‌ಐಆರ್ ಗೆ ಹೈಕೋರ್ಟ್ ನೀಡಿದ್ದ ತಡೆ ಆದೇಶವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರ ಇಂದು ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ.

ಎಸ್‌ಐಆರ್‌ನ ಭಾಗವಾಗಿ ಬಿಎಲ್‌ಎಗಳು ಮತದಾರರ ಪಟ್ಟಿಯಲ್ಲಿರುವ ಅರ್ಹ ಮತದಾರರನ್ನು ‘ಇಲ್ಲ’ ಎಂದು ಹೇಳಿ, ದುರುದ್ದೇಶದಿಂದ ಫಾರ್ಮ್-7 ಸಲ್ಲಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ವೈಯಾಲಿಕಾವಲ್ ಹಾಗೂ ಯಶವಂತಪುರ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಬಿಎಲ್‌ಎಗಳಾದ ವಸಂತಲಕ್ಷ್ಮಿ ಹಾಗೂ ದೀಪಕ್ ಸಿಂಗ್ ಎಂಬುವವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.

ತಮ್ಮ ಮೇಲಿನ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ವಸಂತಲಕ್ಷ್ಮಿ ಹಾಗೂ ದೀಪಕ್ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಪೀಠವು ಎರಡೂ ಪ್ರಕರಣಗಳ ತನಿಖೆಗೆ ಮಧ್ಯಂತರ ತಡೆ ನೀಡಿತ್ತು.

ಇದೀಗ ಹೈಕೋರ್ಟ್ ನೀಡಿರುವ ತಡೆ ಆದೇಶವನ್ನು ತೆರವುಗೊಳಿಸುವಂತೆ ರಾಜ್ಯ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು ನ್ಯಾಯಪೀಠಕ್ಕೆ ಮೆಮೋ ಸಲ್ಲಿಸಿದ್ದಾರೆ.

ಮೆಮೋ ಸಲ್ಲಿಸಿ ವಾದ ಮಂಡಿಸಿದ ಬಿ.ಎನ್. ಜಗದೀಶ್, "ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳು ನಿರ್ದಿಷ್ಟ ಅವಧಿಗೆ ಮಾತ್ರ ಲಭ್ಯವಿರುತ್ತವೆ. ಇವುಗಳನ್ನು ಸಂಗ್ರಹಿಸಲು ತನಿಖೆ ಅಗತ್ಯವಾಗಿದೆ. ರಾಜ್ಯ ಸರ್ಕಾರವು ಈಗಾಗಲೇ ಆಕ್ಷೇಪಣೆ ಸಿದ್ಧಪಡಿಸಿದ್ದು, ನೀಡಿರುವ ತಡೆ ಆದೇಶವನ್ನು ತೆರವುಗೊಳಿಸಬೇಕು" ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, "ಡಿಜಿಟಲ್ ಸಾಕ್ಷ್ಯಗಳು ಹೇಗೆ ನಾಶವಾಗುತ್ತವೆ? ತಡೆ ತೆರವುಗೊಳಿಸಲು ಅಷ್ಟೊಂದು ತುರ್ತು ಏನೆಂದಿದೆ?" ಎಂದು ಪ್ರಶ್ನಿಸಿ, ವಿಚಾರಣೆಯನ್ನು ಅಕ್ಟೋಬರ್ 14 ಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor