ಸಾಂದರ್ಭಿಕ ಚಿತ್ರ | Photo credit : chatgpt

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಅಪರೇಶನ್ ದೊಡ್ಡ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿ ಸೇರಿ ಸಚಿವರ ಸ್ಟಿಂಗ್ ಮಾಡಲಾಗುತ್ತಿದೆ ಎಂದು ಖುದ್ದು ಡಿ.ಕೆ. ಶಿವಕುಮಾರ್ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದಾದ ಬಳಿಕ ಸ್ಟಿಂಗ್ ಅಪರೇಷನ್ ಯಾರು ಮಾಡಿದರು ಎಂಬ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಾ ಇವೆ. ಈಗ ಇದರಲ್ಲಿ ಮಾಧ್ಯಮದ ಸಂಸ್ಥೆಯೊಂದರ ಮುಖ್ಯಸ್ಥರು ಇದ್ದಾರೆ ಎನ್ನುವ ಆರೋಪವೂ ಈಗ ಸಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಆರೋಪಗಳೇನು ? :

► ಕೇಂದ್ರ ಮಂತ್ರಿ ಹಾಗೂ ಖಾಸಗಿ ಸಂಸ್ಥೆಯವರಿಂದ ಕುಟುಕು ಕಾರ್ಯಾಚರಣೆ?

ಕೇಂದ್ರ ಸಚಿವರು ಹಾಗೂ ಖಾಸಗಿ ಸಂಸ್ಥೆಯವರಿಂದ ರಾಜ್ಯದಲ್ಲಿ ಕುಟುಕು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಅದರಂತೆ ಶಾಸಕ ರವಿ ಗಣಿಗ ಪತ್ರಿಕಾಗೋಷ್ಟಿಯಲ್ಲಿ ಪೆನ್ ಡ್ರೈವ್ ಪ್ರದರ್ಶಿಸುವ ಮೂಲಕ ಕುಟುಕು ಕಾರ್ಯಾಚರಣೆಗೆ ನಮ್ಮ ಬಳಿ ಸಾಕ್ಷ್ಯ ಇದೆ ಎಂದಿದ್ದರು.

► ʼಸಿದ್ದರಾಮಯ್ಯರನ್ನು ಸ್ಟಿಂಗ್ ಅಪರೇಷನ್ ಮೂಲಕ ಇಳಿಸಲಾಯಿತುʼ

ಸ್ಟಿಂಗ್ ಅಪರೇಷನ್ ಮಾಡಿಯೇ ಸಿಎಂ ಆಗಿರುವುದು ಎಂದು ಮುಖ್ಯಮಂತ್ರಿ ಡಿಕೆಶಿ ವಿರುದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಅವರು ಶಾಂಗ್ರಿಲಾ ಹೋಟೆಲ್ ನಲ್ಲಿ ಸ್ಟಿಂಗ್ ತಜ್ಞರ ಜೊತೆ ಗಂಟೆಗಟ್ಟಲೆ ಚರ್ಚೆ ಮಾಡಿದ್ದರು ಎಂದು ಎಚ್‌ಡಿಕೆ ಆರೋಪ ಮಾಡಿದ್ದರು. ನಿನ್ನೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಸ್ಟಿಂಗ್ ಅಪರೇಷನ್ ನಡೆಯುತ್ತಿರುವುದು ನಿಜ, ಇದರ ಬಗ್ಗೆ ತನಿಖೆ ಆಗಬೇಕು ಎಂದಿದ್ದರು.

► ಮಾಧ್ಯಮದ ಮುಖ್ಯಸ್ಥರೊಬ್ಬರ ಬಳಿ ನೂರಾರು ಸ್ಟಿಂಗ್ ವಿಡಿಯೋ?

ಈಗ ಸಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಚರ್ಚೆಯಾಗುತ್ತಿದ್ದು, ಕನ್ನಡದ ಜನಪ್ರಿಯ ನ್ಯೂಸ್ ಚಾನೆಲ್ ಮುಖ್ಯಸ್ಥರು ಕೂಡ ಈ ಸ್ಟಿಂಗ್ ಅಪರೇಶನ್ ನ ಭಾಗವಾಗಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಕೆಲವು ಮಾಹಿತಿಗಳ ಪ್ರಕಾರ ನ್ಯೂಸ್ ಚಾನಲ್ ನ ಮುಖ್ಯಸ್ಥರು ತಮ್ಮ ವಾಹಿನಿಯ ಹೆಸರಿನಲ್ಲಿ ಸ್ಟಿಂಗ್ ಅಪರೇಷನ್ ನಡೆಸುತ್ತಿದ್ದರು.‌ ಆದರೆ ಇವನ್ನು ಬಹುತೇಕ ಚಾನಲ್ ನಲ್ಲಿ ಪ್ರಸಾರ ಮಾಡುವುದಲ್ಲದೆ ವ್ಯವಹಾರ ಕುದುರಿಸಲು ಬಳಸುತ್ತಿದ್ದರು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗೆ ಆ ವಾಹಿನಿಗೆ ಸ್ಟಿಂಗ್ ಮಾಡಿಕೊಡುತ್ತಿದ್ದ ವ್ಯಕ್ತಿಯೇ ಈಗ ವಾಹಿನಿಯ ಮಾಲಕರ ವಿರುದ್ದ ತಿರುಗಿ ಬಿದ್ದಿದ್ದು, ಇವುಗಳನ್ನೆಲ್ಲಾ ಬಹಿರಂಗ ಮಾಡುತ್ತೇನೆ ಎಂದು ರಾಜಕಾರಣಿಗಳ ಬಳಿ ಓಡಾಡುತ್ತಿದ್ದಾನಂತೆ. ಇದರಲ್ಲಿ ಪೊಲೀಸರು, ನಟರು , ರಾಜಕಾರಣಿಗಳು, ಉದ್ಯಮಿಗಳು, ನ್ಯಾಯಾಧೀಶರನ್ನು ಬೆದರಿಸಿರುವ ವಿಡೀಯೋಗಳು ಇವೆ ಎನ್ನಲಾಗುತ್ತಿದೆ.

ಸದ್ಯ ಈ ವಿಚಾರ ಸಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗುತ್ತಿದ್ದು, ಕನ್ನಡ ಸುದ್ದಿವಾಹಿನಿಗಳ ವಿಶ್ವಾಸರ್ಹತೆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಆದರೆ ಸದ್ಯ ಈ ಬಗ್ಗೆ ಯಾವುದೇ ಅಧಿಕೃತ ಪ್ರಕರಣ ದಾಖಲಾಗದೆ ಇರುವುದರಿಂದ ಅಧಿಕೃತ ಮಾಹಿತಿಗಳು ಹೊರಗೆ ಬರುತ್ತಿಲ್ಲ.

ಈ ಬಗ್ಗೆ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಪತ್ರಕರ್ತ ಮಹೇಶ್ ಎಂ ಗೌಡರ್, ರಾಜ್ಯದ ನಾಯಕರೊಬ್ಬರನ್ನು ಗುರಿಯಾಗಿಸಿ ಮಾಡಿದ ಕುಟುಕು‌ ಕಾರ್ಯಾಚರಣೆಯಲ್ಲಿ ಸುದ್ದಿವಾಹಿನಿಯ ಸಂಪಾದಕರೊಬ್ಬರು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ವಿಷಯವನ್ನು ಬಹಿರಂಗಪಡಿಸದೆ ಕೋಟಿಗಟ್ಟಲೆ ಹಣಕ್ಕೆ ವ್ಯವಹಾರ ಕುದರಿಸಿಕೊಂಡಿದ್ದರೆ ಇದು ನಾಚಿಕೆಗೇಡಿನ ಸಂಗತಿ. ಪತ್ರಿಕೋದ್ಯಮವು ಸಾರ್ವಜನಿಕ ಜವಾಬ್ದಾರಿಯಾಗಿದೆ, ಬ್ಲ್ಯಾಕ್‌ಮೇಲ್ ಅಥವಾ ವೈಯಕ್ತಿಕ ಲಾಭಕ್ಕಾಗಿ ಇರುವ ಸಾಧನವಲ್ಲ. ಈ ಆರೋಪಗಳು ನಿಜವಾಗಿದ್ದರೆ, ಅವು ಮಾಧ್ಯಮದ ವಿಶ್ವಾಸಾರ್ಹತೆ ಮತ್ತು ನೈತಿಕತೆಗೆ ಧಕ್ಕೆ ಉಂಟು ಮಾಡುತ್ತದೆ. ಇದರ ಬಗ್ಗೆ ಕನ್ನಡ ಸುದ್ದಿ ವಾಹಿನಿಗಳು ಹಾಗೂ ಮುದ್ರಣ ಮಾಧ್ಯಮ‌ ಸುಮ್ಮನಿರುವುದು ಮತ್ತಷ್ಟು ಧಕ್ಕೆ ಉಂಟು ಮಾಡುತ್ತದೆ. ಇದನ್ನ ಖಂಡಿಸದೇ ಹೋದರೆ ಮಾಧ್ಯಮ ತನ್ನ ಸಾರ್ವಜನಿಕ ನಂಬಿಕೆ ಕಳೆದುಕೊಳ್ಳುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ.

ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor