×
Ad

ಡಾ.ಎಚ್.ಸಿ.ಮಹದೇವಪ್ಪ ವಿರುದ್ದ ಭ್ರಷ್ಟಾಚಾರ ಆರೋಪ: ರಾಜ್ಯಪಾಲರಿಗೆ ದೂರು

ತಳಬುಡವಿಲ್ಲದ ಆರೋಪ: ಡಾ.ಮಹದೇವಪ್ಪ ಸ್ಪಷ್ಟನೆ

Update: 2026-06-17 18:46 IST

ಬೆಂಗಳೂರು : ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಹಿರಿಯ ಶಾಸಕ ಡಾ.ಎಚ್.ಸಿ.ಮಹದೇವಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ವ್ಯಕ್ತಿಯೊಬ್ಬರು, ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ‘ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮ’ದ ಟೆಂಡರ್ ಪ್ರಕ್ರಿಯೆಯಲ್ಲಿ ‘ಅಕ್ರಮ, ನಕಲಿ ಸೃಷ್ಟಿ ಹಾಗೂ ಅಧಿಕಾರ ದುರುಪಯೋಗ ನಡೆದಿದೆ’ ಎಂದು ಆರೋಪಿಸಿ, ವ್ಯಕ್ತಿಯೊಬ್ಬರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

‘ಡಾ.ಎಚ್.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಅವಧಿಯಲ್ಲಿ, ಹಲವು ಟೆಂಡರ್‌ ಗಳನ್ನು ನಿರ್ದಿಷ್ಟ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಮಂಜೂರು ಮಾಡಲಾಗಿದೆ. ಈ ಸಂಸ್ಥೆಗಳು ಅನುಭವ ಪ್ರಮಾಣ ಪತ್ರಗಳು ನಕಲಿಯಾಗಿದ್ದು, ಯೋಜನೆ ಪೂರ್ಣಗೊಳಿಸಿದ ದಾಖಲೆಗಳು ಮತ್ತು ಇತರೆ ಪೂರಕ ಮಾಹಿತಿ ನೀಡಿ ಟೆಂಡರ್ ಅರ್ಹತೆ ಪಡೆದಿವೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಭ್ರಷ್ಟಾಚಾರ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತನಿಖೆಯಲ್ಲಿ ಆರೋಪ ಸಾಬೀತಾದರೆ ಸರಕಾರಿ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು. ಜತೆಗೆ ಮಹದೇವಪ್ಪ ಅವರನ್ನು ವಿಧಾನಸಭಾ ಸದಸ್ಯತ್ವ ಸ್ಥಾನದಿಂದಲೇ ಅನರ್ಹಗೊಳಿಸಬೇಕು’ ಎಂದು ದೂರುದಾರರು ಆಗ್ರಹಿಸಿದ್ದಾರೆ.

 ತಳಬುಡವಿಲ್ಲದ ಆರೋಪ: ಡಾ.ಮಹದೇವಪ್ಪ ಸ್ಪಷ್ಟನೆ

ಬೆಂಗಳೂರು : ‘ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಾರೋ ಕೆಲವರು ಮಾಡುತ್ತಿರುವ ತಳ-ಬುಡವಿಲ್ಲದ ಆರೋಪಗಳು ಮತ್ತು ಅದಕ್ಕೆ ಹಿಂದಿರುವ ಕಾರಣಗಳು ಏನು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸಂಪುಟ ವಿಸ್ತರಣೆಯ ಸಂದರ್ಭದಲ್ಲೇ ನನ್ನ ವಿರುದ್ಧ ಮಾಡಲಾಗುತ್ತಿರುವ ಈ ಆರೋಪಗಳ ಹಿಂದಿನ ಮರ್ಮವು ಸಣ್ಣಮಕ್ಕಳಿಗೂ ಅರ್ಥ ಆಗುತ್ತವೆ. ಸಾರ್ವಜನಿಕ ಜೀವನದಲ್ಲಿ ಇರುವವರು ಯಾರೂ ಪ್ರಶ್ನಾತೀತರಲ್ಲ ಎಂಬ ಅರಿವು ನನಗೂ ಇದೆ. ಆದರೆ ದುರುದ್ದೇಶಪೂರಿತವಾದ ಅಪಪ್ರಚಾರ, ಸುಳ್ಳು ಆಪಾದನೆ, ಅಸಹನೆ ಮತ್ತು ಕುತಂತ್ರಗಳಿಗೆ ಜಾಗ ಇರಬಾರದು’ ಎಂದು ಉಲ್ಲೇಖಿಸಿದ್ದಾರೆ.

ನನ್ನ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಸಿದ್ಧಾಂತಕ್ಕೆ ಅನುಗುಣವಾಗಿ ರಾಜಕೀಯ ಮಾಡುತ್ತಾ ಬಂದಿರುವ ನನಗೆ ಈಗ ನನ್ನ ಮೇಲೆ ಬರುತ್ತಿರುವ ಆಧಾರ ರಹಿತವಾದ ಆರೋಪಗಳನ್ನು ಕೇಳಿ ನಗು ಬರುತ್ತಿದೆ. ಅಂಬೇಡ್ಕರ್ ಅವರಿಗೆ ಬದುಕಲ್ಲಿ ಅಷ್ಟೆಲ್ಲಾ ಅವಮಾನಗಳಾದರೂ ಅವರು ಅದನ್ನು ನುಂಗಿಕೊಂಡು ದೇಶದ ಜನರ ಹಿತಕ್ಕಾಗಿ ಶ್ರಮಿಸಿದ್ದಾರೆ. ಹೀಗಾಗಿ ಬಾಬಾ ಸಾಹೇಬರನ್ನು ಅನುಸರಿಸುವ ನನಗೂ ಅವರ ತತ್ವಗಳೇ ಮಾದರಿ ಆಗಿದ್ದು, ಯಾರನ್ನೂ ದ್ವೇಷ ಮಾಡುವುದು ನನ್ನಿಂದ ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

‘ನಾನು ಎರಡೂ ಅವಧಿಯ ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಸಚಿವನಾಗಿ ಪಕ್ಷಕ್ಕೆ ಹೆಸರು ತರುವ ಜನರಿಗೆ ಅನುಕೂಲ ಉಂಟು ಮಾಡುವ ಕೆಲಸವನ್ನು ಮಾಡಿದ್ದೇನೆ. ಲೋಕೋಪಯೋಗಿ ಇಲಾಖೆ ಸಚಿವನಾಗಿದ್ದಾಗ ಈ ರಾಜ್ಯದಲ್ಲಿ 30ಸಾವಿರ ಕಿಲೋಮೀಟರ್ ರಸ್ತೆಗಳು, ಸೇತುವೆ, ಬೃಹತ್ ಕಟ್ಟಡಗಳು ಮತ್ತು ಮೂಲಸೌಕರ್ಯವನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದೇನೆಯೇ ಹೊರತು, ಹಣದ ಹಿಂದೆ ಬಿದ್ದಿರಲಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಜೊತೆಗೆ ಪರಿಶಿಷ್ಟರ ಪರವಾದ ಕಾನೂನು ಕಾಯ್ದೆಗಳನ್ನು ರೂಪಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಇನ್ನು ನಾನು ಸಚಿವನಾಗಿ, ರಾಜ್ಯದ ಆರ್ಥಿಕ ಸ್ಥಿತಿ ಗಮನದಲ್ಲಿಟ್ಟುಕೊಂಡೇ ಜನರ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಕಾನೂನಿನ ಪರಿಮಿತಿಯನ್ನು ಬಿಟ್ಟು ನಾನು ಎಂದಿಗೂ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ಇದು ನನಗೆ ಸಚಿವ ಸ್ಥಾನದ ಜವಾಬ್ದಾರಿ ನೀಡಿದವರಿಗೂ ಮತ್ತು ಸಮುದಾಯದ ಎಲ್ಲರಿಗೂ ಮತ್ತು ನನ್ನ ತಿಳುವಳಿಕೆಯನ್ನು ಬೆಳೆಸಿದ ದಲಿತ ಸಂಘಟನೆಗಳಿಗೂ ಚೆನ್ನಾಗಿ ತಿಳಿದಿದೆ’ ಎಂದು ಮಹದೇವಪ್ಪ ವಿವರಣೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News