×
Ad

ಸಿಎಂ ಆದರೂ ಡಿ.ಕೆ.ಶಿವಕುಮಾರ್ ಹಳೆಯ ಚಾಳಿ ಬಿಟ್ಟಿಲ್ಲ : ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

"ಅಪಪ್ರಚಾರದಿಂದ ನಾನು ಕುಗ್ಗುವುದಿಲ್ಲ, ಹೋರಾಟ ಮತ್ತಷ್ಟು ತೀವ್ರವಾಗಲಿದೆ”

Update: 2026-06-17 14:38 IST

ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ಬಿಡದಿ ಭಾಗದಲ್ಲಿ ತಮ್ಮ ಹಾಗೂ ಕುಟುಂಬದ ವಿರುದ್ಧ ಪೋಸ್ಟರ್ ಅಂಟಿಸಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಬೆಂಗಳೂರಿನ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಆದ ಬಳಿಕವೂ ಡಿ.ಕೆ. ಶಿವಕುಮಾರ್ ತಮ್ಮ ಹಳೆಯ ರಾಜಕೀಯ ಚಾಳಿಯನ್ನು ಬಿಟ್ಟಿಲ್ಲ ಎಂದು ಟೀಕಿಸಿದರು.

“ಬ್ಲೂ ಫಿಲ್ಮ್ ಮಾಡಿಸುವುದು, ಪೋಸ್ಟರ್ ಅಂಟಿಸಿ ಅಪಪ್ರಚಾರ ನಡೆಸುವುದು ಅವರ ಹಳೆಯ ಶೈಲಿ. ಮುಖ್ಯಮಂತ್ರಿ ಆದ ಮೇಲೆ ಇಂತಹ ಕೆಲಸಗಳನ್ನು ಬಿಡುತ್ತಾರೆ ಎಂದುಕೊಂಡಿದ್ದೆ. ಆದರೆ ಆ ಚಾಳಿ ಇನ್ನೂ ಹೋಗಿಲ್ಲ. ವೈಯಕ್ತಿಕವಾಗಿ ಅಪಪ್ರಚಾರ ಮಾಡಿದರೆ ನಾನು ಕುಗ್ಗುವ ವ್ಯಕ್ತಿಯಲ್ಲ. ಇದರಿಂದ ನನ್ನ ಹೋರಾಟ ಇನ್ನಷ್ಟು ತೀವ್ರವಾಗಲಿದೆ” ಎಂದು ಹೇಳಿದರು.

ಪೋಸ್ಟರ್‌ಗಳಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಚಿತ್ರ ಬಳಸಿರುವುದನ್ನು ಖಂಡಿಸಿದ ಅವರು, ನನ್ನ ಹೆಸರಿನಲ್ಲಿ 46 ಎಕರೆ ಭೂಮಿ ಮಾತ್ರ ಇದೆ. ಸುಮಾರು 40 ವರ್ಷಗಳ ಹಿಂದೆ ಖರೀದಿಸಿದ ಜಮೀನು ಅದು. ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿ 36-37 ಎಕರೆ ಭೂಮಿ ಇದೆ. 100 ಎಕರೆ ಭೂಮಿ ಇದೆ ಎಂದು ಹೇಳುವವರು ದಾಖಲೆ ತೋರಿಸಲಿ ಎಂದು ಸವಾಲು ಹಾಕಿದರು.

ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಉಲ್ಲೇಖಿಸಿದ ಕುಮಾರಸ್ವಾಮಿ, ಸತ್ತವರ ಹೆಬ್ಬಟ್ಟು ಒತ್ತಿಸಿಕೊಂಡು ಭೂಮಿ ಲಪಟಾಯಿಸಿದ ಇತಿಹಾಸ ಹೊಂದಿರುವವರು ಇಂದು ನನ್ನ ವಿರುದ್ಧ ಪೋಸ್ಟರ್ ಹಾಕಿಸುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಒಂದು ಗೌರವ ಇರಬೇಕು ಎಂದು ಹೇಳಿದರು.

ನನ್ನ ಬದುಕು ತೆರೆದ ಪುಸ್ತಕ. ಇಂತಹ ಪೋಸ್ಟರ್‌ಗಳು, ಬೆದರಿಕೆಗಳು ಅಥವಾ ಅಪಪ್ರಚಾರಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ರೈತರು ಮತ್ತು ಜನರ ಪರ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಹೇಳಿದರು.

ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, “ನನ್ನ ಅವಧಿಯಲ್ಲಿ ಯೋಜನೆ ಪ್ರಸ್ತಾಪವಾಗಿತ್ತು. ಆದರೆ ಜನರ ವಿರೋಧದ ಹಿನ್ನೆಲೆಯಲ್ಲಿ ಅದನ್ನು ಕೈಬಿಟ್ಟೆ. ಮಾಡಬೇಕೆಂಬ ಹಠ ಇದ್ದರೆ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೇ ಮಾಡಬಹುದಿತ್ತು. ಆದರೆ ಜನಾಭಿಪ್ರಾಯಕ್ಕೆ ಗೌರವ ನೀಡಿದ್ದೆ” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News