ಬಿಡದಿ ಟೌನ್‍ಶಿಪ್ ಯೋಜನೆ : ಆಡಳಿತಾರೂಢ ಕಾಂಗ್ರೆಸ್- ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ
ರೈತರ ಹೋರಾಟಕ್ಕೆ ಬಿಜೆಪಿ-ಜೆಡಿಎಸ್ ಬೆಂಬಲ
ಬೆಂಗಳೂರು : ರಾಮನಗರ ತಾಲೂಕಿನ ಬಿಡದಿ ಹೋಬಳಿಯ ‘ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ’(ಜಿಬಿಐಟಿ)ಯ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಬೆನ್ನಲ್ಲೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ಮುಖಂಡರ ಮಧ್ಯೆ ಆರೋಪ-ಪ್ರತ್ಯಾರೋಪ ತೀವ್ರವಾಗಿದೆ.
ಈ ಮಧ್ಯೆ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಲು ಬೈರಮಂಗಲಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತವರ ಕುಟುಂಬದ ವಿರುದ್ಧ ಯೋಜನಾ ಪ್ರದೇಶದ ಕೆಲವೆಡೆ ಅವಹೇಳನಕಾರಿ ಪೋಸ್ಟರ್ ಗಳನ್ನು ಅಂಟಿಸಿರುವುದು ಜಟಾಪಟಿಗೆ ಕಾರಣವಾಗಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ, ಕೆಳಸೇತುವೆ ಸೇರಿದಂತೆ ಕೆಲವೆಡೆ ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ವಿರುದ್ಧ ಪೋಸ್ಟರ್ ಗಳನ್ನು ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಾಳಿ ಹೋಗಿಲ್ಲ: ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ‘ಬಿಡದಿ ಭಾಗದಲ್ಲಿ ತನ್ನ ಮತ್ತು ನನ್ನ ಕುಟುಂಬದ ವಿರುದ್ದ ಪೋಸ್ಟರ್ ಅಂಟಿಸಿರುವ ಮಾಹಿತಿ ಬಂದಿದೆ. ರಾಜ್ಯದ ಸಿಎಂ ಆದ ಮೇಲೆಯೂ ಬ್ಲೂಫಿಲ್ಮ್ ಮಾಡಿಸುವುದು, ಪೀಸ್ಟರ್ ಅಂಟಿಸುವುದನ್ನು ಡಿ.ಕೆ.ಶಿವಕುಮಾರ್ ಬಿಡುತ್ತಾರೆ ಅಂದುಕೊಂಡಿದ್ದೆ. ಆ ಚಾಳಿ ಡಿ.ಕೆ.ಶಿವಕುಮಾರ್ ಗೆ ಇನ್ನೂ ಹೋಗಿಲ್ಲ. ವೈಯಕ್ತಿಕವಾಗಿ ಅಪಪ್ರಚಾರ ಮಾಡಿದರೆ ನಾನು ಕುಗ್ಗುವ ಮನುಷ್ಯನಲ್ಲ. ನನ್ನ ಹೋರಾಟ ಇನ್ನೂ ತೀವ್ರವಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ‘ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಬಿಡದಿ ಟೌನ್‍ಶಿಪ್ ಯೋಜನೆ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಿಗೆ ಖುದ್ದು ಭೇಟಿ ಮಾಡಿ, ರೈತರೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲದೆ, ರೈತರ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ’ ಎಂದು ಪ್ರಕಟಿಸಿದರು.
ರೈತರಿಗೆ ಬೆದರಿಸಬೇಡಿ: ‘ಟೌನ್‍ಶಿಪ್ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಯೋಜನೆಗೆ ಪ್ರಧಾನಿ ಮೋದಿ ಒಪ್ಪಿಗೆ ನೀಡಿದ್ದಾರೆಂದು ಸಿಎಂ ಹೇಳಿಕೆ ನೀಡಿದ್ದಾರೆ. ಆದರೆ ಮೋದಿಯವರು ಯೋಜನೆಗೆ ಒಪ್ಪಿಗೆ ನೀಡಿಲ್ಲ. ರಾಜ್ಯ ಸರಕಾರ ಈ ವಿಷಯದಲ್ಲಿ ಹುಡುಗಾಟಿಕೆ ಮಾಡುತ್ತಿದೆ. ರೈತರ ಭೂಮಿ ರಕ್ಷಣೆ ಮಾಡಬೇಕು. ಅದರ ಹೊರತು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಮುಂದಾಗುವುದಿಲ್ಲ’ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
‘ರೈತರ ಫಲವತ್ತಾದ ಜಮೀನು ರಾಜ್ಯದ ಯಾವುದೇ ಭಾಗದಲ್ಲೂ ಕಸಿಯಲು ಬಿಜೆಪಿ ಬಿಡುವುದಿಲ್ಲ. ಬಿಡದಿ ವಿಚಾರದಲ್ಲಿ ನಮ್ಮ ವಿರುದ್ಧವೇ ಪೋಸ್ಟರ್ ಹಾಕಿದ್ದಾರೆ. ದಬ್ಬಾಳಿಕೆ ಮಾಡಿದರೆ ನಡೆಯುವುದಿಲ್ಲ. ರೈತರ ಪರವಾಗಿ ನಾವು ಧ್ವನಿ ಎತ್ತುತ್ತೇವೆ. ಸಿಎಂ, ತಮ್ಮ ಕುರ್ಚಿ ಉಳಿಸಿಕೊಳ್ಳಲು ರೈತರ ಪರ ನಿಲ್ಲಲಿ’ ಎಂದು ವಿಜಯೇಂದ್ರ ಆಗ್ರಹಿಸಿದರು.
ದ್ವಿಮುಖ ನೀತಿ ಏಕೆ: ‘ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಕೇಂದ್ರ ಸರಕಾರ ‘ಬಂದರು ನಿರ್ಮಿಸಿದರೆ ಪ್ರಕೃತಿ ನಾಶ ಆಗುತ್ತದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ, ಬಿಡದಿಯಲ್ಲಿ ರೈತರ ಫಲವತ್ತಾದ ಭೂಮಿಯಲ್ಲಿ ಪ್ರಕೃತಿ ನಾಶ ಮಾಡಿ ಟೌನ್‍ಶಿಪ್ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಇಂತಹ ದ್ವಿಮುಖ ನೀತಿಯನ್ನು ಕೈಬಿಡಬೇಕು’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ರೈತರ ಕಷ್ಟ ತಿಳಿಯದು: ‘ಕೃಷಿ ಮಾಡಿದವರಿಗೆ ಮಾತ್ರ ರೈತರ ಕಷ್ಟ ತಿಳಿಯುತ್ತದೆಯೇ ಹೊರತು, ಬಂಡೆ ಒಡೆಯುವವರಿಗೆ ರೈತರ ನೋವು ತಿಳಿಯುವುದಿಲ್ಲ. ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಜಮೀನು ಅತ್ಯಂತ ಫಲವತ್ತಾಗಿದೆ. ಯಾವುದೇ ಕಾರಣಕ್ಕೂ ಈ ಭೂಮಿಯಲ್ಲಿ ಟೌನ್‍ಶಿಪ್ ಮಾಡಲು ಅವಕಾಶ ನೀಡಬಾರದು. ಒತ್ತಾಯ ಪೂರ್ವಕವಾಗಿ ಭೂಮಿ ಕಸಿದುಕೊಂಡು ರೈತರನ್ನು ಕಷ್ಟಕ್ಕೆ ದೂಡಬೇಡಿ’
-ಛಲವಾದಿ ನಾರಾಯಣಸ್ವಾಮಿ ಪರಿಷತ್ ವಿಪಕ್ಷ ನಾಯಕ