×
Ad

ಧರ್ಮಸ್ಥಳ ಪ್ರಕರಣ | ಕುಡ್ಲ ರ‍್ಯಾಂಪೇಜ್ ವಿರುದ್ಧದ ಪ್ರತಿಬಂಧಕಾದೇಶ ರದ್ದುಪಡಿಸಿದ ಹೈಕೋರ್ಟ್

Update: 2025-08-01 16:17 IST

ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಹರ್ಷೇಂದ್ರ ಕುಮಾರ್ ಅವರ ಬಗ್ಗೆ ಯಾವುದೇ ಸುದ್ದಿ ಪ್ರಸಾರ/ಪ್ರಕಟ ಮಾಡದಂತೆ ಕುಡ್ಲ ರ‍್ಯಾಂಪೇಜ್ ಡಿಜಿಟಲ್ ಮಾಧ್ಯಮದ ವಿರುದ್ಧ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಮಾಧ್ಯಮಗಳನ್ನು‌ ನಿರ್ಬಂಧಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶ ಪ್ರಶ್ನಿಸಿ ದಕ್ಷಿಣ ಕನ್ನಡದ 'ಕುಡ್ಲ ರ‍್ಯಾಂಪೇಜ್‌' ಯೂಟ್ಯೂಬ್ ಚಾನಲ್‌ನ ಪ್ರಧಾನ ಸಂಪಾದಕ ಅಜಯ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಭಾಗಶಃ ಪುರಸ್ಕರಿಸಿದೆ.

 2025ರ ಜುಲೈ 8ರಂದು ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ವಜಾಗೊಳಿಸಲಾಗಿದೆ. ಅವರ ಮಧ್ಯಂತರ ಅರ್ಜಿಯನ್ನು ಹೊಸದಾಗಿ ಪರಿಗಣಿಸಲು ಪ್ರಕರಣವನ್ನು ಸಕ್ಷಮ ನ್ಯಾಯಾಲಯಕ್ಕೆ ಹಿಂದಿರುಗಿಸಲಾಗುತ್ತಿದೆ. ವಿಚಾರಣಾ ನ್ಯಾಯಾಲಯವು ಈ ಆದೇಶದಲ್ಲಿ ಮಾಡಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಕ್ಷಮ ನ್ಯಾಯಾಲಯ ಮಧ್ಯಂತರ ಅರ್ಜಿಯನ್ನು ತುರ್ತಾಗಿ ನಿರ್ಧರಿಸಬೇಕು. ಸಿವಿಲ್‌ ದಾವೆ, ಕ್ರಿಮಿನಲ್‌ ಪ್ರಕ್ರಿಯೆ, ಆರೋಪ, ಪ್ರತ್ಯಾರೋಪದ ಮೇಲೆ ಈ ನ್ಯಾಯಾಲಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಆದೇಶದಲ್ಲಿ ಪರಿಗಣಿಸಿರುವ ಒಂದು ಅಂಶವನ್ನು ಹೊರತುಪಡಿಸಿ ಪಕ್ಷಕಾರರ ನಡುವೆ ಎಲ್ಲ ವಾದಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಈ ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಅರ್ಜಿದಾರರು ಮತ್ತು ಇತರ ಎಲ್ಲ ಪಕ್ಷಕಾರರು ಸಕ್ಷಮ ನ್ಯಾಯಾಲಯಕ್ಕೆ ಆದೇಶ ಮಾಡಲು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ:

ಹರ್ಷೇಂದ್ರ ಕುಮಾರ್ ಅವರು 4,140 ಯೂಟ್ಯೂಬ್ ವಿಡಿಯೋಗಳು, 932 ಫೇಸ್‌ಬುಕ್ ಪೋಸ್ಟ್‌ಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 108 ಸುದ್ದಿ ಲೇಖನಗಳು, 37 ರೆಡ್ಡಿಟ್ ಪೋಸ್ಟ್‌ಗಳು ಮತ್ತು 41 ಟ್ವೀಟ್‌ಗಳು ಸೇರಿ 8,842 ಲಿಂಕ್‌ಗಳ ಪಟ್ಟಿಯನ್ನು ನಿರ್ಬಂಧಿಸುವಂತೆ ಕೋರಿ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮೂಲ ದಾವೆ ಹೂಡಿದ್ದರು.

ಸ್ವಚ್ಛತಾ ಕಾರ್ಮಿಕ ನೀಡಿರುವ ದೂರಿನ ಅನ್ವಯ ದಾಖಲಾಗಿರುವ ಎಫ್‌ಐಆರ್‌ನಲ್ಲಿ ತಮ್ಮ ವಿರುದ್ಧ ಆರೋಪಗಳು ಇಲ್ಲದಿದ್ದರೂ ತಮ್ಮ ಕುಟುಂಬ, ಸಂಸ್ಥೆಗಳ ವಿರುದ್ಧ ಆನ್‌ಲೈನ್‌ನಲ್ಲಿ ಮತ್ತು ಮಾಧ್ಯಮಗಳಲ್ಲಿ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಹರ್ಷೇಂದ್ರ ಕುಮಾರ್‌ ದಾವೆಯಲ್ಲಿ ಆಕ್ಷೇಪಿಸಿದ್ದರು.

ವಿಚಾರಣೆ ನಡೆಸಿದ್ದ ನ್ಯಾಯಾಲಯ, ದಾವೆಯ ಮುಂದಿನ ವಿಚಾರಣೆಯವರೆಗೆ ಡಿಜಿಟಲ್, ಸಾಮಾಜಿಕ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ವಸ್ತುವಿಷಯ ಪ್ರಕಟಿಸದಂತೆ ಅಥವಾ ಹಂಚದಂತೆ ಪ್ರತಿವಾದಿ ಮಾಧ್ಯಮ ಸಂಸ್ಥೆಗಳು ಮತ್ತು ಅಪರಿಚಿತ ವ್ಯಕ್ತಿಗಳನ್ನು ನಿರ್ಬಂಧಿಸಿ ಜುಲೈ 8ರಂದು ಏಕಪಕ್ಷಕೀಯ ಪ್ರತಿಬಂಧಕಾದೇಶ ಮಾಡಿತ್ತು. ಇದನ್ನು ಕುಡ್ಲಾ ರ‍್ಯಾಂಪೇಜ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News