×
Ad

ಈ.ಡಿ.ಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ನನ್ನ ಪ್ರಕರಣವೇ ಸಾಕ್ಷಿ : ಡಿ.ಕೆ.ಶಿವಕುಮಾರ್

Update: 2025-07-21 22:59 IST

ಡಿ.ಕೆ.ಶಿವಕುಮಾರ್

ಬೆಂಗಳೂರು : ಜಾರಿ ನಿರ್ದೇಶನಾಲಯ(ಈ.ಡಿ.) ಸಂಸ್ಥೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ನನ್ನ ಪ್ರಕರಣವೇ ಸಾಕ್ಷಿ" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ಕನಕಪುರದ ಕೋಡಿಹಳ್ಳಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಡಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ.ಡಿ.ಗೆ ತರಾಟೆಗೆ ತೆಗೆದುಕೊಂಡಿದೆ. ನನ್ನ ಮೇಲೆ ಕೇಸ್ ಹಾಕಿ ತಿಹಾರ್ ಜೈಲಿಗೆ ಕಳುಹಿಸಿದರು. ನಂತರ ಆ ಕೇಸ್ ರದ್ದಾಯಿತು ಎಂದರು.

ರಾಜಕೀಯ ಒತ್ತಡಕ್ಕೆ ಸಿಲುಕುವ ಬಗ್ಗೆ ಈ.ಡಿ ಪರಿಶೀಲನೆ ನಡೆಸಬೇಕು. ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾದ ಬಳಿಕ ಮೇಲ್ಮನವಿ ಸಲ್ಲಿಸುವ ಪ್ರಶ್ನೆ ಇರಲಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಈ ರೀತಿ ಹೇಳಿರಬೇಕು ಎಂದು ಅವರು ಹೇಳಿದರು.

ಕೇಂದ್ರ ಸರಕಾರ ಈ.ಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾರಣಕ್ಕೆ ಈ ರೀತಿ ಮೇಲ್ಮನವಿ ಸಲ್ಲಿಸಲಾಗುತ್ತಿದೆ. ಬಿಜೆಪಿ ನಾಯಕರ ಮೇಲೆ ಮಾತ್ರ ಈ.ಡಿ. ಕೇಸ್ ದಾಖಲಾಗುತ್ತಿಲ್ಲ ಯಾಕೆ?. ಕೇವಲ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಬರ್ಟ್ ವಾದ್ರಾ, ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಯಾಕೆ ಕೇಸ್ ಹಾಕಲಾಗುತ್ತಿದೆ. ಬಿಜೆಪಿಗೆ ಹೋದವರೆಲ್ಲಾ ಶುದ್ಧರೇ? ಇದೇ ಅಲ್ಲವೇ ಬಿಜೆಪಿ ವಾಷಿಂಗ್ ಮಷಿನ್ ಎಂದು ಅವರು ವಾಗ್ದಾಳಿ ನಡೆಸಿದರು.

ತೇಜಸ್ವಿ ಸೂರ್ಯ ಪಾಪ ಸಣ್ಣ ಹುಡುಗ, ಅವರ ಪಕ್ಷದಲ್ಲಿ ದೊಡ್ಡ ದೊಡ್ಡ ನಾಯಕರಿದ್ದಾರಲ್ಲಾ ಅವರ ಮೂಲಕ ಟನಲ್ ರಸ್ತೆ ಬಗ್ಗೆ ಸದನದಲ್ಲಿ ಚರ್ಚೆ ಮಾಡಿಸಲಿ ಎಂದು ಶಿವಕುಮಾರ್ ತಿರುಗೇಟು ನೀಡಿದರು.

ನಾನು ಬಂದ ಮೇಲೆ ಯಾಕೆ ಹೋರಾಟ? : ಬಿಡದಿ ಟೌನ್ ಶಿಪ್ ಯೋಜನೆ ನಾನು ಮಾಡಿದ್ದಲ್ಲ. ಕುಮಾರಸ್ವಾಮಿ ಮಾಡಿರುವುದು. ಅದನ್ನು ನಾನು ಡಿನೋಟಿಫಿಕೇಷನ್ ಮಾಡಲು ಬರುವುದಿಲ್ಲ. ರೈತರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡುತ್ತೇವೆ. ಅವತ್ತಿನಿಂದ ಹೋರಾಟ ಮಾಡದೇ, ನಾನು ಬಂದಾಗ ಮಾತ್ರ ಯಾಕೆ ಹೋರಾಟ ಮಾಡಬೇಕು? ಎಂದು ಅವರು ಪ್ರಶ್ನಿಸಿದರು.

9 ಸಾವಿರ ಎಕರೆ ಪೈಕಿ 1 ಸಾವಿರಕ್ಕೂ ಹೆಚ್ಚು ಜಮೀನು ಈಗಾಗಲೇ ಕೆಐಎಡಿಬಿಗೆ ನೀಡಲಾಗಿದೆ. ಅದಕ್ಕೆ ಪರಿಹಾರವನ್ನು ಪಡೆಯಲಾಗಿದೆ. ಆಗ ಹೋರಾಟ ಮಾಡದೆ ಈಗ ಯಾಕೆ? ಇದರಲ್ಲೂ ಶೇ.75ರಷ್ಟು ಜನ ತಮಗೆ ಏನು ಪರಿಹಾರ ಬೇಕು ಎಂದು ಕೇಳಿದ್ದಾರೆ" ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News