ಸುರ್ಜೇವಾಲ ಅಧಿಕಾರಿಗಳ ಸಭೆ ಮಾಡಿಲ್ಲ, ಎಲ್ಲವೂ ಸುಳ್ಳು : ಡಿ.ಕೆ.ಶಿವಕುಮಾರ್ ಸ್ಪಷ್ಟನೆ
ಡಿ.ಕೆ.ಶಿವಕುಮಾರ್
ಅರಸೀಕೆರೆ: "ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಅವರು ಯಾವ ಅಧಿಕಾರಿಗಳನ್ನೂ ಭೇಟಿ ಮಾಡಿಲ್ಲ, ಮಾತನಾಡಿಲ್ಲ. ಅಧಿಕಾರಿಗಳ ಸಭೆ ಮಾಡಿದ್ದಾರೆ ಎಂಬುದು ಸುಳ್ಳು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರಬೆಟ್ಟ ಹಾಗೂ ಕೋಡಿ ಮಠದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶನಿವಾರ ಅವರು ಪ್ರತಿಕ್ರಿಯೆ ನೀಡಿದರು.
ಸುರ್ಜೇವಾಲ ಅವರು ಅಧಿಕಾರಿಗಳ ಸಭೆ ನಡೆಸಿದ್ದಾರೆ ಎನ್ನುವ ಬಗ್ಗೆ ಕೇಳಿದಾಗ, "ಸರಕಾರ ನಮ್ಮದೇ ಇದೆ. ಏನಾದರೂ ಹೇಳಬೇಕೆಂದರೆ ಅವರು ನಮಗೆ ಹೇಳುತ್ತಾರೆ. ಏನಾದರೂ ತಪ್ಪುಗಳಿದ್ದರೆ ನಮಗೆ ತಿಳಿಸುತ್ತಾರೆ, ನಾವು ತಿದ್ದಿಕೊಳ್ಳುತ್ತೇವೆ. ಇದನ್ನು ಹೊರತಾಗಿ ಅಧಿಕಾರಿಗಳ ಭೇಟಿ ಮಾಡಿದ್ದಾರೆ ಎಂಬುದು ಸುಳ್ಳು" ಎಂದರು.
ದೊಡ್ಡವರ ಬಗ್ಗೆ ಮಾತಾಡುವುದಿಲ್ಲ :
ಅಧಿಕಾರಿಗಳ ಸಭೆ ಕಾನೂನುಬಾಹಿರ ಎನ್ನುವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ದೊಡ್ಡವರ ಬಗ್ಗೆ ನಾನು ಮಾತನಾಡುವುದಿಲ್ಲ. ಇದರ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರು ಉತ್ತರ ನೀಡಿದ್ದಾರಲ್ಲ. ಅವರು ಉತ್ತರ ನೀಡಿದ ಮೇಲೆ ನಾನೇನು ಉತ್ತರ ನೀಡುವುದಿದೆ. ಮುಖ್ಯಮಂತ್ರಿಯವರಿಗೆ ನನಗಿಂತ ಹೆಚ್ಚು ಮಾಹಿತಿಯಿದೆ" ಎಂದು ಹೇಳಿದರು.
ಯೂರಿಯಾ ಕೊರತೆ ಬಗ್ಗೆ ಕೇಳಿದಾಗ, "ಯೂರಿಯಾವನ್ನು ಸರಬರಾಜು ಮಾಡುವುದು ಕೇಂದ್ರ ಸರಕಾರ. ನಮ್ಮ ರೈತರು ಈ ಭಾರಿ ಹೆಚ್ಚಿನ ಬಿತ್ತನೆ ಮಾಡಿದ್ದಾರೆ. ಹೆಚ್ಚಿನ ಯೂರಿಯಾಗೆ ಈಗಾಗಲೇ ಒತ್ತಾಯವನ್ನು ಮಾಡಿದ್ದೇವೆ. ರೈತರು ತಾಳ್ಮೆಯಿಂದಿರಲಿ. ಮುಖ್ಯಮಂತ್ರಿಯವರು ಹಾಗೂ ಕೃಷಿ ಸಚಿವರು ಇದರ ಬಗ್ಗೆ ಮಾತನಾಡಿದ್ದಾರೆ" ಎಂದರು.