ʼಧರ್ಮಸ್ಥಳ ಪ್ರಕರಣʼ ಬಿಜೆಪಿಯದ್ದೇ ಷಡ್ಯಂತ್ರ : ಡಿ.ಕೆ.ಶಿವಕುಮಾರ್
Update: 2025-09-01 19:33 IST
ಬೆಂಗಳೂರು, ಸೆ.1: ಪ್ರಸಕ್ತ ಎಸ್‍ಐಟಿ ಮಾಡಿರುವ ತನಿಖೆ ಬಗ್ಗೆ ಅವರಿಗೆ (ಬಿಜೆಪಿ) ಸಮಾಧಾನ ಇಲ್ಲವೇ? ಬಿಜೆಪಿಯಲ್ಲಿ ಆಂತರಿಕವಾಗಿ ಎರಡು ಬಣಗಳು ಕಚ್ಚಾಡುತ್ತಿವೆ. ಇದೆಲ್ಲವೂ ಅವರದ್ದೇ ಷಡ್ಯಂತ್ರ. ಎಸ್‍ಐಟಿ ರಚನೆ ಮಾಡಬೇಕು ಎಂದು ಹೇಳಿದವರು ಅವರೆ, ಇದನ್ನು ಸ್ವಾಗತ ಮಾಡಿದವರೂ ಅವರೆ. ಈಗ ನಾಟಕ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಧರ್ಮಸ್ಥಳ ಪ್ರಕರಣದ ಕುರಿತು ಎನ್‍ಐಎ ತನಿಖೆಗೆ ಬಿಜೆಪಿ ಒತ್ತಾಯಿಸುತ್ತಿರುವ ಕುರಿತು ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳಕ್ಕೆ ನ್ಯಾಯ ಸಿಗಬೇಕು ಎಂದು ಬಿಜೆಪಿ ಎಂದೂ ಬಾಯಿಬಿಚ್ಚಲಿಲ್ಲ. ಬಿಜೆಪಿಯ ಮೂಲ ಕಾರ್ಯಕರ್ತರೇ ಧರ್ಮಸ್ಥಳದ ಮೇಲೆ ಕೆಟ್ಟ ಹೆಸರು ತರಬೇಕು ಎಂದು ಮಾಡಿರುವ ಕೆಲಸವಿದು ಎಂದು ಹೇಳಿದರು.