ನ್ಯಾಷನಲ್ ಹೆರಾಲ್ಡ್ ತನಿಖೆ | ಡಿಸಿಎಂ ಡಿ ಕೆ ಶಿವಕುಮಾರ್ ಗೆ ದಿಲ್ಲಿ ಪೊಲೀಸ್ ನೋಟಿಸ್
ಡಿ.ಕೆ. ಶಿವಕುಮಾರ್ | Photo Credit : PTI
ಹೊಸದಿಲ್ಲಿ, ಡಿ. 5: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ನಡೆಸುತ್ತಿರುವ ತನ್ನ ತನಿಖೆಯ ಭಾಗವಾಗಿ ವಿಸ್ತೃತ ಹಣಕಾಸು ಹಾಗೂ ವಹಿವಾಟು ಮಾಹಿತಿ ಕೋರಿ ದಿಲ್ಲಿ ಪೊಲೀಸ್ನ ಆರ್ಥಿಕ ಅಪರಾಧ ದಳ (ಇಒಡಬ್ಲ್ಯು) ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ನೋಟಿಸು ಜಾರಿ ಮಾಡಿದೆ.
ನವೆಂಬರ್ 29ರ ದಿನಾಂಕದ ನೋಟಿಸಿನ ಪ್ರಕಾರ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಅಕ್ಟೋಬರ್ 3ರಂದು ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಮಾಹಿತಿ ಶಿವಕುಮಾರ್ ಅವರಲ್ಲಿ ಇದೆ ಎಂದು ನಂಬಲಾಗಿದೆ. ಡಿಸೆಂಬರ್ 19ಕ್ಕಿಂತ ಮುನ್ನ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಅಥವಾ ಮನವಿ ಮಾಡಲಾದ ದಾಖಲೆಗಳನ್ನು ಸಲ್ಲಿಸುವಂತೆ ಅವರಿಗೆ ಸೂಚಿಸಲಾಗಿದೆ.
ಶಿವಕುಮಾರ್ ಅವರ ವೈಯಕ್ತಿಕ ಹಾಗೂ ರಾಜಕೀಯ ಹಿನ್ನೆಲೆ, ಕಾಂಗ್ರೆಸ್ ನೊಂದಿಗಿನ ಅವರ ನಂಟು, ಹಾಗೂ ಅವರು ಅಥವಾ ಅವರು ನಂಟು ಹೊಂದಿದ ಕಂಪೆನಿಗಳು ಯಂಗ್ ಇಂಡಿಯಾಕ್ಕೆ ವರ್ಗಾವಣೆ ಮಾಡಿದ್ದಾರೆ ಎನ್ನಲಾದ ಹಣದ ಸಂಪೂರ್ಣ ವಿವರಗಳನ್ನು ಆರ್ಥಿಕ ಅಪರಾಧ ದಳ (ಇಒಡಬ್ಲ್ಯು) ಕೋರಿದೆ.
ಈ ಹಣ ವರ್ಗಾವಣೆಯ ಉದ್ದೇಶ ಹಾಗೂ ಮೂಲ, ಯಂಗ್ ಇಂಡಿಯಾ ಅಥವಾ ಎಐಸಿಸಿ ಅಧಿಕಾರಿಗಳೊಂದಿಗೆ ಯಾವುದೇ ಸಂವನದ ಕುರಿತು ಹಾಗೂ ಇತರರ ಸೂಚನೆ ಮೇರೆಗೆ ಪಾವತಿಗಳನ್ನು ಮಾಡಲಾಗಿದೆಯೇ ಎಂಬ ಮಾಹಿತಿಯನ್ನು ಕೂಡ ತನಿಖಾಧಿಕಾರಿಗಳು ಬಯಸಿದ್ದಾರೆ. ಅವರಿಂದ ಆದಾಯ ತೆರಿಗೆ ಸಲ್ಲಿಕೆ, ಹಣಕಾಸು ವಿವರ ಹಾಗೂ ವಹಿವಾಟಿಗೆ ಸಂಬಂಧಿಸಿದ ದೇಣಿಗೆ ಪ್ರಮಾಣ ಪತ್ರಗಳನ್ನು ಕೂಡ ತನಿಖಾಧಿಕಾರಿಗಳು ಕೋರಿದ್ದಾರೆ.
ಈ ನೋಟಿಸ್ ಅನ್ನು ರಾಜಕೀಯ ಪ್ರೇರಿತ ಎಂದು ಶಿವಕುಮಾರ್ ಅವರ ಆಪ್ತ ಮೂಲಗಳು ಕರೆದಿವೆ. ಬಿಜೆಪಿಯೊಂದಿಗೆ ಸಹಕರಿಸದ ಕಾರಣಕ್ಕೆ ಅವರನ್ನು ಗುರಿಯಾಗಿಸಲಾಗಿದೆ. ಅವರು ಹೆಚ್ಚು ಒತ್ತಡಕ್ಕೆ ಒಳಗಾಗಿರುವ ಕಾಂಗ್ರೆಸ್ ನಾಯಕರಲ್ಲಿ ಒಬ್ಬರು. ಅವರನ್ನು ಬಿಜೆಪಿಗೆ ಮಣಿಸಲು ಸಾಧ್ಯವಾಗಲಿಲ್ಲ ಎಂದು ಆಪ್ತ ಮೂಲಗಳು ಹೇಳಿವೆ.