×
Ad

ಕುಮಾರಸ್ವಾಮಿ ಜೊತೆ ಬಹಿರಂಗ ಚರ್ಚೆಗೆ ನಾನು ಸಿದ್ಧ, ಮಾಧ್ಯಮಗಳೇ ವೇದಿಕೆ ಕಲ್ಪಿಸಲಿ : ಡಿಕೆಶಿ ಸವಾಲು

"ನನ್ನ ಕುಟುಂಬದ ವಿರುದ್ಧ ಕುಮಾರಸ್ವಾಮಿ ಅವರ ಷಡ್ಯಂತ್ರ ಹೊಸತೇನಲ್ಲ"

Update: 2025-09-30 19:39 IST

ಡಿ.ಕೆ.ಶಿವಕುಮಾರ್

ಬೆಂಗಳೂರು, ಸೆ. 30: ‘ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನನ್ನ ವಿಚಾರದಲ್ಲಿ ಕೇವಲ ಹಿಟ್ ಅಂಡ್ ರನ್ ಮಾಡುತ್ತಿದ್ದು, ಇದಕ್ಕೆ ಕೊನೇ ಹಾಡಬೇಕು. ಮಾಧ್ಯಮಗಳೇ ಒಂದು ಸೂಕ್ತ ವೇದಿಕೆ ಕಲ್ಪಿಸಲಿ. ನಾನು, ಕುಮಾರಸ್ವಾಮಿ ಅವರ ಜೊತೆ ಬಹಿರಂಗ ಚರ್ಚೆ ಮಾಡಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿ ಹಾಗೂ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮೊದಲಿನಿಂದಲೂ ನನ್ನನ್ನು ಕುಮಾರಸ್ವಾಮಿ ಜೈಲಿಗೆ ಹಾಕಿಸಲೇಬೇಕೆಂದು ಸಂಕಲ್ಪ ಮಾಡಿ ಷಡ್ಯಂತ್ರ ಮಾಡುತ್ತಿದ್ದಾರೆ. ಈಗಲೂ ಅದನ್ನೇ ಮುಂದುವರಿಸುತ್ತಿರುವುದಾಗಿ ಅವರೇ ಹೇಳಿದ್ದು, ಜೈಲಿಗೆ ಹೋಗುವ ದಿನ ಹತ್ತಿರಬರುತ್ತಿದೆ ಎಂದಿದ್ದಾರೆ. ಹಬ್ಬ ಮುಗಿದ ಬಳಿಕ ಅವರಿಗೆ ಉತ್ತರ ನೀಡುತ್ತೇನೆ’ ಎಂದು ತಿರುಗೇಟು ನೀಡಿದರು.

ದಾಖಲೆ ಜನರ ಮುಂದಿಡಲಿ: ‘ಕುಮಾರಸ್ವಾಮಿ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅವರ ಕುಟುಂಬ ನನ್ನ ಕುಟುಂಬದ ಮೇಲೆ ನಡೆಸುವ ಷಡ್ಯಂತ್ರ ಹೊಸತಲ್ಲ. ಈ ಹಿಂದೆ ನನ್ನ ತಂಗಿ, ತಮ್ಮ ಸೇರಿದಂತೆ ಎಲ್ಲರ ಮೇಲೂ ಪ್ರಯತ್ನ ಮಾಡಿದ್ದರು. ಇದಕ್ಕೆ ಕೊನೆ ಹಾಡಬೇಕು. ಈಗಲೂ ಅದನ್ನೇ ಮುಂದುವರಿಸುತ್ತಿರುವುದಾಗಿ ಅವರೇ ಹೇಳಿದ್ದು, ಅವರಿಗೆ ಉತ್ತರ ನೀಡುತ್ತೇನೆ ಎಂದು ಹೇಳಿದರು.

ಈ ಕುರಿತು ಮಾಧ್ಯಮಗಳಲ್ಲಿ ಚರ್ಚೆ ನಡೆಯಲಿ, ಈ ಹಿಂದೆ ಸಾತನೂರಿನಲ್ಲಿ ಟಿ-20 ಪಂದ್ಯ ನಡೆದಂತೆ ನಡೆಯಲಿ. ನಾನು ವಿಧಾನಸಭೆಯಲ್ಲಿ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದೆ. ಅವರು ಸಂಸತ್ತಿಗೆ ಹೊರಟು ಹೋದರು. ಅವರ ಬದಲು ಬೇರೆ ನಾಯಕರ ಜೊತೆ ಚರ್ಚೆ ಮಾಡೋಣ ಎಂದರೆ ಅವರ ಪಕ್ಷದಲ್ಲಿ ನಮಗೆ ಸರಿಸಮನಾದ ನಾಯಕರಿಲ್ಲ ಎಂದು ಅವರು ತಿಳಿಸಿದರು.

ಮಧ್ಯಮಗಳೇ ನಮ್ಮ ನಡುವಿನ ಚರ್ಚೆಗೆ ವೇದಿಕೆ ಸಿದ್ಧಪಡಿಸಲಿ. ಈ ಹಿಂದೆ ಬಹಳಷ್ಟು ಬಾರಿ ಚರ್ಚೆಗೆ ಆಹ್ವಾನ ನೀಡಿದ್ದೆ, ಈಗಲೂ ಹೇಳುತ್ತಿದ್ದೇನೆ. ಸುಮ್ಮನೇ ಹಿಟ್ ಅಂಡ್ ರನ್ ಮಾಡುವುದಲ್ಲ. ನನ್ನ ವಿರುದ್ಧ ಅವರು ಮಾಡಿರುವ ಆರೋಪಗಳ ಬಗ್ಗೆ ಬಹಿರಂಗ ಚರ್ಚೆ ನಡೆಯಲಿ. ಅವರ ಕುಟುಂಬದ ಬಗ್ಗೆ ನನ್ನ ಬಳಿ ಇರುವ ಭಂಡಾರದಿಂದ ನಾನು ದಾಖಲೆಗಳನ್ನು ತೆಗೆದು ಇಡುತ್ತೇನೆ, ಅವರು ತಮ್ಮ ಭಂಡಾರದಿಂದ ನನ್ನ ವಿರುದ್ಧ ಇರುವ ದಾಖಲೆಗಳನ್ನು ಜನರ ಮುಂದಿಡಲಿ ಎಂದು ಅವರು ಕುಟುಕಿದರು.

ಜೈಲಿಗೆ ಹಾಕುವ ಅಧಿಕಾರ ಇರುವುದು ನ್ಯಾಯಾಧೀಶರಿಗೆ ಮಾತ್ರ. ನನ್ನ ವಿಚಾರದಲ್ಲಿ ಅವರೇ ನ್ಯಾಯಾಧೀಶರಂತೆ ಮಾತನಾಡುತ್ತಿದ್ದಾರೆ. ನ್ಯಾಯದೀಶರಂತೆ ವರ್ತಿಸುತ್ತಿರುವ ಅವರೂ ನ್ಯಾಯಾಲಯಕ್ಕೆ ಹೋಗುತ್ತಿದ್ದಾರೆ ಎಂದು ಶಿವಕುಮಾರ್ ವ್ಯಂಗ್ಯವಾಡಿದರು.

ಎಚ್‍ಡಿಕೆ ನೇತೃತ್ವದಲ್ಲಿ ನಿಯೋಗ ಹೋಗಲು ಸಿದ್ಧ: ‘ನೆರೆ ಪರಿಹಾರ ಸೇರಿದಂತೆ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಪಡೆಯಲು ಕುಮಾರಸ್ವಾಮಿ ನಾಯಕತ್ವದಲ್ಲೇ ರಾಜ್ಯದ ನಿಯೋಗ ಕೇಂದ್ರ ಸರಕಾರ ಹಾಗೂ ಪ್ರಧಾನಿ ಬಳಿ ಹೋಗಲು ಸಿದ್ಧ. ಎಚ್‍ಡಿಕೆ ಅವರು ಎಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದಾಗುತ್ತಾರೋ ಸಂಪೂರ್ಣ ಸಹಕಾರ ನೀಡಲು ನಮ್ಮ ಸರಕಾರ ಸಿದ್ಧ ಎಂದು ತಿಳಿಸಿದರು.

ನನ್ನ ಆಸ್ತಿ ಬೆಂಗಳೂರಿನಲ್ಲೇ ಇದೆ: ‘ಬಿಡದಿ ಟೌನ್‍ಶಿಪ್ ವಿಚಾರದಲ್ಲಿ ರಿಯಲ್ ಎಸ್ಟೇಟ್ ಬಗ್ಗೆ ಎಚ್‍ಡಿಕೆ ಅವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನಾನು ಬೆಂಗಳೂರಿನವನು ನನ್ನ ಆಸ್ತಿ ಬೆಂಗಳೂರು ಜಿಲ್ಲೆಯಲ್ಲೇ ಇದೆ. ನಾನು ಹೊರಗಿನಿಂದ ಬಂದು ಜಮೀನು ತೆಗೆದುಕೊಂಡಿಲ್ಲ’ ಎಂದು ಅವರು ಹರಿಹಾಯ್ದರು.

ತನಿಖೆ ಮಾಡಿಸಲಿ: ನಾನು ಜಮೀಮು ಲೂಟಿ ಮಾಡಿದ್ದೇನೆಂಬ ಬಗ್ಗೆ ಕುಮಾರಸ್ವಾಮಿ ಅಧಿಕೃತವಾಗಿ ದೂರು ಕೊಡಿಸಿ, ತನಿಖೆ ಮಾಡಿಸಲಿ. ನನಗೆ ಅಂತಹ ದಾರಿದ್ರ್ಯ ಬಂದಿಲ್ಲ ಎಂದ ಅವರು, ನೆರೆ ಪೀಡಿತ ಪ್ರದೇಶಕ್ಕೆ ಸಂಬಂಧ ಪಟ್ಟ ಎಲ್ಲ ಸಚಿವರು ಹೋಗಿದ್ದಾರೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೋಗಿ ಪರಿಶೀಲನೆ ಮಾಡಿದ್ದಾರೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News