ಮುಂದಿನ 8-10 ವರ್ಷ ಮಾತ್ರ ನನ್ನ ರಾಜಕಾರಣ : ಡಿ.ಕೆ.ಶಿವಕುಮಾರ್
“ಎ ಸಿಂಬಲ್ ಆಫ್ ಲಾಯಲ್ಟಿ ಡಿ.ಕೆ.ಶಿವಕುಮಾರ್” ಪುಸ್ತಕ ಲೋಕಾರ್ಪಣೆ
ಬೆಂಗಳೂರು : ನಾನು ಮುಂದಿನ 8 ರಿಂದ 10 ವರ್ಷಗಳ ಕಾಲ ಮಾತ್ರ ರಾಜಕಾರಣ ಮಾಡಬಹುದು. ಹೊಸಬರಿಗೆ ಸೂಕ್ತ ಸ್ಥಾನಗಳು ಸಿಗಬೇಕು. ಅದೇ ಕಾರಣಕ್ಕೆ ಹೆಚ್ಚು ದಿನ ರಾಜಕಾರಣದಲ್ಲಿ ಇರುವುದಿಲ್ಲ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣದಲ್ಲಿ ಬೆಳೆಯಲು ಪ್ರೋತ್ಸಾಹಿಸಲು ಮುಂದಾಗುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬುಧವಾರ ನಗರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ ನಡೆದ ಕೆ.ಎಂ.ರಘು ಡೈರಕ್ಟರ್ ಅವರು ರಚಿಸಿರುವ “ಎ ಸಿಂಬಲ್ ಆಫ್ ಲಾಯಲ್ಟಿ ಡಿ.ಕೆ.ಶಿವಕುಮಾರ್” ಎಂಬ ಪುಸ್ತಕ ಲೋಕಾರ್ಪಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಷ್ಟು ವರ್ಷಗಳ ಕಾಲ ನಾನು ರಾಜಕಾರಣದಲ್ಲಿ ಪ್ರಗತಿ ಸಾಧಿಸಲು ರಾಜ್ಯದ ಜನತೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರೇ ಮೂಲ ಕಾರಣ, ಹಾಗಾಗಿ ಯುವ ಸಮೂಹ ರಾಜಕಾರಣದಲ್ಲಿ ಬೆಳವಣಿಗೆ ಸಾಧಿಸಲು ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.
ನನ್ನ ಈವರೆಗಿನ ರಾಜಕೀಯ ಜೀವನ ತೃಪ್ತಿ ತಂದಿದ್ದು. ಅಂದು, ಇಂದು, ಇನ್ನು ಮುಂದೆ ಕೂಡ ಹೆಚ್ಚೆಚ್ಚು ಯುವಕರು ರಾಜಕಾರಣದಲ್ಲಿ ಮುಂದುವರಿಯಲು ಉತ್ತೇಜಿಸುತ್ತಾ ಸಾಗಲು ಬಯಸುವೆ. ಹಲವಾರು ಮಂದಿಯನ್ನು ರಾಜಕೀಯಕ್ಕೆ ತಂದು ಬೆಳೆಸಲು ಮುಂದಾಗುವವನೇ ನಿಜವಾದ ರಾಜಕಾರಿಣಿ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳುತ್ತಿದ್ದರು. ಅದರಂತೆ ಇಂದಿನವರೆಗೂ ಮುಂದೆಯೂ ಕೂಡ ರಾಜಕಾರಣದಲ್ಲಿ ಹಲವರನ್ನು ಪ್ರೋತ್ಸಾಹಿಸುತ್ತಾ ಸಾಗುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ನನ್ನನ್ನು ಹಳ್ಳಿಯಿಂದ ಈ ಮಟ್ಟದವರೆಗೂ ಬೆಳೆಸಿದವರಿಗೆ ಧನ್ಯವಾದ ಹೇಳುತ್ತೇನೆ. ಪಕ್ಷದ ಸಿದ್ಧಾಂತಗಳಿಗಾಗಿ ಇಂದಿಗೂ ಶ್ರಮಿಸುತ್ತಿದ್ದೇನೆ. ಇಂದಿಗೂ ಕೂಡ ಕಾರ್ಯಕರ್ತರನ್ನು ನಂಬಿದ್ದೇನೆ. ಶಾಲಾ ದಿನಗಳಲ್ಲಿಯೇ ಚುನಾವಣೆಯಲ್ಲಿ ಸ್ಪರ್ಧಿಸಿ ಹಲವು ವಿಚಾರಗಳನ್ನು ತಿಳಿದುಕೊಳ್ಳುತ್ತಾ ಬಂದಿದ್ದೆ. ಆ ನಂತರದಲ್ಲೂ ಬಿಎ ವ್ಯಾಸಂಗದಲ್ಲಿದ್ದಾಗಲೇ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ ಬಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಮೆಲುಕು ಹಾಕಿದರು.
ನನಗೆ ಈ ಪುಸ್ತಕ ಬರೆದಿರುವ ಬಗ್ಗೆಯೇ ಗೊತ್ತಿರಲಿಲ್ಲ. ನನ್ನ ಬಾಲ್ಯದ ದಿನಗಳಿಂದ ಹಿಡಿದು ಇಂದಿನವರೆಗಿನ ರಾಜಕಾರಣದ ಬಗ್ಗೆ ಬಹಳ ಸಂಶೋಧನೆ ಮಾಡಿ ಈ ಪುಸ್ತಕವನ್ನು ಹೊರತಂದಿದ್ದಾರೆ. ಕೆ.ಎಂ.ರಘು ಡೈರಕ್ಟರ್ ಅವರು ತುಂಬಾ ಹತ್ತೂ ಹಲವು ಅಚ್ಚರಿಗಳನ್ನೊಳಗೊಂಡ ನನ್ನ ಬಗ್ಗೆ ಅತ್ಯುತ್ತಮ ಕೃತಿ ತಂದಿರುವುದು ಸಂತೋಷ ವಿಷಯ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ್ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಚಿಕ್ಕಂದಿನಲ್ಲಿಯೇ ರಾಜಕಾರಣದಲ್ಲಿ ಸಾಕಷ್ಟು ತರಹದಲ್ಲಿ ತೊಡಗಿಸಿಕೊಳ್ಳುತ್ತಾ ಈ ಮಟ್ಟಿಗೆ ಬೆಳೆದಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡ ಡಿಕೆಶಿ ಅವರ ಉತ್ಸಾಹ ಕಂಡ ಪ್ರೋತ್ಸಾಹಿಸಿದ್ದರು. ಅದರಂತೆ ರಾಜಕೀಯದ ಹಲವು ಏಳುಬೀಳುಗಳನ್ನು ಕಂಡರೂ ಅವುಗಳನ್ನು ಹಿಮ್ಮೆಟ್ಟಿಸುತ್ತಾ ಬಂದಿರುವುದೇ ಶ್ಲಾಘನೀಯ ಎಂದರು.
ಹಿರಿಯ ಸಾಹಿತಿ ಡಾ.ಕರೀಗೌಡ ಬೀಚನಹಳ್ಳಿ ಮಾತನಾಡಿ, ಒಕ್ಕಲಿಗರು ಜಾತ್ಯತೀತ ಮನೋಭಾವದವರು ಅದನ್ನು ಡಿ.ಕೆ.ಶಿವಕುಮಾರ್ ನಿರೂಪಿಸಿದ್ದಾರೆ. ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ ನಂತರ ಇವರು ರಾಜಕಾರಣದಲ್ಲಿ ಅಪಾರ ಮನ್ನಣೆ ಗಳಿಸಿದ್ದಾರೆಂದು ಭಾವಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿ.ಎಸ್.ಉಗ್ರಪ್ಪ, ಹಿರಿಯ ಸಾಹಿತಿಗಳಾದ ಡಾ.ಚಂದ್ರಶೇಖರ ಕಂಬಾರ, ಕೆ.ಷರೀಪಾ, ಕಸಾಪ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್ ಸೇರಿ ಹಲವರು ಉಪಸ್ಥಿತರಿದ್ದರು.