×
Ad

ಸಿಎಂ ಜತೆ ಗುತ್ತಿಗೆದಾರರ ಸಭೆ ಏರ್ಪಾಡು : ಡಿ.ಕೆ.ಶಿವಕುಮಾರ್

Update: 2026-03-06 21:43 IST

ಬೆಂಗಳೂರು : ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ನಾನು ಸೇರಿ ಅಧಿವೇಶನದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಗುತ್ತಿಗೆದಾರರ ಸಭೆ ಮಾಡಿ, ಅವರ ಬಿಲ್ ಬಾಕಿ ಸಂಬಂಧ ಸಮಸ್ಯೆ ಪರಿಹಾರ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನಾನಿರತ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಗುತ್ತಿಗೆದಾರರು ರಾಜ್ಯದ ಬದುಕಿಗೆ ಸಹಾಯ ಮಾಡುತ್ತಿದ್ದೀರಿ. ನಮ್ಮ ಸರಕಾರ ತಂದಿದ್ದೀರಿ ಎಂಬ ಅರಿವು ನಮಗಿದೆ. ನಿಮಗೆ ಹಣ ಪಾವತಿ ಮಾಡಬಾರದು ಎಂಬುದು ನಮ್ಮ ಉದ್ದೇಶವಲ್ಲ ಎಂದರು.

ಜಲಸಂಪನ್ಮೂಲ ಇಲಾಖೆಯಲ್ಲಿ 13 ಸಾವಿರ ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯಲ್ಲಿ 3 ಸಾವಿರ ಕೋಟಿ ರೂ.ಸೇರಿದಂತೆ ಸುಮಾರು 37ಸಾವಿರ ಕೋಟಿ ರೂ.ಬಿಲ್ ಬಾಕಿ ಇದೆ. ನಿಮ್ಮ ನೋವು ನಮಗೆ ಗೊತ್ತಿದೆ. ನಾನು ಚುನಾವಣೆಗೂ ಆರು ತಿಂಗಳು ಮುಂಚಿತವಾಗಿ ಹೇಳಿದ್ದೆ. ಇಲಾಖೆಗಳಲ್ಲಿ ಹಣವಿಲ್ಲದೆ ಯಾವುದೇ ಗುತ್ತಿಗೆ ಕಾಮಗಾರಿ ತಗೆದುಕೊಳ್ಳಬೇಡಿ ಎಂದು ಎಚ್ಚರಿಸಿದ್ದೆ ಎಂದು ಅವರು ಸ್ಮರಿಸಿದರು.

ಬಿಜೆಪಿ ಅವಧಿಯಲ್ಲಿ ಹಣ ಇರಲಿ, ಬಿಡಲಿ, ಕಾಮಗಾರಿ ಕೊಟ್ಟಿದ್ದೇ ಕೊಟ್ಟದ್ದು. ಗುತ್ತಿಗೆದಾರರು ಕೆಲಸ ತೆಗೆದುಕೊಂಡು ನಮ್ಮ ಎದೆ ಮೇಲೆ ಕೂತಿದ್ದೀರಿ. ಇದಕ್ಕೆ ಒಂದು ರೂಪ ನೀಡಬೇಕಿದೆ. ಇದಕ್ಕೆ ಸುಮಾರು 50 ಸಾವಿರ ಕೋಟಿ ರೂ.ಗಳಷ್ಟು ಬಿಲ್ ಬಾಕಿ ಇದ್ದು, ಬಾಂಡ್ ಅಥವಾ ಇತರೆ ಮಾರ್ಗ ಹುಡುಕಬೇಕು. ಆಗ ಮಾತ್ರ ಈ ಸಮಸ್ಯೆ ಬಗೆಹರಿಯಲಿದೆ ಎಂದರು.

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ನೆರವು ನೀಡಲು ಗ್ಯಾರಂಟಿ ಯೋಜನೆ ನೀಡಿದ್ದು, ಇದಕ್ಕಾಗಿ ಸುಮಾರು 52 ಸಾವಿರ ಕೋಟಿ ರೂ.ವಾರ್ಷಿಕವಾಗಿ ವೆಚ್ಟ ಮಾಡಲಾಗುತ್ತಿದೆ. ಆದರೂ ನಮ್ಮ ರಾಜ್ಯದಲ್ಲಿ ಉತ್ತಮ ಬಜೆಟ್ ನೀಡುತ್ತಿದ್ದೇವೆ. ಇವತ್ತು ಸಿಎಂ ಸರಿದೂಗಿಸಿ ಬಜೆಟ್ ಮಂಡಿಸಿದ್ದಾರೆ. ಬಿಜೆಪಿಯವರು ನಿನ್ನೆಯೇ ಖಾಲಿ ಚೊಂಬು ತೆಗೆದುಕೊಂಡಿದ್ದಾರೆ. ಕೇಂದ್ರ ಬಜೆಟ್‍ನಲ್ಲಿ ನಮಗೆ ಅವರು ಏನು ಕೊಟ್ಟರು? ಖಾಲಿ ಬಿಂದಿಗೆ ಕೊಟ್ಟರು ಎಂದು ಅವರು ಟೀಕಿಸಿದರು.

ಬೆಂಗಳೂರು ಅಭಿವೃದ್ಧಿಗೆ ನಮ್ಮ ಕರ್ತವ್ಯ ನಾವು ಮಾಡಬೇಕು. ನೀವು ನಮ್ಮನ್ನು ಬಿಡಂಗಿಲ್ಲ, ನಾವು ನಿಮ್ಮನ್ನು ಬಿಡಂಗಿಲ್ಲ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಬಿಡಿ. ನೀವು ಹೇಳಿಕೆ ನೀಡಿದರೆ ಅದು ಒಂದು ದಿನದ ಸುದ್ದಿಯಾಗಬಹುದು, ಯಾವುದೇ ಪ್ರಯೋಜನವಿಲ್ಲ. ನೀವು ನಮ್ಮ ಬಳಿ ಬಂದು ಚರ್ಚೆ ಮಾಡಿ, ಯಾವ ರೀತಿ ಹಣ ಹೊಂದಿಸಿ ಸಮಸ್ಯೆ ಬಗೆಹರಿಸಬೇಕು ನೋಡೋಣ. ನಿಮ್ಮ ಜತೆ ನಾವಿದ್ದೇವೆ ಎಂದು ಅವರು ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News