4.54 ಕೋಟಿ ಮಂದಿಗೆ ಪ್ರತಿ ತಿಂಗಳು ‘ಇಂದಿರಾ ಆಹಾರ ಕಿಟ್’ ಘೋಷಣೆ
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ರಾಜ್ಯದ ಜನರ ಆರೋಗ್ಯ ಹಾಗೂ ಪೌಷ್ಟಿಕಾಂಶಕ್ಕೆ ಒತ್ತು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್‍ನಲ್ಲಿ ‘ಇಂದಿರಾ ಆಹಾರ ಕಿಟ್’ ಘೋಷಣೆ ಮಾಡಿದ್ದಾರೆ.
ನಮ್ಮ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಬಡವರ ಹಸಿವು ನೀಗಿಸುವ ಉದ್ದೇಶದಿಂದ 4.54 ಕೋಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ ಹೆಚ್ಚುವರಿ ಅಕ್ಕಿಯನ್ನು ಯಶಸ್ವಿಯಾಗಿ ವಿತರಿಸಲಾಗಿದೆ. ಮೂರು ವರ್ಷಗಳಲ್ಲಿ ಈ ಯೋಜನೆಗಾಗಿ 17,167 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರಸ್ತುತ ನೀಡಲಾಗುತ್ತಿರುವ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿ ತಿಂಗಳು ಪೌಷ್ಟಿಕಾಂಶವುಳ್ಳ ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ ಒಳಗೊಂಡ ‘ಇಂದಿರಾ ಆಹಾರ ಕಿಟ್’ ವಿತರಣೆ ಮಾಡಲಾಗುವುದು. ಇದಕ್ಕಾಗಿ 2026-27ನೆ ಸಾಲಿನಲ್ಲಿ 6,200 ಕೋಟಿ ರೂ. ಗಳನ್ನು ಮೀಸಲಿರಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.
ಆಹಾರ ಧಾನ್ಯಗಳ ವಿತರಣೆಗಾಗಿ ನೀಡಲಾಗುವ ಚಿಲ್ಲರೆ ಹಾಗೂ ಸಗಟು ಲಾಭಾಂಶದ ಪಾವತಿಯಲ್ಲಿ ವಿಳಂಬವನ್ನು ನಿವಾರಿಸಲು ಫಸ್ಟ್ ಅಪ್ಲಿಕೇಷನ್ ಮೂಲಕ ಲಾಭಾಂಶ ನೇರವಾಗಿ ಪಾವತಿಸಲಾಗುವುದು. ಪ್ರಸ್ತುತ ಜಾರಿಯಲ್ಲಿರುವ ಇಲಾಖೆಯ ಸಹಾಯವಾಣಿ (1967) ವ್ಯವಸ್ಥೆಯನ್ನು ಸ್ವಯಂ ಚಾಲಿತ ದೂರು ಕೇಂದ್ರ, ಧ್ವನಿ ಚಾಟ್ಬಾಟ್ ಮತ್ತು ಲೈವ್ ಕರೆ ವರ್ಗಾವಣೆ ವ್ಯವಸ್ಥೆಗಳನ್ನು ಒಳಗೊಂಡ ಎಐ ಆಧಾರಿತ ಸ್ಮಾರ್ಟ್ ಅನ್ನವಾಣಿ’ ಆಗಿ ಪರಿವರ್ತಿಸಲಾಗುವುದು ಎಂದು ಅವರು ಉಲ್ಲೇಖಿಸಿದರು.
ದಾಸೋಹ ಯೋಜನೆಯಡಿ ಈಗಾಗಲೇ ರಾಜ್ಯದಾದ್ಯಂತ 274 ಕಲ್ಯಾಣ ಸಂಸ್ಥೆಗಳ 32,059 ಫಲಾನುಭವಿಗಳಿಗೆ 14 ಕೋಟಿ ರೂ. ವೆಚ್ಚದಲ್ಲಿ ಆಹಾರ ಭದ್ರತೆಯನ್ನು ಒದಗಿಸಲಾಗುತ್ತಿದ್ದು, ಪ್ರಸಕ್ತ ವರ್ಷದಲ್ಲಿ 34 ಹೊಸ ಕಲ್ಯಾಣ ಸಂಸ್ಥೆಗಳಲ್ಲಿ ಇರುವ 6,701 ಫಲಾನುಭವಿಗಳಿಗೂ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.