×
Ad

ʼಅರಣ್ಯವಾಸಿಗಳಿಗೆ ತೊಂದರೆ ಬೇಡʼ; ಜು.15ರೊಳಗೆ ಅರಣ್ಯ ಅನುಮತಿ ಪ್ರಕರಣ ಇತ್ಯರ್ಥಕ್ಕೆ ಸಿಎಂ ಸೂಚನೆ

Update: 2026-06-29 21:25 IST

ಬೆಂಗಳೂರು : ಸಣ್ಣಪುಟ್ಟ ನೆಪಗಳನ್ನು ಮುಂದಿಟ್ಟು ಅರಣ್ಯವಾಸಿಗಳನ್ನು ಯಾವುದೇ ಕಾರಣಕ್ಕೂ ತೊಂದರೆ ನೀಡಬಾರದು. ಜತೆಗೆ ಬಾಕಿ ಇರುವ ಅರಣ್ಯ ಅನುಮತಿ ಪ್ರಕರಣಗಳನ್ನು ಜು.15ರೊಳಗೆ ಇತ್ಯರ್ಥಪಡಿಸಬೇಕು ಎಂದು ಅರಣ್ಯಾಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಅರಣ್ಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಸಣ್ಣಪುಟ್ಟ ನೆಪಗಳನ್ನು ಮುಂದಿಟ್ಟು ಅವರಿಗೆ ತೊಂದರೆ ನೀಡಬಾರದು. ನಿಯಮಾನುಸಾರ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಗಣಿಗಾರಿಕೆ ಸೇರಿ ನಾನಾ ಚಟುವಟಿಕೆಗಳಿಗೆ ಸರಕಾರ ಜಾಗ ಪಡೆದು ವರ್ಷಗಳ ಕಾಲ ಚಟುವಟಿಕೆ ಆರಂಭಿಸದಿದ್ದರೆ ಕ್ರಮ ಕೈಗೊಳ್ಳಿ. ಬಾಕಿ ಇರುವ ಅರಣ್ಯ ಅನುಮತಿ ಪ್ರಕರಣಗಳನ್ನು ಜುಲೈ 15ರೊಳಗೆ ಇತ್ಯರ್ಥಪಡಿಸುವ ಜತೆಗೆ, ಅರಣ್ಯವಾಸಿಗಳ ಹಕ್ಕುಗಳ ರಕ್ಷಣೆ, ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿ.ನಮ್ಮ ಅರಣ್ಯ ಪ್ರಾಣಿ ಸಂಪತ್ತು ಅಮೂಲ್ಯವಾದದ್ದು. ಸಂರಕ್ಷಣೆ ಪರಿಣಾಮಕಾರಿಯಾಗಿ ಆಗಬೇಕು ಎಂದು ಅವರು ಸೂಚನೆ ನೀಡಿದರು.

ಬೆಳೆನಾಶ, ಜಾನುವಾರು ಜೀವಹಾನಿ, ಮಾನವ ಪ್ರಾಣ ಹಾನಿ, ಶಾಶ್ವತ ಅಂಗವಿಕಲತೆ, ಭಾಗಶಃ ಅಂಗವಿಕಲತೆ, ಮಾನವ ಗಾಯ, ಆಸ್ತಿನಾಶ, ಮಾಶಾಸನ ಗಳಿಗಾಗಿ 2025-2026ನೆ ಸಾಲಿನಲ್ಲಿ 630 ಕೋಟಿ ರೂ., ಪರಿಹಾರ ವಿತರಿಸಲಾಗಿದೆ. ಮಾನವ, ಅರಣ್ಯಜೀವಿ ಸಂಘರ್ಷ ತಪ್ಪಿಸಲು ರೇಲ್ವೇ ಬ್ಯಾರಿಕೇಡ್, ಆನೆತಡೆ ಕಂದಕ ಮತ್ತು ಸೌರತಂತಿ ಬೇಲಿಗಳನ್ನು ಅಳವಡಿಸಲಾಗುತ್ತಿರುವ ಬಗ್ಗೆ ಹಾಗೂ ಆನೆ ಕಾರ್ಯಪಡೆ, ಚಿರತೆ ಕಾರ್ಯಪಡೆ ಹಾಗೂ ಎಸ್‍ಎಂಎಸ್ ಮತ್ತು ಇತರೆ ಡಿಜಿಟಲ್ ಬೋರ್ಡ್‍ಗಳ ಮೂಲಕ ಅರಿವು ಮೂಡಿಸುತ್ತಿರುವ ಪ್ರಮಾಣಗಳ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಾಣಿಗಳು ಈ ಎಲ್ಲ ಅಡೆ ತಡೆಗಳನ್ನು ದಾಟಲು ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತವೆ. ಹೀಗಾಗಿ ಅಧಿಕಾರಿಗಳು ಆಗಾಗ ಇತರೆ ಹೊಸ ಮಾರ್ಗೋಪಾಯಗಳ ಬಗ್ಗೆ ಅಧ್ಯಯನ ನಡೆಸಬೇಕು. ಅದೇ ರೀತಿ, ಶರಾವತಿ ಪಂಪ್ ಸ್ಟೋರೇಜ್, ಗೋವಾ ತಮ್ನೇರ್, ಕಳಸಾ ಬಂಡೂರಿ ಮತ್ತು ಬಿಡಿಎ ಫೆರಿಫೆರಲ್ ರಿಂಗ್ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಅರಣ್ಯ ಇಲಾಖೆಗಳ ವಿವಿಧ ಹಂತಗಳಲ್ಲಿ ಬಾಕಿ ಇರುವ ಅರಣ್ಯ ಅನುಮತಿ ವಿಚಾರಗಳಲ್ಲಿ ತ್ವರಿತ ಗತಿಯಲ್ಲಿ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ರಿತೇಶ್ ಕುಮಾರ್ ಸಿಂಗ್, ಅಂಜುಮ್ ಪರ್ವೇಜ್, ಕರ್ನಾಟಕ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್ ಸೇರಿದಂತೆ ಪ್ರಮುಖರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News