×
Ad

‘ಎಸ್‍ಐಆರ್’ ಬಗ್ಗೆ ಆಯೋಗಕ್ಕೆ ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ಬಂದಿಲ್ಲ : ಪ್ರಿಯಾಂಕ್ ಖರ್ಗೆ

Update: 2026-06-29 21:34 IST

ಪ್ರಿಯಾಂಕ್ ಖರ್ಗೆ

ಬೆಂಗಳೂರು : ತಮಿಳುನಾಡು, ಕೇರಳ, ಬಂಗಾಳ ಸೇರಿದಂತೆ ಹಲವು ಕಡೆಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್)ನಡೆದಾಗ, ಅಲ್ಲಿನ ಬಡವರನ್ನು ಮತದಾನದ ಅವಕಾಶದಿಂದ ವಂಚಿತರನ್ನಾಗಿ ಮಾಡಲಾಗಿದೆ. ಹೀಗಾಗಿ ರಾಜ್ಯದಲ್ಲಿ ನಡೆಯುವ ಎಸ್‍ಐಆರ್ ಬಗ್ಗೆ ಆಯೋಗಕ್ಕೆ ನಾವು ಕೆಲ ಪ್ರಶ್ನೆಗಳನ್ನು ಕೇಳಿದ್ದು, ಇದುವರೆಗೂ ಉತ್ತರ ಬಂದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಅರ್ ವಿಚಾರವಾಗಿ ನಾವು ಸಂಪುಟ ಸಭೆಯಲ್ಲಿ ಕೆಲವು ಆಕ್ಷೇಪಣೆಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಮತ್ತು ಮುಖ್ಯ ಚುನಾವಣಾಧಿಕಾರಿ ಸಲ್ಲಿಸಿದ್ದೇವೆ. ನಮ್ಮ ಆಕ್ಷೇಪಕ್ಕೆ ಆಯೋಗದಿಂದ ಉತ್ತರ ಸಿಕ್ಕಿಲ್ಲ. ನಾವು ಎಸ್‍ಐಆರ್ ಮಾಡಬೇಡಿ ಎಂದು ಹೇಳಿಲ್ಲ. ಆದರೆ ಪಾರದರ್ಶಕವಾಗಿ ಮಾಡಿ, ಪ್ರಜಾಸತ್ತತ್ಮಕವಾದ ಮತದಾರರ ಪಟ್ಟಿಯನ್ನು ನೀಡುವುದು ಆಯೋಗದ ಜವಾಬ್ದಾರಿ ಎಂದರು.

ಎಸ್‍ಐಆರ್ ಮೂಲಕ ಯಾವ ಆಧಾರದಲ್ಲಿ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗುತ್ತಿದೆ. ಅದರ ಹಿಂದಿನ ತರ್ಕ ಏನು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕೇಳಿದ್ದೇವೆ. ಆದರೆ ಆಯೋಗವು ಇದುವರೆಗೂ ಯಾವುದೇ ಉತ್ತರವನ್ನು ನೀಡಿಲ್ಲ. ಎಸ್‍ಐಆರ್‍ಗೆ ನಮ್ಮ ವಿರೋಧವಿಲ್ಲ. ಆದರೆ ಎಸ್‍ಐಆರ್ ಮೂಲಕ ಅರ್ಹ ಮತದಾರರನ್ನು ಅವಕಾಶ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ಪಶ್ಚಿಮಬಂಗಾಳದಲ್ಲಿ 89 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅವರಿಗೆ ನ್ಯಾಯಧೀಕರಣದಲ್ಲೂ ಪ್ರಶ್ನೆ ಮಾಡಲು ಅವಕಾಶ ಇಲ್ಲವಾಗಿದೆ. ನ್ಯಾಯಧೀಕರಣದಲ್ಲಿ ಒಬ್ಬ ನ್ಯಾಯಾಧೀಶರು ರಾಜೀನಾಮೆ ನೀಡಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಏಕಾಏಕಿ ಸಾಧ್ಯವಿಲ್ಲ. 4 ವರ್ಷ ಸಮಯ ಬೇಕು ಎಂದಿದ್ದಾರೆ. ಆಯೋಗದ ಅಧಿಕಾರಿಗಳು ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿ, ಬಳಿಕ ಎಸ್‍ಐಅರ್ ಮಾಡಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ವಿಚಾರವಾಗಿ ವಿರೋಧ ಪಕ್ಷಗಳಿಂದ ನಾವು ಪಾಠ ಕಲಿಯಬೇಕಿಲ್ಲ, ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಲು ವಿರೋಧ ಮಾಡಿದ್ದು, ಬಿಜೆಪಿಯವರು. ಆ ಪ್ರಸ್ತಾವವನ್ನು ಆಗಿನ ಕೇಂದ್ರ ಸರಕಾರ ತಿರಸ್ಕರಿಸಿತ್ತು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಾರ್ಷಿಕ 1 ಸಾವಿರ ಕೋಟಿ ರೂ.ಗಳಿಗಿಂತಲೂ ಕಡಿಮೆ ಅನುದಾನ ನೀಡಲಾಗಿತ್ತು. ನಮ್ಮ ಸರಕಾರ 5 ಸಾವಿರ ಕೋಟಿ ರೂ. ನೀಡಿದೆ. ಬಿಜೆಪಿ ಅವಧಿಯಲ್ಲಿ ಆರ್‌ಎಸ್‍ಎಸ್ ಮಾನವ ಸಂಪನೂಲ ಸಂಸ್ಥೆ ರಚಿಸಿ 300 ಕೋಟಿ ರೂ. ಹಣ ಹೊಡೆಯುವ ಪ್ರಯತ್ನ ಮಾಡಿದ್ದರು ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News