×
Ad

ನಾಳೆಯಿಂದ ರಾಜ್ಯಾದ್ಯಂತ ಎಸ್‍ಐಆರ್ ಪ್ರಕ್ರಿಯೆ ಆರಂಭ : ರಾಜ್ಯ ಮುಖ್ಯ ಚುನಾವಣಾಧಿಕಾರಿ

► "ಆ.5ರಂದು ಕರಡು ಮತದಾರರ ಪಟ್ಟಿ, ಅ.7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ" ► "ರಾಜ್ಯಾದ್ಯಂತ ಶೇ.91.61ರಷ್ಟು ಮ್ಯಾಪಿಂಗ್ ಪೂರ್ಣ"

Update: 2026-06-29 19:40 IST

ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್

ಬೆಂಗಳೂರು : ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ನಾಳೆಯಿಂದ(ಜೂ.30) ಜುಲೈ 29ರ ವರೆಗೆ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆ ನಡೆಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ತಿಳಿಸಿದರು.

ಸೋಮವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ನಿರ್ವಾಚನ ನಿಲಯ(ಮುಖ್ಯ ಚುನಾವಣಾಧಿಕಾರಿ ಕಚೇರಿ)ದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಜೂ.16ರಂತೆ ರಾಜ್ಯದಲ್ಲಿ 5,54,32,314 ಮತದಾರರಿದ್ದಾರೆ. ಪ್ರತಿ ಮತದಾರರಿಗೆ ತಲಾ ಎರಡು ಗಣತಿ ನಮೂನೆ (ಎನ್ಯುಮರೇಷನ್ ಅರ್ಜಿ)ಗಳಂತೆ 11 ಕೋಟಿಗೂ ಹೆಚ್ಚು ನಮೂನೆಗಳನ್ನು ಮುದ್ರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಬೂತ್ ಮಟ್ಟದ ಅಧಿಕಾರಿಗಳು ಪ್ರತಿಯೊಂದು ಮನೆಗೂ ಜೂ.30ರಿಂದ ಜು.29ರೊಳಗೆ ಖುದ್ದಾಗಿ ಭೇಟಿ ನೀಡಿ, ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ. ಮತದಾರರು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಸಹಿ ಮಾಡಿ ಒಂದು ಪ್ರತಿಯನ್ನು ಬಿಎಲ್‍ಒಗಳಿಗೆ ನೀಡಬೇಕು. ಮತ್ತೊಂದು ಪ್ರತಿಯಲ್ಲಿ ಬಿಎಲ್‍ಒ ಸಹಿ ಪಡೆದು ತಾವು ಇಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.

ಮನೆಗಳಿಗೆ ಸ್ಟಿಕ್ಕರ್: ಬಿಎಲ್‍ಒ ಗಣತಿ ನಮೂನೆಯನ್ನು ಮನೆಗೆ ವಿತರಿಸಿ ನೇರಳೆ ಬಣ್ಣದ ಚೌಕಾಕಾರದ ಸ್ಟಿಕ್ಕರ್ ಅಂಟಿಸುತ್ತಾರೆ. ಬಿಎಲ್‍ಒ ಭೇಟಿ ನೀಡಿದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೆ, ಬೀಗ ಹಾಕಿದ್ದರೆ ವೃತ್ತಾಕಾರದ ಕೆಂಪು ಬಣ್ಣದ ಸ್ಟಿಕ್ಕರ್ ಅಂಟಿಸಿ, ಅದರಲ್ಲಿ, ಬಿಎಲ್‍ಒ ಭೇಟಿ ನೀಡಿದ ದಿನಾಂಕ, ಪುನಃ ಭೇಟಿ ನೀಡುವ ದಿನಾಂಕವನ್ನು ಬರೆಯುತ್ತಾರೆ. ಅಗತ್ಯವಿದ್ದಲ್ಲಿ ಬಿಎಲ್‍ಒ ಒಂದು ಮನೆಗೆ ಮೂರು ಬಾರಿ ಭೇಟಿ ನೀಡುತ್ತಾರೆ ಎಂದು ಅವರು ಮಾಹಿತಿ ನೀಡಿದರು.

ನಿಗದಿತ ಅವಧಿಯೊಳಗೆ ಗಣತಿ ನಮೂನೆಯನ್ನು ನಿಖರವಾಗಿ ಭರ್ತಿ ಮಾಡಿ ಸಲ್ಲಿಸುವ ಎಲ್ಲ ಮತದಾರರನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು. ಗಣತಿ ನಮೂನೆ ಭರ್ತಿ ಮಾಡದವರ ಹೆಸರನ್ನು ಕರಡು ಪಟ್ಟಿಯಲ್ಲಿ ಸೇರಿಸುವುದಿಲ್ಲ. ಅಲ್ಲದೆ, ಗಣತಿ ನಮೂನೆ ಸ್ವೀಕರಿಸುವಾಗ ಬಿಎಲ್‍ಒ ಯಾವುದೆ ದಾಖಲೆಯನ್ನು ಕೇಳುವುದಿಲ್ಲ. ಮತದಾರರು ತಮ್ಮ ಇತ್ತೀಚಿನ ಭಾವಚಿತ್ರ ಮಾತ್ರ ಗಣತಿ ನಮೂನೆಗೆ ಅಂಟಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು.

ಅಸಂಗತ ವಿವರಗಳಿದ್ದಲ್ಲಿ ಮಾತ್ರ ನೋಟಿಸ್: ಮತದಾರರ ಪಟ್ಟಿಯಲ್ಲಿನ ವಿವರಗಳು ಅಸಂಗತವಾಗಿದ್ದರೆ, ಅಂತಹ ಮತದಾರರನ್ನು‘Logical Discrepancny’ ಎಂದು ಪ್ರತ್ಯೇಕಿಸಲಾಗುವುದು. ಉದಾಹರಣೆಗೆ ಮತದಾರರ ಹೆಸರು, ವಯಸ್ಸು, ಅವರ ಹಾಗೂ ಪೋಷಕರ ವಯಸ್ಸಿನ ನಡುವಿನ ಅಂತರ ಕಡಿಮೆ ಇದ್ದರೆ, ಲಿಂಗ ತಪ್ಪಾಗಿ ನಮೂದಿಸಲ್ಪಟಿದ್ದರೆ ನೋಟಿಸ್ ನೀಡಿ, ದಾಖಲೆಗಳನ್ನು ಕೇಳುತ್ತೇವೆ ಎಂದು ಅವರು ಹೇಳಿದರು.

ಮತದಾರರು ಅಗತ್ಯ ದಾಖಲೆಗಳನ್ನು ಚುನಾವಣಾ ನೋಂದಣಿ ಅಧಿಕಾರಿಗೆ ಸಲ್ಲಿಸಿದರೆ ಅದನ್ನು ಪರಿಶೀಲಿಸಿ, ಸಮಪರ್ಕವಾಗಿದ್ದರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುತ್ತೇವೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.

ಸಹಾಯ ಕೇಂದ್ರಗಳ ಸ್ಥಾಪನೆ: ಗಣತಿ ನಮೂನೆಯನ್ನು ಭರ್ತಿ ಮಾಡಲು ಮತದಾರರಿಗೆ ನೆರವು ನೀಡಲು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ರಚನೆ ಮಾಡಲಾಗಿದೆ. ಅದೇ ರೀತಿ, ಬಿಎಲ್‍ಒಗಳಿಗೆ ನೆರವು ನೀಡಲು ಪ್ರತಿ ತಾಲೂಕಿನಲ್ಲಿ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ನುಡಿದರು.

ಬಿಎಲ್‍ಒಗಳಿಂದ ಎಷ್ಟು ಗಣತಿ ನಮೂನೆಗಳು ವಿತರಣೆಯಾಗಿವೆ, ಸಂಗ್ರಹಿಸಲಾಗಿದೆ, ಡಿಜಿಟಲೀಕರಣಗೊಳಿಸಲಾಗಿದೆ, ಎಷ್ಟು ಗಣತಿ ನಮೂನೆಗಳು ಸ್ವೀಕರಿಸಲಾಗಿಲ್ಲ ಎಂಬ ಮಾಹಿತಿಯನ್ನು ಪ್ರತಿದಿನ ಪತ್ರಿಕಾ ಪ್ರಕಟಣೆ ಮೂಲಕ ಹೊರಡಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.

ರಾಜ್ಯಾದ್ಯಂತ ಒಟ್ಟು 59,050 ಬಿಎಲ್‍ಒಗಳು, 31 ಜಿಲ್ಲಾ ಚುನಾವಣಾಧಿಕಾರಿಗಳು, 4 ಅಪರ ಜಿಲ್ಲಾ ಚುನಾವಣಾಧಿಕಾರಿಗಳು, 224 ಮತದಾರರ ನೋಂದಣಾಧಿಕಾರಿಗಳು, 336 ಸಹಾಯಕ ಮತದಾರರ ನೋಂದಣಾಧಿಕಾರಿಗಳು, 7,556 ಬಿಎಲ್‍ಒ ಮೇಲ್ವಿಚಾರಕರು ಸೇರಿದಂತೆ ಈ ಪರಿಷ್ಕರಣಾ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವವರಿಗೆ ತರಬೇತಿ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದರು.

ಕಾಂಗ್ರೆಸ್ ಪಕ್ಷದಿಂದ 52,419, ಬಿಜೆಪಿಯಿಂದ 48,614, ಜೆಡಿಎಸ್ ಪಕ್ಷದಿಂದ 14,020, ಆಮ್ ಆದ್ಮಿ ಪಕ್ಷ 18, ಬಿಎಸ್‍ಪಿ 36 ಹಾಗೂ ಸಿಪಿಎಂ 5 ಮಂದಿ ಸೇರಿದಂತೆ ಒಟ್ಟು 1,15,112 ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಿದ್ದು, ಈ ಪೈಕಿ ಜಿಲ್ಲಾ ಚುನಾವಣಾಧಿಕಾರಿ ಮೂಲಕ ಬಹುಪಾಲು ಮಂದಿಗೆ ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಆ.5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಆ.5 ರಿಂದ ಸೆ.4ರವರೆಗೆ ಮತದಾರರಿಂದ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು. ಅಲ್ಲದೇ, ಆ.5 ರಿಂದ ಅ.3ರವರೆಗೆ ನೋಟಿಸ್ ಹಂತ ಮತ್ತು ಹಕ್ಕುಗಳು ಹಾಗೂ ಆಕ್ಷೇಪಣೆಗಳ ವಿಲೇವಾರಿ ಮಾಡಲಾಗುವುದು. ಅ.7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಣೆ ಮಾಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.

 

‘ಕನ್ನಡದಲ್ಲಿ ಗಣತಿ ನಮೂನೆ’

ಗಣತಿ ನಮೂನೆಯು ಕನ್ನಡದಲ್ಲಿ ಮುದ್ರಿತವಾಗಿರುತ್ತದೆ. ಮತದಾರರು ಅದನ್ನು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಭರ್ತಿ ಮಾಡಿ ಸಹಿ ಮಾಡಿ ಹಿಂದಿರುಗಿಸಿದ ನಂತರ, ಬಿಎಲ್‍ಒಗಳು ಗಣತಿ ನಮೂನೆಯಲ್ಲಿನ ಮಾಹಿತಿಯನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ‘ಬಿಎಲ್‍ಒ ಮೊಬೈಲ್ ಆ್ಯಪ್’ ಮೂಲಕ ಮತದಾರರ ಪಟ್ಟಿ ನಿರ್ವಹಣಾ ವ್ಯವಸ್ಥೆ(ಇಆರ್‌ಎಂಎಸ್)ಯಲ್ಲಿ ಮತದಾರರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುತ್ತಾರೆ.

-ವಿ.ಅನ್ಬುಕುಮಾರ್, ಮುಖ್ಯ ಚುನಾವಣಾಧಿಕಾರಿ

 

ಆನ್‍ಲೈನ್ ಮೂಲಕವು ಗಣತಿ ನಮೂನೆ ಭರ್ತಿ

ಗಣತಿ ನಮೂನೆಗಳನ್ನು ಭರ್ತಿ ಮಾಡುವ ಸೌಲಭ್ಯವು https://voters.eci.gov.in/  ಮತ್ತು ECINET ಮೊಬೈಲ್ ಅಪ್ಲಿಕೇಶನ್‍ನಲ್ಲಿ ಜೂ.30ರಿಂದ ಲಭ್ಯವಿರುತ್ತದೆ. ಪ್ರಸಕ್ತ ಸಾಲಿನ ಅಕ್ಟೋಬರ್ 1ಕ್ಕೆ ಅನ್ವಯವಾಗುವಂತೆ 18 ವರ್ಷ ತುಂಬುವವರು ಅರ್ಜಿ ನಮೂನೆ ಸಂಖ್ಯೆ 6ರನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಪ್ರತಿ ಬಿಎಲ್‍ಒ ಬಳಿ 30 ಅರ್ಜಿ ನಮೂನೆ ಸಂಖ್ಯೆ 6 ಅನ್ನು ನೀಡುತ್ತೇವೆ.

ರಾಜ್ಯಾದ್ಯಂತ ಶೇ.91.61ರಷ್ಟು ಮ್ಯಾಪಿಂಗ್ ಪೂರ್ಣ: ರಾಜ್ಯಾದ್ಯಂತ 5,54,32,314 ಮತದಾರರಿದ್ದು, 5,07,79,810 ಮತದಾರರನ್ನು ಮ್ಯಾಪಿಂಗ್ ಮಾಡಲಾಗಿದೆ. ಇನ್ನೂ 46,52,504 ಮತದಾರರ ಮ್ಯಾಪಿಂಗ್ ಬಾಕಿಯಿದೆ. ಜೂ.29ರ ಬೆಳಗ್ಗೆ 8 ಗಂಟೆ ವೇಳೆಗೆ ಶೇ.91.61ರಷ್ಟು ಮ್ಯಾಪಿಂಗ್ ಪೂರ್ಣಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News