ಆರ್ಥಿಕವಾಗಿ ಸ್ವಾವಲಂಬಿಯಾಗಿರುವ, ಪತಿಗಿಂತ ಹೆಚ್ಚು ಆದಾಯವಿರುವ ಪತ್ನಿಗೆ ಜೀವನಾಂಶ ನೀಡಬೇಕಿಲ್ಲ : ಹೈಕೋರ್ಟ್
ಬೆಂಗಳೂರು : ಪತಿಗಿಂತ ಹೆಚ್ಚು ದುಡಿಯುವ, ಆರ್ಥಿಕವಾಗಿ ಸಬಲಳಾಗಿರುವ ಪತ್ನಿಗೆ ಜೀವನಾಂಶ ನೀಡುವ ಅವಶ್ಯಕತೆ ಇಲ್ಲ ಎಂದು ಮಹತ್ವದ ಆದೇಶ ನೀಡಿರುವ ಹೈಕೋರ್ಟ್, ಪತ್ನಿಗೆ ಮಾಸಿಕ 20 ಸಾವಿರ ರೂ. ಮಧ್ಯಂತರ ಜೀವನಾಂಶ ನೀಡುವಂತೆ ಪತಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿದೆ.
ಪತ್ನಿಗೆ ಮಧ್ಯಂತರ ಜೀವನಾಂಶ ನೀಡುವಂತೆ 2025ರ ಡಿಸೆಂಬರ್ 19ರಂದು ಮೈಸೂರಿನ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ಮಾನ್ಯ ಮಾಡಿರುವ ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?
ಮಹಿಳೆಯರಿಗೆ ಪುರುಷರು ಜೀವನಾಂಶ ನೀಡಬೇಕೆಂಬ ಕೇವಲ ಲಿಂಗ ಆಧಾರಿತ ಊಹೆಗಳ ಮೇಲೆ ನ್ಯಾಯಾಲಯಗಳು ಜೀವನಾಂಶ ನೀಡಲು ಒಲವು ತೋರಬಾರದು. ವಿಶೇಷವಾಗಿ ಮಹಿಳೆಗೆ ಅಂತಹ ಆರ್ಥಿಕ ನೆರವು ಅಗತ್ಯವಿಲ್ಲದಿದ್ದಾಗ ನ್ಯಾಯಾಲಯಗಳು ಪರಿಸ್ಥಿತಿಗಳನ್ನು ಅವಲೋಕಿಸಿ ಜೀವನಾಂಶದ ಆದೇಶಗಳನ್ನು ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಪತ್ನಿ ಆರ್ಥಿಕವಾಗಿ ಸದೃಢಳಾಗಿದ್ದಾಗ ಹಾಗೂ ಹೆಂಡತಿಯ ಆದಾಯವು ಗಂಡನ ಆದಾಯಕ್ಕಿಂತ ಹೆಚ್ಚಿದ್ದಾಗ ಮತ್ತು ಮಕ್ಕಳನ್ನು ನೋಡಿಕೊಳ್ಳುವಂತಹ ಯಾವುದೇ ಇತರ ಹೊಣೆಗಾರಿಕೆಗಳು ಹೆಂಡತಿಯ ಕಡೆಯಿಂದ ಕಂಡುಬರದಿದ್ದರೆ, ಮಹಿಳೆಯರನ್ನು ಪುರುಷರು ನಿರ್ವಹಣೆ ಮಾಡಬೇಕು ಅಥವಾ ಹೆಂಡತಿಯನ್ನು ಆಕೆಯ ಗಂಡನೇ ನಿರ್ವಹಣೆ ಮಾಡಬೇಕು ಎಂಬ ಆಧಾರದ ಮೇಲೆ ನ್ಯಾಯಾಲಯಗಳು ಜೀವನಾಂಶ ನೀಡುವ ಆದೇಶ ಹೊರಡಿಸಬಾರದು ಎಂದು ಹೈಕೋರ್ಟ್ ಹೇಳಿದೆ.
ಪತ್ನಿಯರನ್ನು ಸದಾ ಗಂಡಂದಿರೇ ನಿರ್ವಹಣೆ ಮಾಡಬೇಕು ಎಂಬ ಲಿಂಗ ಆಧಾರಿತ ಕಲ್ಪನೆಗಳಿಂದ ಕೌಟುಂಬಿಕ ನ್ಯಾಯಾಲಯಗಳು ಪ್ರಭಾವಕ್ಕೆ ಒಳಗಾಗಬಾರದು ಎಂದು ಎಚ್ಚರಿಸಿರುವ ನ್ಯಾಯಾಲಯ, ಪತ್ನಿಗೆ ತನ್ನ ಗಂಡನಿಂದ ಜೀವನಾಂಶ ಪಡೆಯುವುದನ್ನು ಬಿಟ್ಟು, ತನ್ನನ್ನು ತಾನು ನಿರ್ವಹಿಸಲು ಯಾವುದೇ ಆರ್ಥಿಕ ಮೂಲಗಳು ಇಲ್ಲ ಎಂದು ತೋರಿಸಿದಾಗ ಮಾತ್ರ ನ್ಯಾಯಾಲಯಗಳು ಮಧ್ಯಂತರ ಅಥವಾ ಅಂತಿಮ ಜೀವನಾಂಶವನ್ನು ನೀಡುವ ಅಗತ್ಯವಿದೆ ಎಂದು ಹೇಳಿದೆ.
ಹಾಲಿ ಪ್ರಕರಣದಲ್ಲಿ ಪತ್ನಿಯ ಆದಾಯವು ಪತಿಯ ಆದಾಯಕ್ಕಿಂತ ಹೆಚ್ಚಾಗಿರುತ್ತದೆ. ಪತ್ನಿಯೇ ಒಪ್ಪಿಕೊಂಡಂತೆ ಆಕೆಯ ಮಾಸಿಕ ಆದಾಯ 1 ಲಕ್ಷ ರೂ. ಗಳಿಗೂ ಅಧಿಕವಾಗಿದೆ. ಆ ಆದಾಯದಿಂದ ಆಕೆ ತನ್ನನ್ನು ತಾನು ನಿರ್ವಹಿಸಿಕೊಳ್ಳಬಹುದಾಗಿದೆ. ಆದ್ದರಿಂದ, ಪತಿಯು ತನ್ನ ಮಾಸಿಕ ಗಳಿಕೆ 60 ಸಾವಿರ ರೂ.ಗಳಲ್ಲಿ ಪತ್ನಿಗೆ 20 ಸಾವಿರ ರೂ. ಜೀವನಾಂಶ ಪಾವತಿಸುವಂತೆ ವಿಚಾರಣಾ ನ್ಯಾಯಾಲಯ ಆದೇಶಿಸುವ ಅಗತ್ಯವಿಲ್ಲ. ಅದು ಕಾನೂನಿನ ದೃಷ್ಟಿಯಲ್ಲಿ ಸಮರ್ಥನೀಯವೂ ಅಲ್ಲ ಎಂದು ಆದೇಶಿಸಿದೆ.
ಇದೇ ವೇಳೆ, ಈ ಆದೇಶ ಮಧ್ಯಂತರ ನಿರ್ವಹಣಾ ಆದೇಶಕ್ಕೆ ಮಾತ್ರ ಸಂಬಂಧಿಸಿದೆ ಮತ್ತು ಉಳಿದಂತೆ ಜೀವನಾಂಶದ ಈ ಆದೇಶವು ಪ್ರಕರಣದ ಅಂತಿಮ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ:
2024ರಲ್ಲಿ ವಿವಾಹವಾಗಿದ್ದ ದಂಪತಿ, ಭಿನ್ನಾಭಿಪ್ರಾಯಗಳಿಂದಾಗಿ ಕೆಲವೇ ತಿಂಗಳಲ್ಲೇ ಪ್ರತ್ಯೇಕವಾಗಿ ನೆಲೆಸಿದ್ದರು. ಪತಿ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ ಮೈಸೂರಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿ, ಮಾಸಿಕ 1,13,000 ರೂ. ಮಧ್ಯಂತರ ಜೀವನಾಂಶ ಹಾಗೂ ವ್ಯಾಜ್ಯದ ವೆಚ್ಚವಾಗಿ 50 ಸಾವಿರ ರೂ. ಪಾವತಿಸಲು ಪತಿಗೆ ಆದೇಶಿಸುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಪತ್ನಿಗೆ ಮಾಸಿಕ 20 ಸಾವಿರ ರೂ. ಪಾವತಿಸುವಂತೆ ಪತಿಗೆ ನಿರ್ದೇಶಿಸಿತ್ತು.
ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ವಾದ ಮಂಡಿಸಿದ್ದ ಪತಿಯ ಪರ ವಕೀಲರು, ಪತ್ನಿಯ ಮಾಸಿಕ ಆದಾಯ 1 ಲಕ್ಷ ರೂ.ಗಳಿಗೂ ಅಧಿಕವಿದ್ದು, ಟಿಡಿಎಸ್ ದಾಖಲೆಗಳ ಪ್ರಕಾರ ಆಕೆಯ ಮಾಸಿಕ ಆದಾಯ 1,64,285 ರೂ. ಇದೆ. ದಂಪತಿಗೆ ಯಾವುದೇ ಮಕ್ಕಳಿಲ್ಲ. ಪತ್ನಿಗೆ ತನ್ನ ಜೀವನ ನಿರ್ವಹಣೆ ಹೊರತುಪಡಿಸಿದರೆ ಬೇರಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆ ಇಲ್ಲ. ಆದರೆ, ಪತಿಯ ಮಾಸಿಕ ಆದಾಯ ಕೇವಲ 57 ಸಾವಿರ ರೂ. ಆಸುಪಾಸಿನಲ್ಲಿದೆ. ಈ ಯಾವ ಅಂಶಗಳನ್ನೂ ಪರಿಗಣಿಸದೆಯೇ ವಿಚಾರಣಾ ನ್ಯಾಯಾಲಯ ಪತ್ನಿಗೆ ಮಾಸಿಕ 20 ಸಾವಿರ ರೂ. ಮಧ್ಯಂತರ ಜೀವನಾಂಶ ಪಾವತಿಸುವಂತೆ ಪತಿಗೆ ಆದೇಶಿಸಿದ್ದು, ಈ ಆದೇಶ ರದ್ದುಪಡಿಸಬೇಕೆಂದು ಕೋರಿದ್ದರು.