ಬೆಂಗಳೂರು : ಕರಾವಳಿ ಭಾಗದಲ್ಲಿ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಸುವ ಸಲುವಾಗಿ ಪ್ರವಾಸೋದ್ಯಮ ನೀತಿ ಅಡಿಯಲ್ಲಿ ಶೀಘ್ರದಲ್ಲಿಯೇ ರಾಜ್ಯ ಸರಕಾರ, ಮಂಗಳೂರಿನಲ್ಲಿ ಉದ್ಯಮಿಗಳೊಂದಿಗೆ ಬೃಹತ್ ಸಭೆ ನಡೆಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರವಿವಾರ ಬೆಂಗಳೂರಿನ ಉಳ್ಳಾಲದಲ್ಲಿರುವ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕೈಲ್ ಮುಹೂರ್ತ ಜಂಬರ-2026’ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿಗೆ ಕರಾವಳಿ ಭಾಗದಲ್ಲಿ ಮೊದಲ ಬಾರಿ ಸಂಪುಟ ಸಭೆಯನ್ನು ಮಾಡಿ ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಸ್ಥಾನಮಾನ ಸೇರಿದಂತೆ ಹಲವು ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿತ್ತು. ಈಗ ನಾನು ಮತ್ತೆ ಮಂಗಳೂರಿಗೆ ಹೋಗಿ, ಎಲ್ಲ ಉದ್ಯಮಿಗಳ ಜತೆ ಚರ್ಚೆ ಮಾಡುತ್ತೇವೆ ಎಂದರು.

ಈ ಉದ್ಯಮಿಗಳ ಸಭೆಯಲ್ಲಿ ಮಲೆನಾಡು ಭಾಗದವರಿಗೂ ಆಹ್ವಾನ ನೀಡುತ್ತೇನೆ. ಹೊರಗಿನವರು ಇಲ್ಲಿ ಬಂದು ಉದ್ಯಮ ಆರಂಭಿಸುವುದಕ್ಕಿಂತ, ನೀವೇ ಉದ್ಯಮ ಆರಂಭಿಸಿ, ಆಸ್ತಿಯನ್ನಾಗಿ ಮಾಡಿ. ಇದಕ್ಕೆ ಶಕ್ತಿ ತುಂಬುವ ಪ್ರಯತ್ನ ಸರಕಾರ ಮಾಡಲಿದೆ. ಒಟ್ಟಿನಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಉದ್ಯೋಗಿ ಸೃಷ್ಟಿಯಾಗಬೇಕು ಎಂದು ಅವರು ಹೇಳಿದರು.

ಆಂಧ್ರಪ್ರದೇಶದ ತಿರುಪತಿ ದೇವಾಲಯ ಟ್ರಸ್ಟ್ ನಮಗೆ ಜಾಗ ಕೊಡಿ ಒಳ್ಳೆಯ ದೇವಾಲಯ ನಿರ್ಮಿಸುತ್ತೇವೆ ಎಂದಿದ್ದರು. ಅದಕ್ಕಾಗಿ ಮಂಗಳೂರಿನಲ್ಲಿ 10 ಎಕರೆ ಜಾಗವನ್ನು ಟಿಟಿಡಿ ಮಂಡಳಿಯವರಿಗೆ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಸದ್ಯ ಕರಾವಳಿ, ಮಲೆನಾಡು ಭಾಗದಲ್ಲಿ ಕುಕ್ಕೆ ಸುಬ್ರಮಣ್ಯ, ಕೊಲ್ಲೂರು ಮೂಕಾಂಬಿಕಾ, ಕಟೀಲು, ಧರ್ಮಸ್ಥಳ ದೇವಾಲಯಗಳಿವೆ. ಅವುಗಳ ಜತೆಗೆ ತಿರುಪತಿಗೆ ತೆರಳಲು ಆಗದವರು ವೆಂಕಟರಮಣ ದೇವಾಲಯಕ್ಕೆ ಹೋಗಲು ಅನುಕೂಲವಾಗಲಿ ಎಂದು ಮಂಗಳೂರಿನಲ್ಲಿ ಭೂಮಿ ನೀಡಲು ತೀರ್ಮಾನ ಮಾಡಲಾಗಿದೆ ಎಂದು ಅವರು ಹೇಳಿದರು.

ತುಳು ಭಾಷೆ ಬಗ್ಗೆ ನಮ್ಮ ತೀರ್ಮಾನವನ್ನು ವಿಶ್ವದಲ್ಲೇ ಚರ್ಚೆಯಾಗಿದೆ. ಅದು ಸ್ವಾಭಿಮಾನದ ಸಂಕೇತ. ಕರಾವಳಿ ಹಾಗೂ ಮಲೆನಾಡು ಸೇರಿ ವಿಶೇಷ ಪ್ರವಾಸೋದ್ಯಮ ನೀತಿ ರೂಪಿಸಿದ್ದೇವೆ. ಈ ಭಾಗದ ಜನ ಉದ್ಯೋಗಕ್ಕೆ ಹೊರಗೆ ಹೋಗುವುದಕ್ಕಿಂತ ನಿಮ್ಮ ಊರಿನಲ್ಲೇ ಮನೆ ಬಾಗಿಲಲ್ಲಿ ಉದ್ಯಮ ಕಟ್ಟಿಕೊಳ್ಳಲು ಅನುಕೂಲವಾಗಬೇಕು. ನೀವು ಉದ್ಯೋಗಿಗಳಾಗುವುದಕ್ಕಿಂತ, ಉದ್ಯಮಿಗಳಾಗಬೇಕು ಎಂದು ಈ ತೀರ್ಮಾನಕ್ಕೆ ಬಂದಿದ್ದೇವೆ. ನಿಮ್ಮ ಕಾಫಿ, ಮಸಾಲೆ ಪ್ರದಾರ್ಥ, ಸಂಸ್ಕೃತಿ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಇದನ್ನು ಉಳಿಸಲು ಈ ಪ್ರವಾಸೋದ್ಯಮ ನೀತಿಯಲ್ಲಿ ಈ ಭಾಗದಲ್ಲಿ ಮೂಲಸೌಕರ್ಯ ನೀತಿ ಮಾಡಿದ್ದು, ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಉದ್ಯಮ ಆರಂಭಿಸಿದರೆ, ಬ್ಯಾಂಕ್ ಗಳಲ್ಲಿ ನೀಡುವ 5-6 ವರ್ಷಗಳ ಸಾಲವನ್ನು, 20 ವರ್ಷಗಳ ವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ. ಉದ್ಯಮ ಆರಂಭಿಸುವರಿಗೆ ಆರ್ಥಿಕ ಶಕ್ತಿ ನೀಡಬೇಕು ಎಂದು ಅವರು ವಿವರಿಸಿದರು.

ಉದ್ಯೋಗ ಸೃಷ್ಟಿಗೆ ಪ್ರವಾಸೋದ್ಯಮ ನೀತಿ: ಕರಾವಳಿ ಹಾಗೂ ಮಲೆನಾಡಿನ ಜನರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗುವುದಕ್ಕಿಂತ, ನಿಮ್ಮಲ್ಲಿರುವ ಪ್ರಾಕೃತಿಕ ಸಂಪತ್ತನ್ನು ಬಳಸಿಕೊಂಡು ನಿಮ್ಮ ಊರುಗಳಲ್ಲೇ ಉದ್ಯಮಗಳನ್ನು ಆರಂಭಿಸಿ. ನಿಮಗೆ ಶಕ್ತಿ ತುಂಬುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮ ನೀತಿ ರೂಪಿಸಿದೆ ಎಂದು ಡಿ.ಕೆ.ಶಿವಕುಮಾರ್ ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor