ಸಾಂದರ್ಭಿಕ ಚಿತ್ರ | Photo credit : PTI

ಚಿಕ್ಕಮಗಳೂರು : ಕೊಪ್ಪ ತಾಲ್ಲೂಕಿನಲ್ಲಿ ಮತದಾರರ ಪಟ್ಟಿಯಿಂದ 243 ಮತದಾರರ ಹೆಸರನ್ನು ಡಿಲೀಟ್ ಮಾಡುವಂತೆ ʼನಮೂನೆ 7ʼ ರ ಮೂಲಕ ಅರ್ಜಿ ಸಲ್ಲಿಸಿದ್ದ ಬಿಜೆಪಿ ಮುಖಂಡನೋರ್ವ ಇದೀಗ ಅರ್ಜಿಯನ್ನು ವಾಪಾಸ್ಸು ಪಡೆದಿದ್ದಾರೆ.

ಬಿಜೆಪಿ ಮುಖಂಡ ದಿನೇಶ್ ಎಂಬವರು ಕೊಪ್ಪ ತಾಲ್ಲೂಕಿನಲ್ಲಿ 243 ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆಯುವಂತೆ ಸೆ.21ರಂದು ಮತ್ತು ಸೆ.22ರಂದು ಆಕ್ಷೇಪಣೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಇದೀಗ 243 ಮತದಾರರು ಆ ಮತಗಟ್ಟೆಯಲ್ಲೇ ಇದ್ದು, ನಾನು ಈ ಹಿಂದೆ ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಹಿಂಪಡೆಯುತ್ತಿದ್ದೇನೆ ಎಂದು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಆಗಿರುವ ಕೊಪ್ಪ ತಾಲೂಕಿನ ತಹಶೀಲ್ದಾರ್ ಅವರಿಗೆ ಪತ್ರವನ್ನು ಬರೆದಿದ್ದಾರೆ.

ಈ ಕುರಿತು ತಾಲೂಕು ಪಾಂಚಾಯತ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಅಂಕುಶ್ ಅವರನ್ನು ಸಂಪರ್ಕಿಸಿದಾಗ, ದಿನೇಶ್ ಅವರು ಫಾರಂ 7 ರ ಮೂಲಕ ಆಕ್ಷೇಪಣೆ ಅರ್ಜಿಯನ್ನು ಸಲ್ಲಿಸಿರುವುದು ನಿಜ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಕುರಿತು ಪರಿಶೀಲಿಸಿ ಮೇಲಾಧಿಕಾರಿಗಳು ಕಾನೂನು ನಿಯಮಗಳ ಪ್ರಕಾರ ಕ್ರಮವನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಈ ಮೊದಲು ಕೂಡ ಅವರು ಆಕ್ಷೇಪಣೆ ಅರ್ಜಿಯನ್ನು ಸಲ್ಲಿಸಿದ್ದಾರಾ? ಎಷ್ಟು ಮಂದಿ ವಿರುದ್ಧ ಸಲ್ಲಿಸಿದ್ದಾರೆ ಎಂಬ ಬಗ್ಗೆ ಪರಿಶೀಲನೆ ಬಳಿಕ ತಿಳಿಯಲಿದೆ ಎಂದು ಅಂಕುಶ್ ಅವರು ತಿಳಿಸಿದ್ದಾರೆ.

ಈ ಮೊದಲು ಬೀದರ್‌ನ ಬಾಲ್ಕಿ, ವಿಜಯಪುರದ ಬಬಲೇಶ್ವರ, ಬೆಳಗಾವಿ, ಮಡಿಕೇರಿಯ ಬ್ಯಾಡಗೊಟ್ಟ ಬೂತ್‌ನಲ್ಲಿ ಫಾರಂ-7 ದುರ್ಬಳಕೆ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಕೊಪ್ಪದಲ್ಲಿ ಬಿಜೆಪಿ ಮುಖಂಡ ದಿನೇಶ್‌ ಫಾರಂ-7 ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ವಾಪಾಸ್ಸು ಪಡೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor