×
Ad

ರಾಜಕೀಯದಲ್ಲಿ ಅಧಿಕಾರ, ತಾಳ್ಮೆ ಎರಡೂ ಶಾಶ್ವತವಲ್ಲ : ಡಿ.ಕೆ.ಸುರೇಶ್

"ಹುದ್ದೆ ಸುಲಭವಾಗಿ ಸಿಗುವಂಥದ್ದಲ್ಲ, ಹಣೆಯಲ್ಲಿ ಬರೆದಿದ್ದರೆ ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ"

Update: 2026-01-20 18:02 IST

ಬೆಂಗಳೂರು : “ರಾಜಕಾರಣದಲ್ಲಿ ಇದ್ದ ಮೇಲೆ, ಯಾವುದೂ ಶಾಶ್ವತವಲ್ಲ. ಅಧಿಕಾರ, ತಾಳ್ಮೆ ಎರಡೂ ಶಾಶ್ವತವಲ್ಲ” ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಅವರು ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಅಧಿಕಾರ ಹಂಚಿಕೆ ವಿಚಾರವಾಗಿ ನೀವು ಎರಡು ವರ್ಷದಿಂದ ಕಾಯುತ್ತಿದ್ದೀರಿ ಎಂದಾಗ, “ಭಗವಂತನ ಇಚ್ಛೆ, ಏನೇನು ತೀರ್ಮಾನವಾಗುತ್ತದೋ ಕಾದು ನೋಡೋಣ, ಎಲ್ಲದಕ್ಕೂ ಅಂತ್ಯ ಇದ್ದೇ ಇರುತ್ತದೆ” ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಸಂಕ್ರಾಂತಿ ಸಂಭ್ರಮ ಮುಂದಕ್ಕೆ ಹೋಗಿದೆ ಎಂದು ಕೇಳಿದಾಗ, “ಪಕ್ಷ ತಾಳ್ಮೆಯಿಂದ ಇರಲು ಹೇಳಿದೆ. ರಾಹುಲ್ ಗಾಂಧಿ ಅವರು ಮೈಸೂರಿನಲ್ಲಿ ಭೇಟಿ ಮಾಡಿದಾಗ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಶಿವಕುಮಾರ್ ಮೊದಲಿನಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಗುರಿಯೊಂದಿಗೆ ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದಾರೆ” ಎಂದರು.

ಹಣೆಯಲ್ಲಿ ಬರೆದಿದ್ದರೆ ನಮ್ಮ ಅಣ್ಣ ಸಿಎಂ ಆಗುತ್ತಾರೆ :

ತಾಳ್ಮೆಗೆ ಅಂತಿಮ ಗಡುವು ಇದೆಯೇ ಎಂದು ಕೇಳಿದಾಗ, “ಅಧಿಕಾರ ಯಾರಿಗೂ ಸುಲಭವಾಗಿ ಬರುವುದಿಲ್ಲ. ನಮ್ಮ ಅಣ್ಣನ ಹಣೆಯಲ್ಲಿ ಬರೆದಿದ್ದರೆ ಅವರು ಸಿಎಂ ಆಗುತ್ತಾರೆ. ಈ ಮೊದಲು ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ. ಮುಖ್ಯಮಂತ್ರಿ ಹುದ್ದೆ ಸುಲಭವಾಗಿ ಸಿಗುವಂಥದ್ದಲ್ಲ. ಎಲ್ಲರೂ ಸೇರಿ ಇದರಲ್ಲಿ ಭಾಗಿಯಾಗಬೇಕು. ನಮ್ಮ ಗುರಿ 2028 ರ ಚುನಾವಣೆ. ಈ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಬೇಕು. ಈ ದೃಷ್ಟಿಯಿಂದ ಶಾಸಕರು, ಕಾರ್ಯಕರ್ತರ ಹಿತದೃಷ್ಟಿಯಿಂದ ತಾಳ್ಮೆಯಿಂದಲೇ ಇರಬೇಕಾಗುತ್ತದೆ, ತಾಳ್ಮೆಯಿಂದಲೇ ನೋಡಬೇಕು. ಅವರು ಪಕ್ಷದ ಅಧ್ಯಕ್ಷರಾಗಿದ್ದು, ಮೊದಲು ಅವರಲ್ಲಿ ಶಿಸ್ತು ಕಾಣಬೇಕು? ಹಾಗಾಗಿ ಅವರು ಶಿಸ್ತು ಪಾಲಿಸುತ್ತಿದ್ದಾರೆ” ಎಂದು ತಿಳಿಸಿದರು.

ಜಾತಿ ಮೇಲೆ ನಡೆಯುವ ರಾಜಕಾರಣ ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಮಾರಕ :

ನಾಯಕತ್ವ ಬದಲಾವಣೆಯಾದರೆ ಒಂದು ವರ್ಗದ ಮತ ಕಾಂಗ್ರೆಸ್ ಪಕ್ಷಕ್ಕೆ ಬರಲ್ಲ ಎಂದು ಬಿಂಬಿಸುತ್ತಿರುವ ಬಗ್ಗೆ ಕೇಳಿದಾಗ, “ಆ ವರ್ಗ, ಈ ವರ್ಗ ಎಂಬುದಿಲ್ಲ. ಎಲ್ಲಾ ವರ್ಗದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬೇಕು. ರಾಜಕಾರಣಿಗೆ ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟರ ಮತಗಳು ಬೇಕು. ಕೇವಲ ಒಬ್ಬರನ್ನು ಓಲೈಸಿಕೊಳ್ಳುವುದಲ್ಲ. ಎಲ್ಲರ ಮತಗಳು ಮುಖ್ಯವಾಗುತ್ತದೆ. ಜಾತಿ ಮೇಲೆ ನಡೆಯುವ ರಾಜಕಾರಣ ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿ ಕುಂಠಿತ ಮಾಡಲಿದೆ. ಶಿವಕುಮಾರ್ ಅವರು ಪಕ್ಷಕ್ಕೆ ನಿಷ್ಠರಾಗಿದ್ದಾರೆಯೇ ಹೊರತು, ವ್ಯಕ್ತಿಗೆ ಅಲ್ಲ. ಕೆಲವರು ವ್ಯಕ್ತಿಗೆ ನಿಷ್ಠರಾಗಿದ್ದಾರೆ. ಅವರು ಅಧಿಕಾರಕ್ಕಾಗಿಯೇ ಇರುತ್ತಾರೆ. ಡಿ.ಕೆ. ಶಿವಕುಮಾರ್ ಅವರು ಮೊದಲಿನಿಂದ ಪಕ್ಷ ಅಧಿಕಾರದಲ್ಲಿ ಇದ್ದಾಗ, ಇಲ್ಲದಿದ್ದಾಗ ಎಲ್ಲಾ ತರಹದ ನೋವು, ಕಷ್ಟಗಳನ್ನು ಪಕ್ಷದೊಂದಿಗೆ ಹಂಚಿಕೊಂಡಿದ್ದಾರೆ. ಹೀಗಾಗಿ ಎಲ್ಲವನ್ನೂ ತಾಳ್ಮೆಯಿಂದ ನೋಡುತ್ತಿದ್ದಾರೆ” ಎಂದು ತಿಳಿಸಿದರು.

ಸ್ಥಾನ ಬಿಡಲು ಬಯಸುವುದಿಲ್ಲ :

“ಪಂಚಾಯಿತಿ ಚೇರ್ಮನ್ ಗಳೇ ತಮ್ಮ ಸ್ಥಾನ ಬಿಡಲು ಬಯಸುವುದಿಲ್ಲ. ಮದುವೆಯಾಗಲಿ, ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಳ್ಳುತ್ತೇನೆ, ಮಾರ್ಚ್ ಅಂತ್ಯ ಮುಗಿಯಲಿ - ಎಂದೆಲ್ಲಾ ನೆಪ ಹೇಳಿ ಮುಂದಕ್ಕೆ ಹಾಕುತ್ತಾರೆ. ಅಧ್ಯಕ್ಷ ಸ್ಥಾನ ಕೊಡುವಾಗ ನನಗೆ ಮೂರು ದಿನ ಅಧಿಕಾರ ಸಾಕು, ಮಾಜಿ ಎಂದು ಕರೆಸಿಕೊಳ್ಳುತ್ತೇನೆ ಸಾಕು ಎನ್ನುತ್ತಾರೆ. ಈ ರೀತಿ ಇದ್ದಾಗ ಏನು ಮಾಡಲು ಆಗುತ್ತೆ. ರಾಜಕಾರಣದಲ್ಲಿ ನಂಬಿಕೆ ಬಹಳ ಮುಖ್ಯವಾಗುತ್ತದೆ. ಶಿವಕುಮಾರ್ ಅವರು ಬಹಳ ಚಿಕ್ಕ ವಯಸ್ಸಿನಿಂದ ಇದೆಲ್ಲವನ್ನು ನೋಡಿಕೊಂಡು ಬಂದಿದ್ದಾರೆ” ಎಂದು ಹೇಳಿದರು.

ಮಾತು ಕೊಟ್ಟಿದ್ದೀರಿ ಅಧಿಕಾರ ಬಿಟ್ಟುಕೊಡಿ ಎಂದು ಹೇಳುವುದು ಬಹಳ ಕಷ್ಟ :

ಮಾರ್ಚ್ ಅಂತ್ಯಕ್ಕೆ ಆಗಬಹುದೇ ಎಂದು ಕೇಳಿದಾಗ, “ನಾನು ಸಿಎಂ ವಿಚಾರವಾಗಿ ಹೇಳಿಲ್ಲ, ಹಳ್ಳಿಗಳಲ್ಲಿ ಹೇಳುವ ನೆಪವನ್ನು ಹೇಳಿದ್ದೇನೆ. ನಾನು ಅಧಿಕಾರ ಹಂಚಿಕೆ ವಿಚಾರವಾಗಿ ಈ ಮಾತು ಹೇಳಿಲ್ಲ. ನೀವುಗಳೇ ಇದನ್ನು ಹೇಳುತ್ತಿದ್ದೀರಿ. ನಮ್ಮ ಊರಿನಲ್ಲಿ ನಡೆಯುವ ಪ್ರಕ್ರಿಯೆ ಬಗ್ಗೆ ಹೇಳಿದೆ ಅಷ್ಟೇ. ಮಾತು ಕೊಟ್ಟಿದ್ದೀರಿ ಅಧಿಕಾರ ಬಿಟ್ಟುಕೊಡಿ ಎಂದು ಹೇಳುವುದು ಬಹಳ ಕಷ್ಟ” ಎಂದು ಸ್ಪಷ್ಟಪಡಿಸಿದರು.

29ರಂದು ಸಿಎಂ ಹಾಗೂ ಡಿಸಿಎಂ ಅವರನ್ನು ದೆಹಲಿಗೆ ಕರೆದಿದ್ದಾರಾ ಎಂದು ಕೇಳಿದಾಗ, “31ರವರೆಗೂ ವಿಶೇಷ ಅಧಿವೇಶನವಿದೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ನಾಲ್ಕು ದಿನ ಅವಕಾಶ ನೀಡಿದ್ದು, ಕೊನೆಯ ಮೂರು ದಿನ ಮನರೇಗಾ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಲಾಗಿದೆ. ಇದು ಮುಗಿದ ನಂತರ ಇತರೆ ವಿಚಾರ. ಬಜೆಟ್ ತಯಾರಿ ಬೇರೆ ನಡೆಯುತ್ತಿದೆ” ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News