×
Ad

ರಾಸಲೀಲೆ ವಿಡಿಯೋ ಪ್ರಕರಣ: ಏಳು ದಿನದಲ್ಲಿ ವರದಿ ಸಲ್ಲಿಸುವಂತೆ ಸರಕಾರಕ್ಕೆ ಮಹಿಳಾ ಆಯೋಗ ಪತ್ರ

Update: 2026-01-20 19:34 IST

ಕೆ.ರಾಮಚಂದ್ರರಾವ್

ಬೆಂಗಳೂರು : ಡಿಜಿಪಿ ಕೆ.ರಾಮಚಂದ್ರರಾವ್ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ಹಾಗೂ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಪಾರದರ್ಶಕ ತನಿಖೆಗೆ ಆದೇಶಿಸಿ, ಕೈಗೊಂಡ ಕ್ರಮಗಳ ಕುರಿತು ಏಳು ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ರಾಜ್ಯ ಮಹಿಳಾ ಆಯೋಗವು ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದೆ.

ಈ ಬಗ್ಗೆ ಮಂಗಳವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಪತ್ರವನ್ನು ಬರೆದಿದ್ದು, ಹಿರಿಯ ಐಪಿಎಸ್ ಅಧಿಕಾರಿ ಡಾ.ಕೆ.ರಾಮಚಂದ್ರರಾವ್ ಅವರು ತಮ್ಮ ಕಚೇರಿಯಲ್ಲಿ ಸಮವಸ್ತ್ರಧಾರಿಗಳಾಗಿದ್ದ ಸಂದರ್ಭದಲ್ಲಿಯೇ ಮಹಿಳೆಯರೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿರುವ ವಿಚಾರ ತಿಳಿದು ಬಂದಿದೆ. ರಾಜ್ಯದ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ದೃಶ್ಯಾವಳಿಗಳನ್ನು ಗಮನಿಸಿ ಆಯೋಗವು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುತ್ತದೆ ಎಂದು ತಿಳಿಸಿದ್ದಾರೆ.

ಮಹಿಳೆಯರಿಗೆ ರಕ್ಷಣೆಗೆ ನೀಡಬೇಕಾದ, ಉನ್ನತ ಹುದ್ದೆಯಲ್ಲಿರುವ ಪೊಲೀಸ್ ಅಧಿಕಾರಿಯೇ ಈ ರೀತಿಯ ಅಸಭ್ಯ ವರ್ತನೆಯಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿ. ಇದು ರಾಜ್ಯದ ಮಹಿಳೆಯರಲ್ಲಿ ಕೆಟ್ಟ ಭಾವನೆಯನ್ನು ಮೂಡಿಸುತ್ತದೆ. ಇದು ನಾಗರಿಕ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ ಎಂದು ಡಾ.ನಾಗಲಕ್ಷ್ಮೀ ಚೌಧರಿ ಪತ್ರದಲ್ಲಿ ಹೇಳಿದ್ದಾರೆ.

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ(ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-2013 ರಂತೆಯೂ ಅರ್ಹ ಪ್ರಕರಣವಾಗಿರುತ್ತದೆ. ಆದ್ದರಿಂದ ಈ ಪತ್ರ ತಲುಪಿದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಪಾರದರ್ಶಕ ತನಿಖೆಗೆ ಆದೇಶಿಸಿ, ಕೈಗೊಂಡ ಕ್ರಮಗಳ ಬಗ್ಗೆ ಏಳು ದಿನಗಳ ಒಳಗಾಗಿ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಪತ್ರದಲ್ಲಿ ಸೂಚನೆ ನೀಡಲಾಗಿದೆ.

ಹಾಗೆಯೇ, ಮಹಿಳೆಯರ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸುವ ಮೂಲಕ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಲು ಮಹಿಳಾ ಆಯೋಗ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News